
ಬೆಂಗಳೂರು : ಅಪರೇಷನ್ ಕಮಲಕ್ಕೆ ನನ್ನನ್ನು ಬಿಜೆಪಿಯವರು ಸಂಪರ್ಕಿಸಿದ್ದು, ನಿಜ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದ್ದಾರೆ.
ಮೈಸೂರು ಭಾಗದ ಪ್ರಮುಖ ಬಿಜೆಪಿ ಮುಖಂಡರು ನನಗೆ ಕಳೆದ ಹತ್ತು ದಿನದಿಂದ ಒತ್ತಡ ಹೇರುತ್ತಿದ್ದಾರೆ. ಈ ವಿಚಾರವನ್ನ ನಮ್ಮ ಪಕ್ಷದ ಕೆಲ ಪ್ರಮುಖ ನಾಯಕರಿಗೂ ತಿಳಿಸಿದ್ದೇನೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಸೇರುವುದು ಸತ್ಯಕ್ಕೆ ದೂರವಾದ ಮಾತಾಗಿದೆ. ಬಿಜೆಪಿಗೆ ಬರುವಂತೆ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಸಾಕಷ್ಟು ಒತ್ತಡ ಹೇರುತ್ತಿದ್ದರು. ಇವರೊಂದಿಗೆ ಮೈಸೂರು ಭಾಗದ ನಾಯಕರು ಕೂಡ ನನ್ನನ್ನು ಮನವೋಲಿಸಲು ಯತ್ನಿಸುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಸಚಿವ ಸ್ಥಾನ ನೀಡುವುದಾಗಿಯೂ ಕೂಡ ಆಮಿಷ ಒಡ್ಡಿದ್ದಾರೆ. ಅಷ್ಟೇ ಅಲ್ಲದೇ ನಿಮ್ಮ ಕ್ಷೇತ್ರದ ಚುನಾವಣಾ ಖರ್ಚುಗಳನ್ನೂ ಕೂಡ ನೋಡಿಕೊಳ್ಳುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಆದರೆ ಇಂತಹ ಯಾವುದೇ ರೀತಿಯ ಆಮಿಷಕ್ಕೂ ಕೂಡ ನಾನು ಬಲಿಯಾಗಲಿಲ್ಲ ಎಂದರು.
ಪಕ್ಷ ಮತ್ತು ಕ್ಷೇತ್ರದ ಜನತೆ ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ ಅವರಿಗೆ ದ್ರೋಹ ಮಾಡುವುದು ಎಂದಿಗೂ ಸಾಧ್ಯವಿಲ್ಲ ಎಂದು ಅನಿಲ್ ಚಿಕ್ಕಮಾದು ಪತ್ರಕರ್ತರ ಭವನದಲ್ಲಿ ಸುದ್ದಿಗೊಷ್ಠಿ ನಡೆಸಿ ಅಪರೇಷನ್ ಕಮಲದ ವಿಚಾರವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ : ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ. ಅದರಲ್ಲಿ ಯಾವುದೆ ಅನುಮಾನ ಬೇಡ. ಬಿಜೆಪಿಯವರು ಸಂವಿಧಾನದ ಕಗ್ಗೊಲೆ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. ಅವರಿಗೆ ಮುಂಬರುವ ಚುನಾವಣೆಯಲ್ಲಿ ಜನರು ಪಾಠ ಕಲಿಸುತ್ತಾರೆ. ನಮ್ಮಲ್ಲಿ ಯಾವುದೆ ಗೊಂದಲವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಸಿ.ಪಿ.ಯೋಗೀಶ್ವರ್ ಅನಿಲ್ ಚಿಕ್ಕಮಾದು ಒಬ್ಬರನೇ ಸಂಪರ್ಕ ಮಾಡಿಲ್ಲ, ಪುಟ್ಟರಂಗಶೆಟ್ಟಿ ಮುಂತಾದ ಶಾಸಕರು ಸಚಿವರನ್ನು ಸಂಪರ್ಕ ಮಾಡಿದ್ದಾರೆ ಎಂದು ಸಂಸದ ಧೃವನಾರಾಯಣ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.