ಪ್ರೀತಿ ಮತ್ತು ಕರ್ತವ್ಯ, ಗಾಂಧಿ ಬಗ್ಗೆ ಯುಆರ್‌ಎ ಕವನ

By Web DeskFirst Published Oct 2, 2018, 9:47 AM IST
Highlights

'ಪ್ರೀತಿ ಮತ್ತು ಕರ್ತವ್ಯ' ...ರಾಷ್ಟ್ರಪಿತನಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಕವನದ ಮೂಲಕ ನಮನ ಸಲ್ಲಿಸಿದ್ದು ಹೀಗೆ...

- ಯು.ಆರ್.ಅನಂತಮೂರ್ತಿ

ಒಂದು ಬೆಟ್ಟದ ತಪ್ಪಲಲ್ಲಿ
ಗಾಂಧಿ ವಿಶ್ರಾಂತಿಗೇಂತ ತಂಗಿದ್ದಾಗ
ಅಕಸ್ಮಾತ್ ಪಡೆದ
ಅನಿರೀಕ್ಷಿತ ಉತ್ತರದಿಂದಾಗಿ ಅವರಿಗೆ
ಸಾಕ್ಷಾತ್ಕಾರವಾದ್ದನ್ನ
ನನ್ನ ಅಪ್ಪ ಹೇಳಿದ್ದರು

ಒಬ್ಬ ಹುಡುಗಿ, ಚಿಕ್ಕವಳು
ಕಂಕುಳಲ್ಲಿ ಹುಷಾರಾಗಿ ಅಕ್ಕರೆಯಿಂದ
ಒಂದು ಮಗುವನ್ನು ಎತ್ತಿಕೊಂಡು
ಹುಡುಗಾಟಿಕೆಗೆ ಬರಿಗಾಲಲ್ಲಿ ಲಂಗದ ನಿರಿ ಚಿಮ್ಮುತ್ತ
ಏದುಸಿರು ಬಿಡುತ್ತ
ಗುಡ್ಡ ಹತ್ತಿ ಬರುತ್ತಿದ್ದಾಳೆ, ಬಿಸಿಲು.
ನೋಡಕ್ಕೆ ಲಕ್ಷಣವಾಗಿದಾಳೆ.
ತೇಪೆ ಹಾಕಿದ ಲಂಗ ಉಟ್ಟಿದಾಳೆ.
ಬರಿ ಕತ್ತಿನ ಮೇಲೆ ಬಿದ್ದಿರೊ ಜಡೇಲಿ ಹೂ ಮುಡಿದಿದಾಳೆ.

ಮರದ ನೆರಳಲ್ಲಿ ಕೂತು ನೋಡುತ್ತಿದ್ದ
ಗಾಂಧಿಗೆ ಕನಿಕರ ಉಕ್ಕಿ ಕೆಳಗಿಳಿದು ಹೋಗಿ
ಕೇಳುತ್ತಾರೆ;
‘ಭಾರವೇನಮ್ಮ?’
ಹುಡುಗಿ ನಡೀತಾನೆ
ಒಂದು ಕಂಕುಳಿಂದ ಇನ್ನೊಂದಕ್ಕೆ ಅಕ್ಕರೆಯಿಂದ
ಹುಷಾರಾಗಿ, ಗೆಲುವಾಗಿ ಮಗೂನ್ನ ಬದಲಾಯಿಸಿ
ಹೇಳುತ್ತಾಳೆ;
‘ಇವನು ನನ್ನ ತಮ್ಮ.’

click me!