
ಬೆಂಗಳೂರು : ಪೂಂಛ್ ಸೇರಿದಂತೆ ಭಾರತಾಂಬೆಯ ಮುಕುಟ ಪ್ರಾಯ ಹಾಗೂ ಭಾರತೀಯರ ಪ್ರತಿಷ್ಠೆಗೆ ದ್ಯೋತಕವಾಗಿರುವ ಜಮ್ಮು-ಕಾಶ್ಮೀರದ ಬಹುತೇಕ ಭಾಗ ಇಂದು ಭಾರತದಲ್ಲೇ ಉಳಿದಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ‘ಡಕೋಟಾ ಡಿ.ಸಿ.3’ ಯುದ್ಧ ವಿಮಾನ!
ಹೌದು, ಸ್ವತಂತ್ರ ಭಾರತದ ಮೊದಲ ಯುದ್ಧ ಗೆಲ್ಲಿಸಿದ ಹಾಗೂ ಜಮ್ಮು-ಕಾಶ್ಮೀರದ ಪ್ರಮುಖ ಭಾಗ ಭಾರತದ ಭೂಪಟದಲ್ಲೇ ಉಳಿಯುವಂತೆ ಮಾಡಿದ ಮತ್ತು ಮೊದಲ ಗೆಲುವಿನಿಂದ ಇಡೀ ದೇಶಕ್ಕೆ ರೋಮಾಂಚನ ಉಂಟುಮಾಡಿದ್ದ ಗತಕಾಲದ ಹೀರೋ ‘ಡಕೋಟಾ ಡಿ.ಸಿ.3’ ವಿಮಾನ. ಕಾಶ್ಮೀರಕ್ಕಾಗಿ 1947ರಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ದೆಹಲಿಯಿಂದ ಕಾಶ್ಮೀರದ ಗಡಿ ಭಾಗಕ್ಕೆ ಸಿಖ್ ರೆಜಿಮೆಂಟ್‌ನ ಸಾಹಸಿ ಯೋಧರನ್ನು ಹೊತ್ತೊಯ್ದಿತ್ತು ಡಕೋಟಾ ಡಿ.ಸಿ.3 ವಿಪಿ 905 ಯುದ್ಧ ವಿಮಾನ.
ಈ ವಿಮಾನದಿಂದ ಅಂದು ಕಾಶ್ಮೀರದ ಗಡಿಭಾಗದಲ್ಲಿ ಇಳಿದಿದ್ದ ಸಿಖ್ ರೆಜಿಮೆಂಟ್‌ನ ಯೋಧರು ನುಗ್ಗಿ ಬರುತ್ತಿದ್ದ ಪಾಕಿಸ್ತಾನದ ವಜೀರಿಸ್ಥಾನ್ ಮೂಲದ ಲಷ್ಕರ್ ಹಾಗೂ ಪಶ್ತೂನ್ ಆದಿವಾಸಿ ಉಗ್ರರನ್ನು ಹಾಗೂ ಉಗ್ರರ ವೇಷದಲ್ಲಿದ್ದ ಪಾಕಿಸ್ತಾನಿ ಸೇನಾ ಪಡೆಯ ಯೋಧರನ್ನು ಯಶಸ್ವಿಯಾಗಿ ತಡೆದು ನಿಲ್ಲಿಸಿದ್ದರು. ತನ್ಮೂಲಕ ಕಾಶ್ಮೀರ ಭಾರತದ ಭೂಪಟದಲ್ಲೇ ಉಳಿಯುವಂತೆ ಮಾಡಿದ್ದರು.
ಹೀಗೆ, ಭಾರತಕ್ಕೆ ಕಾಶ್ಮೀರವನ್ನು ಉಳಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಕೋಟಾ ಡಿ.ಸಿ.3’ ವಿಪಿ-905 ಇದೀಗ ಯಲಹಂಕದ ಬಾನಂಗಳದಲ್ಲಿ ವಿಜೃಂಭಿಸಲಿದೆ. ಏರ್‌ಶೋದ ಮೊದಲ ದಿನವೇ ಡಕೋಟಾ ವಿಮಾನದ ಹಾರಾಟ ನಿಗದಿಯಾಗಿದೆ.
