ಶಾ ಮಾತು: ಡಿಸೆಂಬರ್‌ನಲ್ಲಿ ಬಿಜೆಪಿಗೆ ಹೊಸ ಅಧ್ಯಕ್ಷ, ಯಾರಾಗ್ತಾರೆ ನೂತನ ಸಾರಥಿ?

Published : Oct 18, 2019, 01:20 PM ISTUpdated : Oct 18, 2019, 01:53 PM IST
ಶಾ ಮಾತು: ಡಿಸೆಂಬರ್‌ನಲ್ಲಿ ಬಿಜೆಪಿಗೆ ಹೊಸ ಅಧ್ಯಕ್ಷ, ಯಾರಾಗ್ತಾರೆ ನೂತನ ಸಾರಥಿ?

ಸಾರಾಂಶ

ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದತಿಯಾಗಿ 70 ದಿನ ಕಳೆ¨ ಬಳಿಕ ಕಾಶ್ಮೀರ ಸಹಜ ಸ್ಥಿತಿಯತ್ತ ಧಾವಿಸುತ್ತಿದೆ. ಇದರ ಮಧ್ಯೆ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ, ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂಕೋರ್ಟ್‌ ತೀರ್ಪು ಕಾಯ್ದಿರಿಸಿದೆ, ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಈ ಎಲ್ಲದರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಂಡಿಯಾ ಟು ಡೇ ಮತ್ತು ರಿಪಬ್ಲಿಕ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

* 370 ರದ್ದತಿ ಹಠಾತ್‌ ತೆಗೆದುಕೊಂಡ ನಿರ್ಧಾರವೇ?

ಆರ್ಟಿಕಲ್‌ 370ಯನ್ನು ರದ್ದು ಮಾಡುವ ನಿರ್ಧಾರ ಒಂದು ದಿನದಲ್ಲಿ ತೀರ್ಮಾನಿಸಿದ್ದಲ್ಲ. 370 ಜಾರಿಗೆ ಬಂದಾಗಿನಿಂದಲೂ ಬಿಜೆಪಿಯು ಅದರ ರದ್ದತಿಗೆ ಹೋರಾಡುತ್ತಿದೆ. ಮೊದಲು ಜನಸಂಘ ನಂತರ ಬಿಜೆಪಿ. ಯಾವಾಗ ಅವಕಾಶ ಸಿಗುತ್ತದೋ ಆಗ ಅದನ್ನು ತೆಗೆದು ಹಾಕಬೇಕು ಎಂಬುದು ನಮ್ಮ ಹಳೆಯ ನಿರ್ಣಯವಾಗಿತ್ತು. ಅದರಂತೆ ರದ್ದುಪಡಿಸಿದ್ದೇವೆ. ನಿಮಗೂ ಗೊತ್ತಿದೆ ಬಿಜೆಪಿಯ ಪ್ರಣಾಳಿಕೆಯಲ್ಲೂ ಈ ಅಂಶ ಇತ್ತು.

* ಕಾಶ್ಮೀರ ಪೂರ್ಣ ಸಹಜ ಸ್ಥಿತಿಗೆ ಬರೋದು ಯಾವಾಗ?

