
ಬೆಂಗಳೂರು(ಡಿ.7): ಮಲೆನಾಡಿನ ಹೆಚ್ಚು ಪ್ರದೇಶ ಹೊಂದಿರುವ ರಾಜ್ಯದ ಮಧ್ಯ ಕರ್ನಾಟಕದಲ್ಲಿ ಕಳೆದ ಬಾರಿ ಮುದುಡಿದ್ದ ಬಿಜೆಪಿಯ ಕಮಲ ಈ ಬಾರಿ ಭರ್ಜರಿಯಾಗಿಯೇ ಮತ್ತೊಮ್ಮೆ ಅರಳುವ ಸಾಧ್ಯತೆ ಹೆಚ್ಚಾಗಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಿರುವ ಈ ಪ್ರದೇಶದಲ್ಲಿ ಒಟ್ಟು 23 ವಿಧಾನಸಭಾ ಕ್ಷೇತ್ರಗಳಿದ್ದು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿತ್ತು. ವಿಚಿತ್ರ ಎಂದರೆ, ಬಿಜೆಪಿಗಿಂತ ಜೆಡಿಎಸ್ ದುಪ್ಪಟ್ಟು ಸ್ಥಾನ ಪಡೆದಿತ್ತು. ಹೀಗಾಗಿ, ಈ ಭಾಗ ಮೂರು ಪ್ರಮುಖ ಪಕ್ಷಗಳ ಹಣಾಹಣಿಗೆ ವೇದಿಕೆಯಾಗಿದೆ.
ಈಗ ನವೆಂಬರ್‌ನಲ್ಲಿ ನಡೆಸಿದ ಸಮೀಕ್ಷೆ ಅನುಸಾರ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲಿದೆ. ಆ ಪಕ್ಷ ದೊಡ್ಡ ಜಿಗಿತವನ್ನೇ ಕಾಣಲಿದ್ದು, 3ರಿಂದ 14ಕ್ಕೆ ಏರಿಕೆಯಾಗಲಿದೆ. ಅದೇ ರೀತಿ ಕಾಂಗ್ರೆಸ್ಸಿನ ಸಂಖ್ಯಾಬಲ ಅರ್ಧದಷ್ಟು, ಅಂದರೆ 12ರಿಂದ 6ಕ್ಕೆ ಕುಸಿಯಲಿದೆ. ಜೆಡಿಎಸ್ ಮಾತ್ರ ತನ್ನ ಸ್ಥಾನ ಮತ್ತು ಮತ ಗಳಿಕೆ ಪ್ರಮಾಣವನ್ನು ಯಥಾ ರೀತಿ ಉಳಿಸಿಕೊಳ್ಳುವ ಸಂಭವ ಹೆಚ್ಚಾಗಿದೆ.
ಅಂದರೆ, ಈಗಿರುವ 6ರಿಂದ 3ಕ್ಕೆ ಕುಸಿಯಬಹುದು ಎಂಬುದು ಸಮೀಕ್ಷೆಯಿಂದ ಗೊತ್ತಾಗಿರುವ ಅಂಶ. ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ಈ ಭಾಗ ಪ್ರತಿಷ್ಠೆಯ ಕಣ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವುದರಿಂದ ತವರು ಜಿಲ್ಲೆ ಶಿವಮೊಗ್ಗದಲ್ಲಿ ಸಂಘಟನೆಯೂ ಬಲಗೊಳ್ಳುತ್ತಿದೆ. ಪಕ್ಷದಲ್ಲಿನ ಆಂತರಿಕ ಭಿನ್ನಮತ ಸದ್ಯಕ್ಕೆ ಶಮನಗೊಂಡಂತೆ ಕಾಣುತ್ತಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಪ್ರಭಾವ ಕೂಡ ಕಡಮೆ ಏನಿಲ್ಲ.
ದಾವಣಗೆರೆ ಜತೆಗೆ ಚಿತ್ರದುರ್ಗದಲ್ಲೂ ಸಾಕಷ್ಟು ಪ್ರಭಾವ ಹೊಂದಿರುವ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ಸಿಗ ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ಕುರಿತ ಬೇಡಿಕೆಗೆ ಸಂಬಂಧಿಸಿದಂತೆ ಅಸಮಾಧಾನಗೊಂಡಿದ್ದಾರೆ. ಇದು ಕೂಡ ಕಾಂಗ್ರೆಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದೇ ಎಂಬುದನ್ನು ಕಾದು ನೋಡಬೇಕು.
ಚಿತ್ರದುರ್ಗದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿಯೇ ಇದೆ. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಗಟ್ಟಿ ತಳಹದಿ ಹಾಕಿದ್ದರೂ ಬಿಜೆಪಿಯ ಬಳ್ಳಾರಿ ಸಂಸದ ಹಾಗೂ ವಾಲ್ಮೀಕಿ ಜನಾಂಗದ ಮುಖಂಡ ಬಿ.ಶ್ರೀರಾಮುಲು ಅವರ ಪ್ರಭಾವವೂ ಇಲ್ಲಿ ಸಾಕಷ್ಟಿದೆ. ಚಿಕ್ಕಮಗಳೂರಿನಲ್ಲಿ ದತ್ತಪೀಠದ ವಿವಾದ ಮತ್ತೆ ಜೀವ ಪಡೆದಿರುವುದರಿಂದ ಬಿಜೆಪಿಗೆ ತುಸು ಸಹಾಯವಾಗುವುದನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿಯೂ ಕಾಂಗ್ರೆಸ್ ಬಲಗೊಂಡಿದೆ. ಮಧ್ಯ ಕರ್ನಾಟಕದಲ್ಲಿ ಕಳೆದ ಚುನಾವಣೆಯಲ್ಲಿ ಮೂರೂ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಇತರರು ಶೇ.30.7ರಷ್ಟು ಮತ ಗಳಿಸುವ ಮೂಲಕ ಎರಡು ಸ್ಥಾನ ಗೆದ್ದಿದ್ದರು. ಸ್ಥಾನ ಕಡಿಮೆ ಇದ್ದರೂ ಮತ ಗಳಿಕೆ ಪ್ರಮಾಣ ಹೆಚ್ಚಾಗಿತ್ತು. ಈ ಬಾರಿ ಮತ ಗಳಿಕೆ ಪ್ರಮಾಣ ಶೇ.4ಕ್ಕೆ ಇಳಿಯಲಿದ್ದು, ಪಕ್ಷೇತರರು ಅಥವಾ ಇತರ ಪಕ್ಷಗಳ ಗೆಲ್ಲುವ ಸಾಧ್ಯತೆ ಇಲ್ಲ ಎನ್ನುತ್ತದೆ ಸಮೀಕ್ಷೆ.
ಇದೆಲ್ಲಕ್ಕಿಂತ ಕುತೂಹಲದ ಸಂಗತಿ ಎಂದರೆ ಈ ಭಾಗದ ಶೇ.6ರಷ್ಟು ಮತದಾರರು ಇದುವರೆಗೆ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಈ ತದಾರರು ಯಾವ ಪಕ್ಷದೆಡೆ ವಾಲುತ್ತಾರೆ ಎಂಬುದು ಕೂಡ ಮತ ಗಳಿಕೆ ಹಾಗೂ ಸ್ಥಾನಗಳ ಬಲಾಬಲದ ಮೇಲೆ ಪರಿಣಾಮ ಬೀರಲಿದೆ. ಇವರ ಸಂಖ್ಯೆ ಬಹಳ ಇಲ್ಲದಿದ್ದರೂ ಕಡೆಗಣಿಸುವಂತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.