ಬರೋಬ್ಬರಿ ಏಳು ದಶಕಗಳ ಹಳೆಯ ವಿಮಾನ ಡಕೋಟಾ ಡಿ.ಸಿ.3’ ವಿಪಿ-905 ವಿಮಾನವನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸಂಪೂರ್ಣ ಅಭಿವೃದ್ಧಿಪಡಿಸಿ ‘ಪರಶುರಾಮ’ ಹೆಸರಿನಲ್ಲಿ ಭಾರತೀಯ ವಾಯುಸೇನೆಗೆ ಕಾಣಿಕೆ ನೀಡಿದ್ದಾರೆ. ಈ ವಿಮಾನ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಫೆ.20ರಿಂದ ಫೆ.24ರವರೆಗೆ ‘ಏರೋ ಇಂಡಿಯಾ’ ಪ್ರದರ್ಶನದಲ್ಲಿ ತನ್ನ ಗತಕಾಲದ ವೈಭವ ಮೆರೆಯಲು ಸಜ್ಜಾಗಿದೆ. ಹೀಗಾಗಿ ಭಾರತಕ್ಕೆ ಮೊದಲ ಯುದ್ಧದ ಗೆಲುವಿನ ಸವಿ ತೋರಿಸಿದ ಅಪರೂಪದ ಯುದ್ಧ ವಿಮಾನವನ್ನು ಕಣ್ತುಂಬಿಕೊಳ್ಳಲು ಇಚ್ಛಿಸುವವರು ಯಲಹಂಕ ವಾಯುನೆಲೆಯತ್ತ ಹೆಜ್ಜೆ ಹಾಕಬಹುದು.
ಏರೋ ಇಂಡಿಯಾ ವೇದಿಕೆಯಲ್ಲಿ ಬಾನಂಗಳದಲ್ಲಿ ವಿಹರಿಸಿ ತನ್ನ ಗತವೈಭವದ ಮೆಲುಕು ತೋರಲು ‘ಡಕೋಟಾ ಡಿ.ಸಿ.3’ ಕೈಬೀಸಿ ಕರೆಯುತ್ತಿದೆ. ಜಮ್ಮು-ಕಾಶ್ಮೀರದ ಶ್ರೀನಗರವನ್ನು ಪಾಕಿಸ್ತಾನದ ಪಾಲಾಗದಂತೆ ತಡೆದ ಹಾಗೂ 1971ರಲ್ಲಿ ಪಾಕಿಸ್ತಾನದೊಂದಿಗೆ ಹೋರಾಟ ಮಾಡಿ ಬಾಂಗ್ಲಾದೇಶಕ್ಕೆ ವಿಮೋಚನೆ ಕೊಡಿಸಿದ ಐತಿಹಾಸಿಕ ಯುದ್ಧ ವಿಮಾನ ಕಣ್ತುಂಬಿಕೊಳ್ಳಲು ಇಚ್ಛಿಸುವವರು ‘ಏರೋ ಇಂಡಿಯಾ-2019’ ವೈಮಾನಿಕ ಪ್ರದರ್ಶನಕ್ಕೆ ಹೋಗಲೇಬೇಕು.
ವಾಯುಸೇನೆಗೆ ಕಾಣಿಕೆ ನೀಡಿದ ಆರ್‌ಸಿ
1947ರಿಂದ 1971ರವರೆಗೆ ನಾಲ್ಕು ದಶಕಗಳ ಕಾಲ ಭಾರತ ಮಾತೆಗೆ ಸೇವೆ ಸಲ್ಲಿಸಿದ್ದ ‘ಡಕೋಟಾ ಡಿ.ಸಿ.3’ ಯುದ್ಧ ವಿಮಾನ ಹಾರಾಟಕ್ಕೆ ಅಸಮರ್ಥವಾಗಿ ಗುಜರಿಗೆ ಸೇರಿತ್ತು. ಈ ವಿಮಾನ ಬ್ರಿಟನ್‌ನಲ್ಲಿರುವುದನ್ನು ಅರಿತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು 2011ರಿಂದ ಏಳು ವರ್ಷಗಳ ಕಾಲ ಅಲ್ಲೇ ಅದನ್ನು ದುರಸ್ತಿ ಮಾಡಿಸಿದರು. ನಂತರ ಬ್ರಿಟನ್‌ನಿಂದ ಒಂಬತ್ತು ದಿನಗಳ ಕಾಲ ಹಾರಾಟ ಮಾಡಿ ಕಳೆದ ವರ್ಷ ಭಾರತದ ನೆಲಕ್ಕೆ ಮುತ್ತಿಟ್ಟಈ ವಿಮಾನವನ್ನು ರಾಜೀವ್ ಚಂದ್ರಶೇಖರ್ ಅವರು 2018ರ ಫೆಬ್ರವರಿಯಲ್ಲಿ ಭಾರತೀಯ ವಾಯುಸೇನೆಗೆ (ಐಎಎಫ್) ಕಾಣಿಕೆಯಾಗಿ ಹಸ್ತಾಂತರಿಸಿದರು. ಈ ಮೂಲಕ ದೇಶದ ಸೇನೆ ಬಗ್ಗೆ ತಮಗಿರುವ ಗೌರವವನ್ನು ಮತ್ತೊಮ್ಮೆ ಸಾರಿದರು.
