
ಲಖನೌ(ಮಾ.11): ಉತ್ತರ ಪ್ರದೇಶದಲ್ಲಿ ಗೆದ್ದಿದ್ದೇವೆ ಎಂಬುದಷ್ಟೇ ಬಿಜೆಪಿಗೆ ಈ ಬಾರಿ ಸಂತೋಷದ ವಿಷಯವಲ್ಲ, ತನ್ನ ಸಾಂಪ್ರದಾಯಿಕ ವಿರೋಧಿಯಾಗಿರುವ ಮುಸ್ಲಿಮರ ಹೃದಯವನ್ನೂ ಗೆದ್ದಿದ್ದೇವೆ ಎಂಬುದು ಆ ಪಕ್ಷಕ್ಕೆ ದುಪ್ಪಟ್ಟು ಸಂತೋಷ ತಂದಿದೆ. ಹೌದು, ಉತ್ತರ ಪ್ರದೇಶದಲ್ಲಿ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಸಿದೆ.
ಅಚ್ಚರಿಯ ಸಂಗತಿಯೆಂದರೆ, ಬಿಜೆಪಿಯವರು ಯಾವುದೇ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡಿರಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ ಹಾಗೂ ಬಿಎಸ್‌ಪಿಯಿಂದ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಆದರೂ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಹಿಂದೂ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಮೂಲಕ ಬಿಜೆಪಿ ವಿಜಯದ ನಗೆ ಬೀರಿದೆ. ಇದಕ್ಕೆ ಕಾರಣ- ಮುಸ್ಲಿಂ ಮಹಿಳೆಯರು ಬಿಜೆಪಿಗೆ ದೊಡ್ಡ ಸಂಖ್ಯೆಯಲ್ಲಿ ಮತ ಹಾಕಿರುವುದು ಎನ್ನಲಾಗುತ್ತಿದೆ.
ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರವು ಮುಸ್ಲಿಂ ಸಮುದಾಯದಲ್ಲಿರುವ ತ್ರಿವಳಿ ತಲಾಖ್ ಪದ್ಧತಿಯನ್ನು ತಾನು ವಿರೋಧಿಸುವುದಾಗಿ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಅದರ ಜೊತೆಗೆ ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರನ್ನು ದ್ವಿತೀಯ ದರ್ಜೆಯ ಪ್ರಜೆಯಂತೆ ನೋಡುವುದನ್ನು ನಿಲ್ಲಿಸಬೇಕು, ಆ ಸಮುದಾಯದ ಮಹಿಳೆಯರಿಗೆ ಸಮಾನ ಹಕ್ಕುಗಳು ಸಿಗಬೇಕು, ಅವರು ಉದ್ಯೋಗ ಪಡೆದು ತಮ್ಮ ಕಾಲಿನ ಮೇಲೆ ನಿಂತುಕೊಳ್ಳಬೇಕು, ಇದನ್ನು ಬಿಜೆಪಿ ಬೆಂಬಲಿಸುತ್ತದೆ ಎಂದು ಪ್ರಧಾನಿ ಮೋದಿ ಪ್ರಚಾರ ಮಾಡಿದ್ದರು. ಇದು ಮುಸ್ಲಿಂ ಸಮುದಾಯದಲ್ಲಿ ಪುರುಷರ ವಿರೋಧಕ್ಕೆ ಕಾರಣವಾಗಿದ್ದರೂ ಮಹಿಳೆಯರ ಮನಸ್ಸನ್ನು ಗೆದ್ದಿದೆ. ವಾಸ್ತವವಾಗಿ ಚುನಾವಣೆಗೂ ಮೊದಲೇ ಮುಸ್ಲಿಂ ಸಮುದಾಯದ ಅವಿವಾಹಿತ ಯುವತಿಯರು ಬಿಜೆಪಿಯನ್ನು ಬಹಿರಂಗವಾಗಿ ಬೆಂಬಲಿಸಿ ಮಾತನಾಡುತ್ತಿದ್ದರು. ಅದು ಈಗ ಮತಗಳ ರೂಪದಲ್ಲಿ ಬಿಜೆಪಿಗೆ ಹರಿದಿದೆ ಎಂದು ಲಖನೌನ ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷೆ ಶಾಇಸ್ತಾ ಅಂಬರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.19ರಷ್ಟಿದೆ. ಇದು ದಲಿತರ ನಂತರ ರಾಜ್ಯದ ಎರಡನೇ ದೊಡ್ಡ ಸಮುದಾಯ. ಹೀಗಾಗಿ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕವಾಗುತ್ತವೆ. 2014ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಶೇ.10ರಷ್ಟು ಮುಸ್ಲಿಂ ಮತಗಳು ದೊರೆತಿದ್ದವು ಎನ್ನಲಾಗಿದೆ.
ದಾದ್ರಿಯಲ್ಲಿ ಬಿಜೆಪಿ ಗೆಲುವು:
2013ರಲ್ಲಿ ಗ್ರೇಟರ್ ನೋಯ್ಡಾ ಬಳಿಯ ದಾದ್ರಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ದನದ ಮಾಂಸ ಇರಿಸಿಕೊಂಡಿದ್ದ ಕಾರಣಕ್ಕೆ ಹಿಂದೂ ಸಂಘಟನೆಗಳು ಆತನನ್ನು ಹತ್ಯೆ ಮಾಡಿದವು ಎಂದು ದೊಡ್ಡ ವಿವಾದವಾಗಿತ್ತು. ನಂತರ ರಾಜ್ಯಾದ್ಯಂತ ಗಲಭೆಯೇರ್ಪಟ್ಟು ವ್ಯಾಪಕ ಹಿಂಸಾಚಾರ ನಡೆದಿತ್ತು. ಈ ಕ್ಷೇತ್ರ ಹಾಗೂ ಇದರ ಪಕ್ಕದ ಕ್ಷೇತ್ರದಲ್ಲೂ ಈ ಬಾರಿ ಬಿಜೆಪಿ ಜಯ ಗಳಿಸಿದೆ. ದಾದ್ರಿಯಲ್ಲಿ ಬಿಜೆಪಿ ಅಭ್ಯರ್ಥಿ 80 ಸಾವಿರ ಮತಗಳ ಭಾರಿ ಅಂತರದಿಂದ ಗೆದ್ದಿದ್ದಾರೆ.
ಇನ್ನು 2015ರಲ್ಲಿ ಮತೀಯ ಗಲಭೆಯ ಹಿನ್ನೆಲೆಯಲ್ಲಿ 60 ಜನರ ಸಾವನ್ನು ಕಂಡಿದ್ದ ಮುಜರ್‌ನಗರ ಜಿಲ್ಲೆಯ ಮುಸ್ಲಿಂ ಬಾಹುಳ್ಯದ 6 ಕ್ಷೇತ್ರಗಳಲ್ಲೂ ಬಿಜೆಪಿ ಭಾರಿ ಗೆಲುವು ದಾಖಲಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.