
ಬೆಂಗಳೂರು(ಜು.03): ಆಕೆ ಹುಟ್ಟಿನಿಂದಲೂ ಪ್ರಪಂಚವನ್ನೆ ಕಾಣದ ವಿಶೇಷ ಚೇತನೆ, ಆದರೆ ತಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ ಧೀರೆ. ದೃಷ್ಟಿ ಇಲ್ಲದ ಕೈಯಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಿಲ್ಲ ಎಂದುಕೊಂಡಿದ್ದವರಿಗೆ ಎಂಎಸ್ಸಿ ಸ್ನಾತ್ತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದು ಚಿನ್ನದ ಹುಡುಗಿ ಎನಿಸಿಕೊಂಡಿದ್ದಾಳೆ.
ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಡೀಮ್ಡ್ ವಿಶ್ವವಿದ್ಯಾಲಯದ 17 ನೇ ಘಟಿಕೋತ್ಸವದಲ್ಲಿ ಎಂಎಸ್ಸಿ ಡಿಜಿಟಲ್ ಸೊಸೈಟಿ ವಿಷಯದಲ್ಲಿ ವಿಶ್ವವಿದ್ಯಾಲಯಕ್ಕೆ ಟಾಪರ್ ಆಗಿ ವಿದ್ಯಾ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ. ಹುಟ್ಟಿನಿಂದಲು ಪ್ರಪಂಚವನ್ನು ಕಾಣದ ಈ ಛಲಗಾತಿ ಅಂದುಕೊಂಡಿದ್ದನ್ನು ಅನೇಕ ಸವಾಲುಗಳ ನಡುವೆ ಸಾಧಿಸಿ ತೋರಿಸಿದ್ದಾಳೆ. ನಿನ್ನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ IIIT ವಿವಿ ಆವರಣದಲ್ಲಿ ಆಯೋಜಿಸಲಾಗಿದ್ದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾ, ತನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಇನ್ನು ವಿದ್ಯಾಳ ಈ ಸಾಧನೆ ಅವರ ಕುಟುಂಬ ವರ್ಗದವರು ಹಾಗೂ ವಿವಿಗಷ್ಟೇ ಅಲ್ಲದೆ ಇಡೀ ಜಿಲ್ಲೆಯೇ ಕೊಂಡಾಡುವಂತಹದ್ದು. ಇನ್ನು ಹುಟ್ಟಿದಾಗಿನಿಂದಲು ಪ್ರಪಂಚ ಕಾಣದೆ ಬೆಳೆದ ವಿದ್ಯಾ, ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ನಿವಾಸಿಯಾಗಿದ್ದು, ಎಸ್'ಎಸ್'ಎಲ್ಸಿ ಶಿಕ್ಷಣವನ್ನು ಅತ್ತಿಬೆಲೆ ಪಬ್ಲಿಕ್ ಶಾಲೆಯಲ್ಲಿ ಮುಗಿಸಿ ನಂತರ ಕ್ರೈಸ್ಟ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಬಿಸಿಎ ಪದವಿ ಪಡೆದ ಬಳಿಕ ಐಐಟಿ-ಬಿ ನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ರು. ವಿದ್ಯಾ ಸಾಧನೆಗೆ ಪೋಷಕರು ಹಾಗೂ ಕಾಲೇಜಿನ ಆಡಳಿತ ಮಂಡಳಿಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ , ವಿಶೇಷ ಚೇತನೆ ಆಗಿರುವ ವಿದ್ಯಾ ಇಂತಹ ಸಾಧನೆ ಮಾಡಿರುವುದು ನಿಜಕ್ಕು ನಮ್ಮ ರಾಜ್ಯಕ್ಕೆ ಹೆಮ್ಮೆ ತರುವಂತಹ ವಿಷಯ. ತನ್ನಂತಿರುವ ಅಂಧರಿಗಾಗಿ ಆಧುನಿಕ ತಂತ್ರಜ್ಞಾನದ ಶಿಕ್ಷಣ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಸಹಕಾರ ನೀಡಬೇಕು ಎಂಬುದು ದಿವ್ಯಾಳ ಆಶಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.