ಮತ್ತೊಂದು ವಿಶೇಷವೆಂದರೆ, ನಿವೃತ್ತ ಏರ್ ಕಮೋಡರ್ ಹಾಗೂ ರಾಜೀವ್ ಚಂದ್ರಶೇಖರ್ ಅವರ ತಂದೆಯವರೂ ಆದ ಎಂ.ಕೆ. ಚಂದ್ರಶೇಖರ್ ಡಕೋಟಾ ಯುದ್ಧ ವಿಮಾನವನ್ನು 6 ಸಾವಿರ ಗಂಟೆಗೂ ಹೆಚ್ಚು ಕಾಲ ಹಾರಾಟ ಮಾಡಿದ್ದರು. ತಾವು ಮಗುವಾಗಿದ್ದಾಗಿನಿಂದಲೂ ವಿಮಾನದೊಂದಿಗೆ ಇದ್ದ ವಿಶೇಷ ಬಾಂಧವ್ಯ, ತಮ್ಮ ತಂದೆಯವರ ಸೇವೆ ಮತ್ತು ವಾಯುಸೇನೆಗೆ ಗೌರವ ಸಲ್ಲಿಸಲು ಡಕೋಟಾ ವಿಮಾನವನ್ನು ಪುನಃ ವಾಯುಸೇನೆಯ ಮಡಿಲು ತುಂಬಿದ್ದಾರೆ ರಾಜೀವ್ ಚಂದ್ರಶೇಖರ್.
ಪಾಕ್ ಯುದ್ಧ ಗೆಲ್ಲಿಸಿದ್ದ ‘ಪರಶುರಾಮ’
ಕಾಶ್ಮೀರಕ್ಕಾಗಿ 1947ರಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ಸಿಖ್ ರೆಜಿಮೆಂಟ್‌ಗಳನ್ನು ಗಡಿ ಭಾಗಕ್ಕೆ ಹೊತ್ತೊಯ್ದ ಸಾಧನೆ ಮಾಡಿದ್ದ ಯುದ್ಧ ವಿಮಾನ ‘ಡಕೋಟಾ’. ಈ ಮೂಲಕ ಯುದ್ಧ ಪ್ರದೇಶದಲ್ಲಿ ಇಳಿದ ದೇಶದ ಪ್ರಪ್ರಥಮ ವಿಮಾನ ಎಂದೂ ಹೆಸರು ಪಡೆದಿದೆ. ಯುದ್ಧ ವಿಮಾನವನ್ನು ಸಮಗ್ರವಾಗಿ ಪುನರ್ ಅಭಿವೃದ್ಧಿಪಡಿಸಿದ ಬಳಿಕ ಇದೀಗ ಭಾರತೀಯ ವಾಯುಸೇನೆ ಹಾಗೂ ರಾಜೀವ್ ಚಂದ್ರಶೇಖರ್ ಅವರು ಡಕೋಟಾ -ಡಿ.ಸಿ.3 ಯುದ್ಧವಿಮಾನಕ್ಕೆ ‘ಪರಶುರಾಮ’ ಎಂದು ಮರು ನಾಮಕರಣ ಮಾಡಿದ್ದಾರೆ.