ಜಮ್ಮು-ಕಾಶ್ಮೀರದಲ್ಲಿ ಎಲ್ಲೂ ಕರ್ಫ್ಯೂ ಜಾರಿಯಲ್ಲಿಲ್ಲ. ಆದರೆ 6 ಪೊಲೀಸ್‌ ಸ್ಟೇಶನ್‌ ವ್ಯಾಪ್ತಿಯಲ್ಲಿ ಮಾತ್ರ ಸೆಕ್ಷನ್‌ 144 ಜಾರಿಯಲ್ಲಿದೆ. 370 ರದ್ದು ಮಾಡಿದ 70 ದಿನದ ಬಳಿಕ ಪೋಸ್ಟ್‌ಪೇಯ್ಡ್‌ ಮೊಬೈಲ್‌ ಫೋನ್‌ ಬಳಕೆಗೂ ಅವಕಾಶ ಕಲ್ಪಿಸಲಾಗಿದೆ. ಕ್ರಮೇಣ ಕಾಶ್ಮೀರ ಸಹಜ ಸ್ಥಿತಿಗೆ ಬರುತ್ತಿದೆ. ಇದೇ ವಿಶೇಷಾಧಿಕಾರದ ಕಾರಣ ಕಾಶ್ಮೀರದಲ್ಲಿ ಯಾವುದೇ ಅಭಿವೃದ್ಧಿ ಕಾರ‍್ಯಗಳಾಗಿರಲಿಲ್ಲ. ಇನ್ನುಮುಂದೆ ಹಾಗಾಗುವುದಿಲ್ಲ. ಭ್ರಷ್ಟಾಚಾರ ಅಲ್ಲಿ ಹಾಸುಹೊಕ್ಕಾಗಿತ್ತು. ಆದರೆ ಅದನ್ನು ಪ್ರಶ್ನಿಸುವರಿರಲಿಲ್ಲ. ಇನ್ನು ಮುಂದೆ ದೇಶದ ಇತರೆಡೆಗಳಂತೆ ಭ್ರಷ್ಟಾಚಾರ ನಿಯಂತ್ರಣ ಕಾನೂನು ಕಾಶ್ಮೀರದಲ್ಲೂ ಅನ್ವಯವಾಗಲಿದೆ. ಜೊತೆಗೆ ಉದ್ಯೋಗ ಶಿಕ್ಷಣ, ಆರೋಗ್ಯ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಪರ್ವ ಆರಂಭವಾಗಲಿದೆ.

* ಪಾಕಿಸ್ತಾನ ಇದನ್ನು ವಿರೋಧಿಸುತ್ತಿದೆಯಲ್ಲ?

ಇಡೀ ಜಗತ್ತು ಭಾರತದ ಪರವಾಗಿದೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಸಂವಿಧಾನಾತ್ಮಕವಾಗಿ ಇಲ್ಲಿ ಯಾವುದೇ ಬದಲಾವಣೆ ತರಲು ಅವಕಾಶವಿದೆ. ಪಾಕಿಸ್ತಾನದ ವಿರೋಧವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಸುಮ್ಮನಿದ್ದು ಬಿಡುವುದೇ ಪ್ರಬುದ್ಧತೆ. ಚೀನಾ ಹೇಳಿಕೆಗಳು ನಮಗೆ ವಿರುದ್ಧವಾಗಿಲ್ಲ. ವಿದೇಶಾಂಗ ಇಲಾಖೆ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಿದೆಯಷ್ಟೆ.

ಅಸ್ಸಾಂನಿಂದ NRC ಮುಖ್ಯಸ್ಥರ ದಿಢೀರ್ ಎತ್ತಂಗಡಿ: ಕಾರಣ ಕೇಳ್ಬೇಡಿ ಎಂದ ಸುಪ್ರೀಂ!

* ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರೋದು ಯಾವಾಗ?

ಯೂನಿಫಾಮ್‌ರ್‍ ಸಿವಿಲ್‌ ಕೋಡ್‌ ಇಂದೇ ಜಾರಿಯಾಗುತ್ತದೆಂದು ಟೈಮ್‌ ಟೇಬಲ್‌ ಕೊಡಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಕುರಿತ ನಿರ್ಣಯ ಕೈಗೊಳ್ಳಲಾಗುತ್ತದೆ. ಅಂಥ ಯಾವುದೇ ನಿರ್ಣಯ ಇದ್ದರೂ ಮಾಹಿತಿ ನೀಡುತ್ತೇವೆ.

* ಗೃಹಮಂತ್ರಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎರಡನ್ನೂ ನೀವೇ ನಿಭಾಯಿಸುತ್ತೀರಾ? ಹೊಸಬರು ಅಧ್ಯಕ್ಷರಾದರೂ ಅಲ್ಲಿ ನಿಮ್ಮದೇ ಪ್ರಭಾವ ಇರುತ್ತೆ ಎಂದು ಮಾತನಾಡಿಕೊಳ್ಳುತ್ತಾರೆ. ಇದು ನಿಜವೇ?

