
ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ ಬಿಜೆಪಿ ಸಂಸದರು ಪ್ರತಿನಿಧಿಸುತ್ತಿರುವ ಸುಮಾರು ಆರೇಳು ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಷ್ಟು ಅನುಕೂಲಕರ ಪರಿಸ್ಥಿತಿ ಇಲ್ಲ ಎಂಬ ಮಾಹಿತಿ ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್.ಯಡಿಯೂರಪ್ಪ ಅವರಿಗೆ ತಲುಪಿದೆ. ಈ ಮಾಹಿತಿಯನ್ನು ಒಳಗೊಂಡಂತೆ ಲೋಕಸಭಾ ಚುನಾವಣೆ ಸಿದ್ಧತೆಗೆ ಪೂರಕವಾಗಿ ವಿವರವಾದ ವರದಿಯೊಂದನ್ನು ಯಡಿಯೂರಪ್ಪ ಅವರು ಪಕ್ಷದ ವರಿಷ್ಠರಿಗೆ ನೀಡುವುದಕ್ಕಾಗಿ ದೆಹಲಿಗೆ ಕೊಂಡೊಯ್ದಿದ್ದಾರೆ.
ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ದೆಹಲಿಗೆ ತೆರಳಿದರು.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ಎಲ್ಲ ರಾಜ್ಯಗಳ ಬಿಜೆಪಿ ಅಧ್ಯಕ್ಷರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎಲ್ಲ ರಾಜ್ಯಾಧ್ಯಕ್ಷರೂ ತಮ್ಮ ರಾಜ್ಯಗಳ ಪಕ್ಷದ ಸಂಘಟನೆ ಹಾಗೂ ಪ್ರತಿ ಕ್ಷೇತ್ರದಲ್ಲಿನ ಪ್ರಸಕ್ತ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಚಿತ್ರಣ ಒಳಗೊಂಡ ವರದಿ ಮಂಡಿಸಲಿದ್ದಾರೆ.
ಹೀಗಾಗಿ, ಯಡಿಯೂರಪ್ಪ ಅವರು ಕರ್ನಾಟಕದಲ್ಲಿನ 28 ಕ್ಷೇತ್ರಗಳಲ್ಲಿನ ಪಕ್ಷದ ಪರಿಸ್ಥಿತಿಯನ್ನು ಹೈಕಮಾಂಡ್ ಮುಂದಿಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯ ಹಿನ್ನೆಲೆಯಲ್ಲೇ ಯಡಿಯೂರಪ್ಪ ಅವರು ಎಲ್ಲ ಜಿಲ್ಲಾ ಘಟಕಗಳಿಂದ ಮಾಹಿತಿ ಸಂಗ್ರಹಿಸಿದ್ದರು. ಆ ಮಾಹಿತಿ ಅನುಸಾರ ಹಾಲಿ ಬಿಜೆಪಿ ಸದಸ್ಯರೇ ಪ್ರತಿನಿಧಿಸುತ್ತಿರುವ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಕೊಪ್ಪಳ, ಮೈಸೂರು ಹಾಗೂ ಉತ್ತರ ಕನ್ನಡ ಸೇರಿದಂತೆ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಮೊದಲಿನಷ್ಟು ಉತ್ತಮ ವಾತಾವರಣವಿಲ್ಲ. ಸ್ವಲ್ಪ ಹೆಚ್ಚುಕಡಮೆಯಾದರೆ ಪಕ್ಷಕ್ಕೆ ಹಿನ್ನಡೆ ಉಂಟಾಗಬಹುದು.
ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದಲ್ಲಿ ಬಿಜೆಪಿಗೆ ಮತ್ತಷ್ಟು ಕಷ್ಟವಾಗಬಹುದು ಎಂಬ ಎಚ್ಚರಿಕೆ ರೂಪದ ಅಭಿಪ್ರಾಯವೂ ಲಭಿಸಿದೆ ಎಂದು ಗೊತ್ತಾಗಿದೆ. ಅಚ್ಚರಿಯ ಸಂಗತಿ ಎಂದರೆ, ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ ಮತ್ತು ಉತ್ತರ ಕನ್ನಡದ ಸಂಸದ ಅನಂತಕುಮಾರ್ ಹೆಗಡೆ ಕೇಂದ್ರದ ಹಾಲಿ ಸಚಿವರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.