ಪಾಕಿಸ್ತಾನ ಹಾಗೂ ಬಾಂಗ್ಲಾ ಯುದ್ಧದ ಸಂದರ್ಭದಲ್ಲಿ ಬಾಂಬರ್ ಏರ್‌ಕ್ರಾಫ್ಟ್ ಆಗಿಯೂ ಇದೇ ಡಕೋಟಾ ಗುರುತಿಸಿಕೊಂಡಿತ್ತು. ಏರ್ ಕಮಾಂಡರ್ ಮೆಹರ್ ಸಿಂಗ್ ಸಮುದ್ರ ಮಟ್ಟದಿಂದ 11 ಸಾವಿರ ಅಡಿ ಎತ್ತರದಲ್ಲಿರುವ ಕಾಶ್ಮೀರದ ಲೇಹ್‌ನಲ್ಲಿ ಡಕೋಟಾವನ್ನು ಇಳಿಸುವ ಮೂಲಕ ವಿಮಾನದ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಪ್ರದರ್ಶಿಸಿದ್ದರು. 1947ರಿಂದ 1971ರವರೆಗೆ ಭಾರತೀಯ ವಾಯುಸೇನೆಯಲ್ಲಿ ಈ ವಿಮಾನ ಕಾರ್ಯ ನಿರ್ವಹಿಸಿತ್ತು.
ಡಕೋಟಾ ಇತಿಹಾಸ
ಅಮೆರಿಕದ ಡಗ್ಲಸ್ ಏರ್‌ಕ್ರಾಫ್ಟ್ ಕಂಪನಿ 1935ರಲ್ಲಿ ಈ ವಿಮಾನ ವಿನ್ಯಾಸ ಮಾಡಿ ಉತ್ಪಾದನೆ ಆರಂಭಿಸಿತ್ತು. 27 ಮಂದಿಯನ್ನು ಹೊತ್ತೊಯ್ಯ ಬಲ್ಲ ಸಾಮರ್ಥ್ಯದ ಈ ವಿಮಾನ ಗಂಟೆಗೆ 346 ಕಿ.ಮೀ. ವೇಗದಲ್ಲಿ ಹಾರಬಲ್ಲದು.
ಡಕೋಟಾ ವಿಮಾನದ ಇತಿಹಾಸವನ್ನು ನಿವೃತ್ತ ಏರ್ ಕಮೋಡರ್ ಎಂ.ಕೆ. ಚಂದ್ರಶೇಖರ್ ಹಂಚಿಕೊಂಡಿದ್ದು, ಮೊದಲ ಬಾರಿಗೆ ಡಾರ್ನರ್ ಡಗ್ಲಸ್ 1ನೇ ಮಹಾಯುದ್ಧದ ಬಳಿಕ ಯುದ್ಧ ವಿಮಾನದ ಅಗತ್ಯವನ್ನು ಅರಿತು ಡಕೊಟಾ ಡಿ.ಸಿ.1 ವಿಮಾನ ರೂಪಿಸಿದರು. 12 ಜನ ಪ್ರಯಾಣಿಸಬಹುದಾದ 2 ಇಂಜಿನ್‌ನ ಈ ವಿಮಾನ ಜುಲೈ 1, 1933ರಂದು ಮೊದಲ ಬಾರಿಗೆ ಹಾರಾಟ ಮಾಡಿತ್ತು. ಅದರ ಬೆನ್ನಲ್ಲೇ 12ರ ಬದಲಿಗೆ 14 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ, 2,500 ಕಿ.ಮೀ. ದೂರ ಹಾರಬಲ್ಲ, ರಾತ್ರಿ ವೇಳೆಯೂ ಹಾರಾಟ ಮಾಡಬಲ್ಲ ಡಿ.ಸಿ-2 (ಡ್ರಗ್ಲರ್ಸ್ ಕ್ಯಾರಿಯರ್ -2) ವಿನ್ಯಾಸ ಆರಂಭಿಸಿದರು. ಜತೆಗೆ ಸೆಪ್ಟೆಂಬರ್-ಅಕ್ಟೋಬರ್ 1934ರಲ್ಲಿ ಯಶಸ್ವಿಯಾಗಿ ಹಾರಾಟವನ್ನೂ ನಡೆಸಿತ್ತು. ಮರು ವರ್ಷದಲ್ಲೇ ಡಿ.ಸಿ-3 ವಿನ್ಯಾಸ ಶುರುವಾಗಿ ಯಶಸ್ವಿಯೂ ಆಯಿತು. 20 ಮಂದಿ ಆರಾಮವಾಗಿ ಹಾಗೂ 27 ಟ್ರೂಫ್ಸ್‌ಗಳಿಗೆ ಅನಾಯಾಸವಾಗಿ ಜಾಗ ಕಲ್ಪಿಸುವಂತೆ ಇದನ್ನು ವಿನ್ಯಾಸ ಮಾಡಲಾಗಿತ್ತು ಎಂದು ತಿಳಿಸಿದರು.