ಬಿಜೆಪಿ ಕಾಂಗ್ರೆಸ್‌ ಪಕ್ಷದಂತಲ್ಲ. ತೆರೆಮರೆಯಲ್ಲಿ ನಿಂತು ಪಕ್ಷದ ಮೇಲೆ ಯಾರು ಪ್ರಭಾವ ಬೀರುವುದಿಲ್ಲ. ಇದೇ ಡಿಸೆಂಬರ್‌ನಲ್ಲಿ ನೂತನ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗಲಿದೆ. ಯಾರೇ ಅಧ್ಯಕ್ಷರಾದರೂ ಅವರು ಸ್ವತಂತ್ರರಾಗಿರುತ್ತಾರೆ. ಹೊಸ ಅಧ್ಯಕ್ಷರೇ ಪಕ್ಷವನ್ನು ಮುನ್ನಡೆಸಲಿದ್ದಾರೆ.

* ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣಾ ಭವಿಷ್ಯವೇನು?

ಸಂದೇಹವೇ ಇಲ್ಲ, ಎರಡೂ ರಾಜ್ಯಗಳಲ್ಲಿ ಪಕ್ಷವು ಬಹುಮತ ಪಡೆದು ಸರ್ಕಾರ ರಚಿಸುತ್ತದೆ. 5 ವರ್ಷದಲ್ಲಿ ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಬಿಜೆಪಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ‍್ಯಗಳೇ ನಮ್ಮನ್ನು ಗೆಲುವಿನ ದಡ ಸೇರಿಸಲಿವೆ. ಅಭಿವೃದ್ಧಿ ಕಾರ‍್ಯಗಳು ಇನ್ನುಮುಂದೆ ಮತ್ತಷ್ಟುವೇಗಗತಿಯಲ್ಲಿ ಸಾಗಲಿವೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್‌ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ.

* ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಇದರ ಬಗ್ಗೆ ನೀವೇನಂತೀರಿ?

ನೋಡಿ ಭಾರತ ಆರ್ಥಿಕತೆ ಮಾತ್ರ ಕುಸಿಯುತ್ತಿಲ್ಲ. ಜಾಗತಿಕ ಆರ್ಥಿಕತೆಯೇ ಕುಸಿಯುತ್ತಿದೆ. ಭಾರತವೂ ಅದಕ್ಕೆ ಹೊರತಾಗಿಲ್ಲ. ಜಾಗತಿಕ ಜಿಡಿಪಿ ಕುಸಿತವು ನಮ್ಮ ಜಿಡಿಪಿಗಿಂತ ಪಾತಾಳ ಕಂಡಿದೆ. ಇದೆಲ್ಲ ತಾತ್ಕಾಲಿಕ ಅಷ್ಟೆ. ನಮ್ಮ ಆರ್ಥಿಕತೆ ಮುಂಬರುವ ದಿನಗಳಲ್ಲಿ ಖಂಡಿತಾ ಚೇತರಿಕೆಯಾಗುತ್ತದೆ. ಹಣಕಾಸು ಸಚಿವರು ದೀರ್ಘಕಾಲಿಕವಾಗಿ ಲಾಭ ತರುವ ಹಲವು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಅವರು ತಜ್ಞರನ್ನು ಭೇಟಿ ಮಾಡಿ ಆರ್ಥಿಕ ಹಿಂಜರಿತಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ.

ಮೋದಿ, ಶಾ ಆಟ ನಡೆಯಲ್ಲ: ‘ಮಹಾ’ ಅಖಾಡದಲ್ಲಿ ಸಿದ್ದು ಕಿಡಿ!

* ನಿರ್ಮಲಾ ಸೀತಾರಾಮನ್‌ ಅವರ ಪತಿಯೇ ಕೇಂದ್ರದ ಆರ್ಥಿಕ ನೀತಿಯನ್ನು ಟೀಕಿಸಿದ್ದಾರೆ. ಪಿ.ವಿ ನರಸಿಂಹ ರಾವ್‌, ಮನಮೋಹನ್‌ ಸಿಂಗ್‌ ಅವರ ಆರ್ಥಿಕ ನೀತಿಯನ್ನು ಅನುಸರಿಸಿ ಎಂದು ಸಲಹೆ ನೀಡಿದ್ದಾರೆ.

