
ಕೋಲ್ಕತ್ತಾ(ಆ.11): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಬೇರು ಸಮೇತ ಕಿತ್ತು ಹಾಕಲು ನಾವು ಇಲ್ಲಿ ಬಂದಿದ್ದೇವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗುಡುಗಿದ್ದಾರೆ.
ಇಂದು ಕೋಲ್ಕತಾದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಶೀಘ್ರದಲ್ಲೇ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯಾಗಲಿದೆ. ವೋಟ್ ಬ್ಯಾಂಕ್ ಗಾಗಿ ಮಮತಾ ಬ್ಯಾನರ್ಜಿ ಎನ್ಆರ್ ಸಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಮಮತಾ ಸರ್ಕಾರವನ್ನು ಕಿತ್ತೊಗೆಯುವ ಕಾಲ ಕೂಡಿ ಬಂದಿದೆ ಎಂದು ಶಾ ಹರಿಹಾಯ್ದರು.
ದೇಶ ಮೊದಲು ಎಂಬುದು ಬಿಜೆಪಿ ನೆಚ್ಚಿಕೊಂಡ ಸಿದ್ಧಾಂತ. ವೋಟ್ ಬ್ಯಾಂಕ್ ಗಾಗಿ ಕೀಳು ರಾಜಕಾರಣ ಮಾಡುವುದನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದು ಶಾ ಹೇಳಿದರು. ಎನ್ಆರ್ ಸಿ ಮೂಲಕ ಎಲ್ಲಾ ಅಕ್ರಮ ವಲೆಸಿಗರನ್ನು ದೇಶದಿಂದ ಹೊರ ಹಾಕುವುದು ಶತಸಿದ್ಧ ಎಂದು ಶಾ ಭರವಸೆ ನೀಡಿದರು. ಎನ್ಆರ್ ಸಿಗೆ ನೀವು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ನಾವು ಅದನ್ನು ನಿಲ್ಲಿಸುವುದಿಲ್ಲ ಎಂದು ಮಮತಾಗೆ ಖಡಕ್ ಸಂದೇಶ ರವಾನಿಸಿದರು.
ಈ ಮುನ್ನ ಪಶ್ಚಿಮ ಬಂಗಾಳದಲ್ಲಿ ಪ್ರತಿನಿತ್ಯ ರವೀಂದ್ರನಾಥ್ ಠಾಗೋರ್ ಅವರ ಸಂಗೀತ ಆಲಿಸುತ್ತಿದ್ದೆವು, ಆದರೆ ಈಗ ಕೇವಲ ಬಾಂಬ್ ಸ್ಫೋಟದ ಸದ್ದನ್ನು ಮಾತ್ರ ಕೇಳುತ್ತಿದ್ದೇವೆ ಎಂದು ದೀದಿ ಸರ್ಕಾರದ ವಿರುದ್ಧ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದರು.
ಮಮತಾ ಬ್ಯಾನರ್ಜಿ ಬಾಂಗ್ಲಾ ನುಸುಳುಕೋರರನ್ನು ರಕ್ಷಿಸುತ್ತಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಈ ವಿಚಾರವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಿಲ್ಲ. ಕಾಂಗ್ರೆಸ್‌ನ ಮತ ಬ್ಯಾಂಕ್ ರಾಜಕಾರಣವೇ ಇವೆಲ್ಲಕ್ಕೂ ಕಾರಣ ಎಂದು ಅಮಿತ್ ಶಾ ಆರೋಪಿಸಿದರು.
ಅಮಿತ್ ಶಾ ಆಗಮನವನ್ನು ವಿರೋಧಿಸಿ ಬಿಜೆಪಿಯನ್ನು ಬಾಂಗ್ಲಾ ವಿರೋಧಿ ಎಂದು ಎಲ್ಲೆಡೆ ಭಿತ್ತಿಚಿತ್ರಗಳನ್ನು ಹಾಕಿದ್ದರ ಕುರಿತು ಮಾತನಾಡಿದ ಶಾ, 'ಬಿಜೆಪಿಯ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಖುದ್ದು ಬೆಂಗಾಲಿಯಾಗಿರುವಾಗ ಬಿಜೆಪಿ ಹೇಗೆ ಬಾಂಗ್ಲಾ ವಿರೋಧಿಯಾಗುತ್ತದೆ? ನಾವು ಬಾಂಗ್ಲಾ ವಿರೋಧಿಗಳಲ್ಲ, ಮಮತಾ ವಿರೋಧಿಗಳು' ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.