
ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಪ್ಪನಾಣೆಗೂ ಮತ್ತೆ ಪ್ರಧಾನಿಯಾಗುವುದಿಲ್ಲ. ತಿಪ್ಪರಲಾಗ ಹೊಡೆದರೂ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ ಯುವ ಕಾಂಗ್ರೆಸ್ನ ಸರ್ವ ಸದಸ್ಯರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಪ್ರಜಾಪ್ರಭುತ್ವವನ್ನೇ ನಾಶ ಮಾಡಲು ಹೊರಟ ಪಕ್ಷವಾಗಿದೆ. ಇದು ದೇಶದ ಜನತೆಗೆ ಅರ್ಥವಾಗಿದೆ. ಹೀಗಾಗಿ ಬಿಜೆಪಿಗೆ ಮತ್ತೆ ಅಧಿಕಾರವನ್ನು ದೇಶದ ಜನತೆ ನೀಡುವುದಿಲ್ಲ. ತಿಪ್ಪರಲಾಗ ಹಾಕಿದರೂ, ಅವರಪ್ಪನಾಣೆಗೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ಹೇಳಿದರು.
ಈ ಲೋಕಸಭಾ ಚುನಾವಣೆಯಲ್ಲಿ ಯುವಕರ ಪಾತ್ರ ಬಹಳ ಪ್ರಮುಖವಾದದ್ದು. ಬಿಜೆಪಿ ಸದಾ ಯುವ ಮತದಾರರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತದೆ. ಹೀಗಾಗಿ, ಬಿಜೆಪಿ ಹಾಗೂ ನರೇಂದ್ರ ಮೋದಿ ಹೇಗೆ ಈ ದೇಶಕ್ಕೆ ಮಾರಕವಾಗಿದ್ದಾರೆ ಎಂಬುದನ್ನು ಯುವಕರಿಗೆ ಮನದಟ್ಟು ಮಾಡಿಕೊಡುವ ಕೆಲಸವನ್ನು ಯುವ ಕಾಂಗ್ರೆಸ್ ಮಾಡಬೇಕು. ತನ್ಮೂಲಕ ಯುವಕರ ಮುಗ್ಧತೆಯನ್ನು ಬಳಸಿಕೊಂಡು ಮತ ಲೂಟಿ ಮಾಡುವ ಬಿಜೆಪಿಯ ಷಡ್ಯಂತ್ರ ಈ ಬಾರಿಯ ಚುನಾವಣೆಯಲ್ಲಿ ಯಶಸ್ವಿಯಾಗದಂತೆ ತಡೆಯಬೇಕು ಎಂದರು.
ಅನಂತಕುಮಾರ್ ಹೆಗಡೆ ಜೈಲಿಗೆ ಹಾಕುತ್ತಿದ್ದೆ: ಬಿಜೆಪಿ ಹಾಗೂ ಆ ಪಕ್ಷದ ನಾಯಕರಿಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಂವಿಧಾನವನ್ನೇ ಬದಲಿಸುವುದಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ನೀಡುತ್ತಾರೆ. ನಾನೇನಾದರೂ ಪ್ರಧಾನಿಯಾಗಿದ್ದರೆ ಇಂತಹ ಹೇಳಿಕೆ ನೀಡಿದ ಅನಂತಕುಮಾರ ಹೆಗಡೆಯನ್ನು ಜೈಲಿಗೆ ತಳ್ಳುತ್ತಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.
ಲೋಕಸಭೆ ಚುನಾವಣೆಗೆ ಯುವ ಕಾಂಗ್ರೆಸ್ ಸರ್ವ ಸಿದ್ಧತೆ ನಡೆಸಬೇಕು. ಸದಸ್ಯತ್ವ ನೋಂದಣಿ ಹೆಚ್ಚಿಸಬೇಕು. ಕಾರ್ಯಕರ್ತರ ಸಂಘಟನೆಯನ್ನು ಉತ್ತಮಪಡಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. ಸಮಾವೇಶದಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀನಿವಾಸ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ಎಐಸಿಸಿ ಕಾರ್ಯದರ್ಶಿ ಕೇಶವ್ ಚಂದ್, ನಾಯಕರಾದ ಸಂದೀಪ್ ವಾಲ್ಮೀಕಿ, ಕೃಷ್ಣ ಆಳ್ವಾರ್ ಮೊದಲಾದವರು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