ಅದರಲ್ಲಿ ಆಶ್ಚರ್ಯ ಏನಿದೆ? ಗಂಡ-ಹೆಂಡತಿ ಇಬ್ಬರೂ ಒಂದೇ ರೀತಿ ಯೋಚಿಸಬೇಕೆಂದೇನಿಲ್ಲ. ಅದು ನಿರ್ಮಲಾ ಸೀತಾರಾಮನ್‌ ಅವರ ಪತಿ ಯೋಚನೆ ಅಷ್ಟೆ. ಅವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರಷ್ಟೆ.

* ಗೃಹಮಂತ್ರಿಯಾಗಿ ನಿಮ್ಮ ಸಾಧನೆ ಏನು?

ಎಲ್ಲಾ ಸಾಧನೆಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ್ದು.

* ಅಯೋಧ್ಯೆ ತೀರ್ಪನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ಇದು ಭಾರತದ ಇತಿಹಾಸದಲ್ಲೇ ಅತ್ಯಂತ ಹಳೆಯ ಪ್ರಕರಣ. ಸುಪ್ರೀಂಕೋರ್ಟ್‌ನ ಯಾವುದೇ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ದೇಶದ ಸಮಸ್ತ ಜನರೂ ಆ ತೀರ್ಪನ್ನು ಒಪ್ಪಿಕೊಳ್ಳುತ್ತಾರೆ.

* ಕರ್ತಾರ್‌ಪುರ ಕಾರಿಡಾರ್‌ ನ.8ರಿಂದ ಯಾತ್ರಾರ್ಥಿಗಳಿಗೆ ಮುಕ್ತವಾಗಲಿದೆ. ಆದರೆ ಭಯೋತ್ಪಾದರು ಇದರ ಲಾಭ ಪಡೆದರೆ?

ಕರ್ತಾರ್‌ಪುರದಲ್ಲಿ ಸಾಮರಸ್ಯದ ಸಂದೇಶವನ್ನು ಸಾರಿದ ಗುರುನಾನಕ್‌ ದೇವ್‌ ಅವರ ನೆನಪುಗಳಿವೆ. ಸ್ವತಃ ನಾನೇ ಕರ್ತಾರ್‌ಪುರಕ್ಕೆ ಭೇಟಿ ನೀಡಿ ಅವರಿಗೆ ಗೌರವ ಸಲ್ಲಿಸಬೇಕೆಂದಿದ್ದೇನೆ. ಆದರೆ ಯಾವತ್ತು ಎಂಬುದು ಇನ್ನೂ ನಿಗದಿಯಾಗಿಲ್ಲ. ಈ ಹಾದಿಯಲ್ಲಿ ಭಯೋತ್ಪಾದಕ ಕೃತ್ಯಗಳನ್ನು ತಡೆಗಟ್ಟಲು ಪ್ರತ್ಯೇಕ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆ ಬಗ್ಗೆ ಭಯ ಪಡುವ ಅಗತ್ಯವಿಲ್ಲ.

* ಚಿದಂಬರಂ ಜೈಲು ದ್ವೇಷ ರಾಜಕೀಯ ಎನ್ನುತ್ತಾರಲ್ಲ?

