‘ಮೈತ್ರಿಯ ಮತ್ತಿಬ್ಬರು ಸಚಿವರ ರಾಜೀನಾಮೆ, BSY ಸಿಎಂ ಆಗೋದು ಖಚಿತ’

By Web DeskFirst Published Jul 1, 2019, 2:28 PM IST
Highlights

ರಾಜ್ಯ ಮೈತ್ರಿ ಸರ್ಕಾರದಲ್ಲಿ  ಮತ್ತಿಬ್ಬರು ಸಚಿವರು ರಾಜೀನಾಮೆ ನೀಡಲಿದ್ದು, ಬಿಜೆಪಿ ಅಧಿಕಾರಕ್ಕೆ ಏರುವುದು ನಿಶ್ಚಿನ ಎಂದು ನಾಯಕೋರ್ವರು ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗ [ಜು.1]:  ವಿಜಯನಗರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆಯಿಂದ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಮೈತ್ರಿ ಸರ್ಕಾರದ ಬುಡ ಅಲುಗಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಜಿಂದಾಲ್ ಪ್ರಕರಣಕ್ಕೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಬೇಸತ್ತು ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ.  ಜಿಂದಾಲ್ ಪ್ರಕರಣದಲ್ಲಿ ಜಾರ್ಜ್ ಹಾಗೂ ಡಿ.ಕೆ.ಶಿವಕುಮಾರ್ ಅಂಥವರಿಗೆ ಕಿಕ್ ಬ್ಯಾಕ್ ಬರಬಹುದೇನೋ. ಇದೇ ಕಾರಣಕ್ಕೆ ವಿರೋಧದ ನಡುವೆಯೂ ಜಿಂದಾಲ್ ಗೆ ಭೂಮಿ ನೀಡಲು ಸರ್ಕಾರ ಮುಂದಾಗಿದೆ ಎಂದರು.

'JDSನೊಂದಿಗೆ ಏಗೋದು ಕಷ್ಟ, ಆನಂದ್ ಸಿಂಗ್ ರಾಜೀನಾಮೆಗೆ ಸ್ವಾಗತ'

ಆನಂದ್ ಸಿಂಗ್ ರಾಜೀನಾಮೆ ಕಿಕ್‌ಬ್ಯಾಕ್ ಹಗರಣ ಹೊರಬರುವ ಮೊದಲ ಹೆಜ್ಜೆಯಾಗಿದೆ.  ಇನ್ನು ಬಹುಕೋಟಿ ಐಎಂಎ ಹಗರಣದಲ್ಲಿ ಒಂದಿಬ್ಬರು ಸಚಿವರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇದರಿಂದ ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಬಿದ್ದು ಹೋಗಿ‌ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ  ಸಾಧ್ಯತೆ ನಿಶ್ಚಳವಾಗಿದೆ ಎಂದ ಆಯನೂರು ಮಂಜುನಾಥ್ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಏರುವ ಭರವಸೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಲವು ಅತೃಪ್ತರು ಹೊರಬರುವ ಕಾರಣ ಮೈತ್ರಿ ಸರ್ಕಾರ ಉರುಳಿದಾಗ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಆಯನೂರು ಮಂಜುನಾಥ್ ಹೇಳಿದರು. 

click me!