ಕ್ರಮೇಣ ಭಾರತೀಯ ವಾಯುಸೇನೆಗೆ 10 ಡಕೋಟಾ ಡಿ.ಸಿ.3 ವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. ಇದರಲ್ಲಿ ಒಂದು ಅನಾಹುತಕ್ಕೆ ತುತ್ತಾಗಿದ್ದು ಬಿಟ್ಟರೆ ಒಂಬತ್ತು ವಿಮಾನ ಕೊನೆಯವರೆಗೂ ಸೇವೆ ಸಲ್ಲಿಸಿತು.
ಆರ್‌ಸಿ 7 ವರ್ಷದ ಕನಸು ನನಸು
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು 2011ರಲ್ಲಿ ಡಕೋಟಾ ಡಿ.ಸಿ.3 ವಿಮಾನ ಲಂಡನ್‌ನಲ್ಲಿರುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ಏಳು ವರ್ಷಗಳ ಕಾಲ ಅದನ್ನು ಸ್ವಂತ ಹಣದಿಂದ ಅಭಿವೃದ್ಧಿಪಡಿಸಿದರು. ಲಂಡನ್‌ನಿಂದ 9 ದಿನಗಳ ಕಾಲ ಹಾರಾಟ ನಡೆಸಿ ದೇಶಕ್ಕೆ ಬಂದ ವಿಮಾನವನ್ನು 2018ರಲ್ಲಿ ವಾಯುಸೇನೆಗೆ ಗೌರವದ ಕಾಣಿಕೆಯಾಗಿ ಹಸ್ತಾಂತರ ಮಾಡಿದರು. ಬಳಿಕ ವಾಯುಸೇನೆ ದಿನದ ಅಂಗವಾಗಿ ಮೊದಲ ಹಾರಾಟ ಪ್ರದರ್ಶನವನ್ನೂ ಡಕೋಟಾ ಯಶಸ್ವಿಯಾಗಿ ನೀಡಿತು. ಈ ಮೂಲಕ ರಾಜೀವ್ ಚಂದ್ರಶೇಖರ್ ಅವರ ಏಳು ವರ್ಷಗಳ ಕನಸು ನನಸಾದಂತಾಯಿತು.
ನನ್ನ ತಂದೆ ಸುಮಾರು ಆರು ಸಾವಿರ ಗಂಟೆಗಳ ಕಾಲ ಹಾರಾಟ ಮಾಡಿದ ವಿಮಾನವಿದು. ನನ್ನ ಬಾಲ್ಯದ ಅನೇಕ ಅನುಭವಗಳು ಇದರೊಟ್ಟಿಗೆ ಹಾಗೂ ಭಾರತೀಯ ವಾಯುಸೇನೆಯ ಜೊತೆ ಹಾಸುಹೊಕ್ಕಾಗಿವೆ. ನನ್ನ ತಂದೆ ಹಾಗೂ ವಾಯುಸೇನೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ದೇಶದ ಹೆಮ್ಮೆಯಾಗಿರುವ ಡಕೋಟಾ ಡಿಸಿ-3 ವಿಮಾನವನ್ನು ಅಭಿವೃದ್ಧಿಪಡಿಸಿ ವಾಯುಸೇನೆಗೆ ಹಸ್ತಾಂತರಿಸಿದ್ದೇನೆ. ಇದು ನನಗೆ ಹೆಮ್ಮೆಯ ವಿಷಯ ಮಾತ್ರವಲ್ಲ, ಭವಿಷ್ಯದಲ್ಲಿ ಹಲವು ಯುವಕರಿಗೆ ಇದು ಪ್ರೇರಣೆ ನೀಡಲಿದೆ. ಇತಿಹಾಸದ ಪುಟ ಸೇರಿದ್ದ ಡಕೋಟಾ ವಿಮಾನವನ್ನು ಪುನರ್ ನಿರ್ಮಾಣ ಮಾಡಲು 7 ವರ್ಷ ಹಿಡಿದಿತ್ತು. ಇಂಗ್ಲೆಂಡ್‌ನಿಂದ ಹೊರಟ 9 ದಿನಗಳ ನಂತರ ದೇಶಕ್ಕೆ ಆಗಮಿಸಿ ತನ್ನ ಗತಕಾಲದ ವೈಭವ ಸಾರುತ್ತಿದೆ.
ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