ತನಿಖಾ ಸಂಸ್ಥೆಗಳು ರಾಜಕೀಯ ಪಕ್ಷಗಳಾಡಿಸುವ ಗೊಂಬೆಗಳಲ್ಲ. ಸಿಬಿಐ ಗೃಹ ಇಲಾಖೆಯಡಿ ಕಾರ‍್ಯ ನಿರ್ವಹಿಸುವುದಿಲ್ಲ. ಚಿದಂಬರಂ ನಿಜಕ್ಕೂ ನಿರಪರಾಧಿಯಾಗಿದ್ದರೆ ಕೋರ್ಟ್‌ ಅದನ್ನು ತೀರ್ಮಾನಿಸುತ್ತದೆ. ಪ್ರಕರಣವನ್ನು ಖುಲಾಸೆ ಮಾಡುತ್ತದೆ. ಆದರೆ ಚಿದಂಬರಂ ಅವರ ಉತ್ತರಗಳು ಕೋರ್ಟ್‌ಗೆ ಸರಿ ಎನಿಸುತ್ತಿಲ್ಲ. ಭ್ರಷ್ಟಾಚಾರ ಅಲ್ಲ, ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ನನ್ನನ್ನೂ ಜೈಲಿಗೆ ಹಾಕಲಾಗಿತ್ತು. ವಾಸ್ತವವಾಗಿ ಅದೊಂದು ಸುಳ್ಳು ಕೇಸು. ಪ್ರಕರಣ ಆಲಿಸಿದ ಕೋರ್ಟ್‌ ಜಾಮೀನು ನೀಡಿತು. ಆದರೆ ಆ ಪ್ರಕರಣವೇ ಬೇರೆ, ಇದೇ ಬೇರೆ. ಚಿದಂಬರಂ ಜೈಲಿಗೂ ನನ್ನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ.

'ಬಿಎಸ್‌ವೈ-ಕಟೀಲ್‌ ನಾಯಕತ್ವದಡಿ ನಾವೆಲ್ಲರೂ ಕಾರ್ಯ ನಿರ್ವಹಿಸಲಿದ್ದೇವೆ'

* ಸೌರವ್‌ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷರಾಗಿ ನೇಮಕ ಮಾಡಿರುವ ಹಿಂದಿನ ಉದ್ದೇಶ ಏನು? ಗಂಗೂಲಿ ಬಿಜೆಪಿ ಸೇರ್ತಾರಾ?

ಸೌರವ್‌ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ಮಾಡಿರುವುದರಲ್ಲಿ ಯಾವುದೇ ರಾಜಕೀಯ ಇಲ್ಲ. ಅದರ ಹಿಂದೆ ಯಾವ ಉದ್ದೇಶವೂ ಇಲ್ಲ. ಬಿಸಿಸಿಐ ಅಧ್ಯಕ್ಷರು ಯಾರಾಗಬೇಕೆಂದು ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಅದಕ್ಕೆ ಅದರದ್ದೇ ಆದ ಚುನಾವಣಾ ಪ್ರಕ್ರಿಯೆ ಇದೆ. ಇನ್ನು ಬಿಜೆಪಿ ಸೇರಿ ಎಂದು ಗಂಗೂಲಿ ಅವರಿಗೆ ನಾವು ಆಹ್ವಾನ ನೀಡಿಲ್ಲ. ಅಲ್ಲದೆ ಈ ಬಗ್ಗೆ ನಾವು ಯಾವತ್ತೂ ಮಾತನಾಡಿಯೇ ಇಲ್ಲ. ಅವರು ಪಕ್ಷಕ್ಕೆ ಬಂದರೆ ಖಂಡಿತ ಸ್ವಾಗತಿಸುತ್ತೇವೆ.

* ಬಂಗಾಳದಲ್ಲಿ ಬಿಜೆಪಿಗೆ ಜನಪ್ರಿಯ ಮುಖದ ಅವಶ್ಯಕತೆ ಇದೆಯೇ?

ಬಂಗಾಳದಲ್ಲಿ ನಮಗೆ ಜನಪ್ರಿಯ ಮುಖದ ಅವಶ್ಯಕತೆ ಇಲ್ಲ. ಯಾವುದೇ ಸೆಲೆಬ್ರಿಟಿಗಳ ಬೆಂಬಲವಿಲ್ಲದೆಯೂ ನಾವು ಗೆಲ್ಲಬಲ್ಲೆವು. ಯಾವುದೇ ಸೆಲೆಬ್ರಿಟಿಗಳ ಬೆಂಬಲ ಇಲ್ಲದೆಯೂ ಕಳೆದ ಲೋಕಸಭಾ ಚುನಾವಣೆ ವೇಳೆ ನಾವು ಬಂಗಾಳದಲ್ಲಿ 18 ಸೀಟು ಗೆದ್ದಿದ್ದೇವೆ.

