ಮುಂಬೈ ಕರ್ನಾಟಕದಲ್ಲಿ ಬಿಜೆಪಿಯದ್ದೇ ಬಲ

Published : Dec 07, 2017, 08:31 AM ISTUpdated : Apr 11, 2018, 12:59 PM IST
ಮುಂಬೈ ಕರ್ನಾಟಕದಲ್ಲಿ ಬಿಜೆಪಿಯದ್ದೇ ಬಲ

ಸಾರಾಂಶ

ಕಳೆದ ಬಾರಿ ಮುಂಬೈ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಾಂಗ್ರೆಸ್ 2018ರ ಚುನಾವಣೆಯಲ್ಲಿ ಹಿನ್ನಡೆ ಕಾಣುವ ಲಕ್ಷಣಗಳಿದ್ದರೆ, ಬಿಜೆಪಿ ಸ್ಥಿತಿ ಉತ್ತಮಗೊಳ್ಳಲಿದೆ. ಉಳಿದಂತೆ ಜೆಡಿಎಸ್ ಹಾಗೂ ಪಕ್ಷೇತರರು (ಎಂಇಎಸ್?) ಯಥಾಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆಯಿದೆ.

ಬೆಂಗಳೂರು(ಡಿ.7): ಕಾಂಗ್ರೆಸ್ ಹಾಗೂ ಬಿಜೆಪಿಯ ಜಿದ್ದಾಜಿದ್ದಿ ಹೋರಾಟದ ಕಣ ಮುಂಬೈ ಕರ್ನಾಟಕ. ಕುಟುಂಬ ರಾಜಕಾರಣ, ಕ್ಷೇತ್ರದ ಮೇಲೆ ಹಿಡಿತವುಳ್ಳ ಪ್ರಭಾವಿಗಳ ತಾಣವೂ ಆಗಿರುವ ಮುಂಬೈ ಕರ್ನಾಟಕದಲ್ಲಿ ಈ ಬಾರಿ ಚುನಾವಣೆಗೆ ಹಲವು ನಿರ್ಣಾಯಕ ವಿಚಾರಗಳಿವೆ. ಈ ಎಲ್ಲಾ ವಿಚಾರಗಳನ್ನು ರಾಜಕೀಯ ಪಕ್ಷಗಳು ಹೇಗೆ ನಿಭಾಯಿಸಲಿವೆ ಎಂಬುದೇ ಚುನಾವಣೆಯ ಫಲಿತಾಂಶವನ್ನು ನಿರ್ದೇಶಿಸಲಿದೆ. ವಿಶೇಷವಾಗಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ, ಮಹದಾಯಿ ಯೋಜನೆ, ಈ ಭಾಗದಲ್ಲಿ ಪ್ರಭಾವಿಗಳಾದ ಜಾರಕಿಹೊಳಿ ಕುಟುಂಬ ಛಿದ್ರಗೊಂಡಿರುವುದು ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರುವ ಲಕ್ಷಣಗಳು ಸಮೀಕ್ಷೆಯಲ್ಲಿ ಗೋಚರಿಸಿದೆ.

ಇದರಿಂದಾಗಿಯೇ ಕಳೆದ ಬಾರಿ ಈ ಪ್ರದೇಶದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಾಂಗ್ರೆಸ್ 2018ರ ಚುನಾವಣೆಯಲ್ಲಿ ಹಿನ್ನಡೆ ಕಾಣುವ ಲಕ್ಷಣಗಳಿದ್ದರೆ, ಬಿಜೆಪಿ ಸ್ಥಿತಿ ಉತ್ತಮಗೊಳ್ಳಲಿದೆ. ಉಳಿದಂತೆ ಜೆಡಿಎಸ್ ಹಾಗೂ ಪಕ್ಷೇತರರು (ಎಂಇಎಸ್?) ಯಥಾಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆಯಿದೆ.

ಬೆಂಗಳೂರು ನಂತರ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಈ ಬಾರಿ ನಿರ್ಣಾಯಕ. 18  ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿಯಲ್ಲಿ ಕಳೆದ ಬಾರಿ ಬಿಜೆಪಿ ಉತ್ತಮ ಸಾಧನೆ ತೋರಿತ್ತು. ಅದು ಈ ಬಾರಿಯೂ ಮುಂದುವರೆಯುವ ಲಕ್ಷಣವಿದೆ. ಕಾಂಗ್ರೆಸ್ ಕಳೆದ ಬಾರಿಗಿಂತ ಒಂದಷ್ಟು ಪರಿಸ್ಥಿತಿ ಸುಧಾರಿಸಿಕೊಳ್ಳುವ ಸಾಧ್ಯತೆಯಿದ್ದರೂ ಈ ಭಾಗದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಜಾರಕಿಹೊಳಿ ಕುಟುಂಬದ ಒಳಜಗಳ ಕಾಂಗ್ರೆಸ್ ಪಾಲಿಗೆ ಮುಳುವಾಗುವ ಸಾಧ್ಯತೆಯಿದೆ. ಇದರೊಟ್ಟಿಗೆ ಬಾಗಲಕೋಟೆ ಜಿಲ್ಲೆಯ ಪ್ರಮುಖ ಕುರುಬ ಜನಾಂಗದ ನಾಯಕ ಎಚ್.ವೈ. ಮೇಟಿ ಅವರು ಲೈಂಗಿಕ ಹಗರಣದಲ್ಲಿ ಸಿಲುಕಿದ್ದು ಪಕ್ಷಕ್ಕೆ ಹಿನ್ನಡೆ ತಂದೊಡ್ಡಬಹುದು. ಜಾತಿ ಲೆಕ್ಕಾಚಾರದಲ್ಲಿ ಲಿಂಗಾಯತ ಪ್ರಾಧಾನ್ಯ ಪ್ರದೇಶವಾದ ಮುಂಬೈ ಕರ್ನಾಟಕದಲ್ಲಿ ಲಿಂಗಾಯತ ಧರ್ಮ ವಿಚಾರ ಅತ್ಯಂತ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.

