ಗೌರಿ ಹಬ್ಬಕ್ಕೆ ರಮ್ಯಾಗೆ ಆಹ್ವಾನ ಕೊಟ್ಟ ಬಿಜೆಪಿ

By Web DeskFirst Published 12, Sep 2018, 2:08 PM IST
Highlights

ಬಿಜೆಪಿ ಕಾರ್ಯಕರ್ತರು ಮಾಜಿ ಸಂಸದೆ ರಮ್ಯಾಗೆ ಆಹ್ವಾನ ನೀಡಿದ್ದಾರೆ. ಗೌರಿ ಗಣೇಶ ಹಬ್ಬದ ಈ ಸಂದರ್ಭದಲ್ಲಿ ಮಂಡ್ಯಕ್ಕೆ ಹಬ್ಬಕ್ಕೆ ಆಗಮಿಸುವಂತೆ ಬಾಗೀನ ಕಳುಹಿಸಿದ್ದಾರೆ. 

ಮಂಡ್ಯ :  ಮಾಜಿ ಸಂಸದೆ ರಮ್ಯಾಗೆ ಬಿಜೆಪಿ ಕಾರ್ಯಕರ್ತರು ಗೌರಿ ಗಣೇಶ ಹಬ್ಬದ ಪ್ರಯುಕ್ತ  ಬಾಗೀನ ಕಳುಹಿಸುವ ಮೂಲಕ ತವರಿಗೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ಬಾಗೀನದ ಜೊತೆಗೆ ಹೂವು, ಬಳೆ ಹಾಗೂ ತೆಂಗಿನ ಕಾಯಿಯನ್ನು ಕಳಿಹಿಸಿಕೊಡಲಾಗಿದೆ. 

ಪೋಸ್ಟ್ ಮೂಲಕ ರಮ್ಯಾಗೆ ಮಂಡ್ಯ ಬಿಜೆಪಿ ಕಾರ್ಯಕರ್ತರು ಬಾಗೀನ ಕಳುಹಿಸಿದ್ದು, ಮಾಜಿ ಸಂಸದೆ ತಮ್ಮ ತವರನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಅವರಿಗೆ ತವರು ಮನೆ ಮಂಡ್ಯದ ನೆನಪಾಗಲಿ ಎಂದು ಬಾಗೀನ ಕಳುಹಿಸುತ್ತಿರುವುದಾಗಿ ಹೇಳಿದ್ದಾರೆ. 

ಕಳೆದ ವಿಧಾನ ಸಭೆ ಹಾಗೂ ನಗರಸಭೆ ಚುನಾವಣೆ ಎರಡರಲ್ಲಿಯೂ ಕೂಡ ರಮ್ಯಾ ಮತ ಚಲಾಯಿಸಲು ಆಗಮಿಸದ ಕಾರಣ ಮಂಡ್ಯದ ನೆನಪಾಗಲಿ ಎಂದು ಹೇಳಿದ್ದಾರೆ. ಅಲ್ಲದೇ ಗೌರಿ, ಗಣೇಶ ಹಬ್ಬಕ್ಕಾದರೂ ತವರಿಗೆ ಆಗಮಿಸಲಿ ಎಂದು ಈ ಮೂಲಕ ಬಿಜೆಪಿ ಕಾರ್ಯಕರ್ತರು ಟಾಂಗ್ ಕೊಟ್ಟಿದ್ದಾರೆ. 

ತವರು ಮರೆತಿರುವ ತಂಗಿಯು ಇನ್ನಾದರೂ ಇಲ್ಲಿಗೆ ಬಂದು ಜನರ ಕಷ್ಟಕ್ಕೆ ಸ್ಪಂದಿಸಲಿ. ಕಳೆದ ಎರಡು ವರ್ಷಗಳಿಂದ ಅವರು ಮಂಡ್ಯದಿಂದ ಕಣ್ಮರೆಯಾಗಿದ್ದಾರೆ. ಈಗಲೂ ಬಾರದೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಂದರೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

Last Updated 19, Sep 2018, 9:24 AM IST