* ಅಸ್ಸಾಂನಲ್ಲಿ ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದವರ ಕತೆ ಏನು? ದೇಶಾದ್ಯಂತ ಯಾವಾಗ ಎನ್‌ಆರ್‌ಸಿ ಜಾರಿ ಮಾಡುತ್ತೀರಿ?

ರಾಷ್ಟ್ರೀಯ ನಾಗರಿಕ ನೋಂದಣಿಯು ಸುಪ್ರೀಂಕೋರ್ಟ್‌ ತೀರ್ಪು. ಅಸ್ಸಾಂ ಎನ್‌ಆರ್‌ಸಿ ಪಟ್ಟಿಯಿಂದ 19 ಲಕ್ಷ ಜನರು ಹೊರಗುಳಿದಿದ್ದಾರೆ. 120 ದಿನದ ಒಳಗಾಗಿ ವಿದೇಶಿ ನ್ಯಾಯಮಂಡಳಿಗೆ ಈ ಬಗ್ಗೆ ಅಪೀಲು ಸಲ್ಲಿಸಲು ಅವಕಾಶ ನೀಡಲಾಗಿದೆ. ಅನಂತರ ಪೌರತ್ವ ನಿರ್ಣಯ ಸರಿಯಾಗಿದೆಯೋ ಇಲ್ಲವೋ ಎನ್ನುವುದನ್ನು ನ್ಯಾಯಾಧೀಕರಣ ನಿರ್ಧರಿಸುತ್ತದೆ. ಯಾರಿಗೆ ವಕೀಲರ ಶುಲ್ಕ ನೀಡಲು ಸಾಧ್ಯವಿಲ್ಲವೋ ಅವರ ಶುಲ್ಕವನ್ನು ಸರ್ಕಾರವೇ ಭರಿಸಲಿದೆ. ಕೇವಲ ಅಸ್ಸಾಂನಲ್ಲಿ ಜಾರಿಗೆ ಬಂದಿರುವ ಎನ್‌ಆರ್‌ಸಿಯನ್ನು ದೇಶಾದ್ಯಂತ ವಿಸ್ತರಿಸಲಾಗುತ್ತದೆ.

ಅಸ್ಸಾಂ ಅನುಭವದ ಆಧಾರದಲ್ಲಿ ವ್ಯವಸ್ಥಿತವಾಗಿ ಜಾರಿ ಮಾಡಲಾಗುತ್ತದೆ. ಆದರೆ ಯಾವಾಗ ಎಂದು ಹೇಳಲಾಗುವುದಿಲ್ಲ. ಜಗತ್ತಿನ ಯಾವ ದೇಶದಲ್ಲೂ ಅಕ್ರಮವಾಗಿ ನುಸುಳಿ ಬದುಕಲು ಸಾಧ್ಯವಿಲ್ಲ. ಒಂದು ದೇಶ ಎಂದ ಮೇಲೆ ಸರ್ಕಾರದ ಬಳಿ ಅಲ್ಲಿನ ಪ್ರಜೆಗಳ ಪಟ್ಟಿಇರಬೇಕು. ಹಾಗಾಗಿ ಇಡೀ ದೇಶಾದ್ಯಂತ ಎನ್‌ಆರ್‌ಸಿ ಜಾರಿ ಮಾಡುತ್ತೇವೆ. ಪಾಕಿಸ್ತಾನ, ಅಷ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಿಂದ ಕಿರುಕುಳ ಅನುಭವಿಸಿ ಉದ್ಯೋಗ ಅರಸಿ ಭಾರತಕ್ಕೆ ವಲಸೆ ಬರುತ್ತಿರುವುದು ನಿಲ್ಲಲೇಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೌಟು, ಕುಕ್ಕರ್ ಹಿಡಿದು ನಿಲ್ಲಿ, SIR ವಿರುದ್ಧ ಹೋರಾಟಕ್ಕೆ ಮಹಿಳೆಯರಿಗೆ ಸಿಎಂ ಮಮತಾ ಬ್ಯಾನರ್ಜಿ ಕರೆ
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