ಲಿಂಗಾಯತರಿಗೆ ಹೊಸ ಅಸ್ಮಿತೆ ತಂದುಕೊಡುವ ಈ ವಿಚಾರ ಕಾಂಗ್ರೆಸ್ ಪಾಲಿಗೆ ಶುಭದಾಯಕವಾಗಬೇಕು ಎಂದು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಒಟ್ಟಾಗಿದ್ದ ವೀರಶೈವ ಹಾಗೂ ಲಿಂಗಾಯತರನ್ನು ಛಿದ್ರಗೊಳಿಸುವ ಮೂಲಕ ಧರ್ಮ ಒಡೆಯುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎಂದು ಬಿಂಬಿಸಲು ಬಿಜೆಪಿ ತನ್ನೆಲ್ಲ ಸಾಮರ್ಥ್ಯ ಮೀರಿ ಪ್ರಯತ್ನಿಸುತ್ತಿದೆ. ಈ ಪ್ರಯತ್ನಗಳು ಯಾವ ರೀತಿಯ ಫಲ ನೀಡುತ್ತವೆ ಎಂಬುದು ಮುಖ್ಯ. 

ಜತೆಗೆ, ಈ ಭಾಗದ ಮೂರು ಜಿಲ್ಲೆಗಳಾದ ಹಾವೇರಿ, ಧಾರವಾಡ, ಗದಗಗಳಿಗೆ ಅತ್ಯಂತ ಪ್ರಮುಖವಾಗಿರುವ ಮಹದಾಯಿ ಯೋಜನೆ ಪರ ಹೋರಾಟಕ್ಕೆ ಪಕ್ಷಗಳ ಸ್ಪಂದನೆಯೂ ಸಹ ಚುನಾವಣೆಯಲ್ಲಿ ತಿರುವು ನೀಡಬಹುದು.ಮಹದಾಯಿ ಯೋಜನೆಗೆ ಕೇಂದ್ರ ಸ್ಪಂದನೆ ನೀಡುತ್ತಿಲ್ಲ ಎಂಬುದನ್ನು ಕಾಂಗ್ರೆಸ್ ಅಸ್ತ್ರವಾಗಿಟ್ಟು ಕೊಂಡಿದ್ದರೆ, ಅದನ್ನು ವಿಫಲಗೊಳಿಸಲು ಬಿಜೆಪಿ ಮುಂದಾಗಿದ್ದು, ಮಹದಾಯಿ ಯೋಜನೆ ಜಾರಿಗೊಳಿಸುವ ಹೊಣೆಯನ್ನು ಖುದ್ದು ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಹಿಸಿಕೊಂಡಿದ್ದಾರೆ. ಇದರಲ್ಲಿ ಯಡಿಯೂರಪ್ಪ ಯಶಸ್ವಿಯಾದರೆ ಅದು ಬಿಜೆಪಿಗೆ ದೊಡ್ಡ ಲಾಭ ತಂದುಕೊಡಬಹುದು.

ಹೀಗಾಗಿಯೇ ಕಳೆದ ಬಾರಿ ಶೇ. 27.3 ಮತಗಳಿಕೆಯ ಮೂಲಕ 13 ಸೀಟುಗಳನ್ನು ಮಾತ್ರಗಳಿಸಿದ್ದ ಬಿಜೆಪಿ ಈ ಬಾರಿ ಶೇ. 39ರಷ್ಟಕ್ಕೆ ತನ್ನ ಮತಗಳಿಗೆ ಹೆಚ್ಚಿಸಿಕೊಂಡು 27 ಸ್ಥಾನ ಮುಟ್ಟಲಿದೆ ಎಂದು ಸಮೀಕ್ಷೆ ಹೇಳಿದೆ. ಈ ಭಾಗದ ಮತದಾರ ಯಾರಿಗೆ ಮತ ಹಾಕಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿದಂತಿದೆ. ಹೀಗಾಗಿಯೇ ಶೇ. 2ರಷ್ಟು ಮತದಾರರು ಮಾತ್ರ ತಾವು ಯಾರಿಗೆ ಮತ ಹಾಕುತ್ತೇವೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಉಳಿದಂತೆ ಶೇ.98ರಷ್ಟು ಮಂದಿಯ ನಿಲುವು ಸ್ಪಷ್ಟವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರಿಸ್‌ಮಸ್ ರಜೆ ಮುಗಿಸಿ ಕೆಲಸಕ್ಕೆ ಬರುತ್ತಿದ್ದ ಟೆಕ್ಕಿ; ಕಾರು ಮರಕ್ಕೆ ಡಿಕ್ಕಿಯಾಗಿ ಅಪ್ಪ-ಮಗ ಸಾವು
ಟೊರೆಂಟೋ ವಿವಿ ಆವರಣದಲ್ಲಿ ಭಾರತೀಯ ಸಂಶೋಧನಾ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