ಕೇಶವಕೃಪಾದಲ್ಲಿ ಬಿಜೆಪಿ-ಆರೆಸ್ಸೆಸ್ ಮಹತ್ವದ ಸಭೆ

By Suvarna Web DeskFirst Published Aug 30, 2017, 12:02 PM IST
Highlights

ಬಹುದಿನಗಳ ನಂತರ ಇಂಥದೊಂದು ಮುಖಾಮುಖಿ ಸಭೆ ನಡೆಯುತ್ತಿರುವುದರಿಂದ ಈ ಸಮಾಲೋಚನೆ ಮಧ್ಯಾಹ್ನದವರೆಗೂ ನಡೆಯಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಹೆಚ್ಚೂ ಕಡಿಮೆ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದ ನಂತರ ಒಂದೆಡೆ ಸೇರಿ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ವಿಸ್ತೃತವಾಗಿ ಸಮಾಲೋಚನೆ ನಡೆಸಲಿದ್ದಾರೆ.

ಬೆಂಗಳೂರು(ಆ. 30): ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ರಾಜ್ಯ ಮುಖಂಡರ ಮಹತ್ವದ ಸಮಾಲೋಚನಾ ಸಭೆ ಇಂದು ಬುಧವಾರ ನಡೆಯುತ್ತಿದೆ. ಬೆಳಗ್ಗೆ ಸುಮಾರು 9 ಗಂಟೆಗೆ ನಗರದ ಚಾಮರಾಜಪೇಟೆಯಲ್ಲಿನ ಸಂಘದ ಕಚೇರಿಗೆ ತೆರಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನಾಯಕರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಪ್ರಹ್ಲಾದ್ ಜೋಶಿ, ಆರ್. ಅಶೋಕ್, ಸಿ.ಟಿ.ರವಿ, ಅರವಿಂದ್ ಲಿಂಬಾವಳಿ ಮೊದಲಾದವರು ಪಕ್ಷದ ಸಂಘಟನೆ ಬಲಪಡಿಸುವ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ. ಬಹುದಿನಗಳ ನಂತರ ಇಂಥದೊಂದು ಮುಖಾಮುಖಿ ಸಭೆ ನಡೆಯುತ್ತಿರುವುದರಿಂದ ಈ ಸಮಾಲೋಚನೆ ಮಧ್ಯಾಹ್ನದವರೆಗೂ ನಡೆಯಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಹೆಚ್ಚೂ ಕಡಿಮೆ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದ ನಂತರ ಒಂದೆಡೆ ಸೇರಿ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ವಿಸ್ತೃತವಾಗಿ ಸಮಾಲೋಚನೆ ನಡೆಸಲಿದ್ದಾರೆ.

ಹಿಂದೆ ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದ ಬಳಿಕ ಸಂಘದೊಂದಿಗೆ ಭಿನ್ನಾಭಿಪ್ರಾಯ ಆರಂಭವಾಯಿತು. ಪದಾಧಿಕಾರಿಗಳ ನೇಮಕದಲ್ಲಿ ತಾನು ನೀಡಿದ್ದ ಸಲಹೆ-ಸೂಚನೆ ಪಾಲಿಸಲಿಲ್ಲ ಎಂಬ ಬೇಸರ ಆರ್‌ಎಸ್‌ಎಸ್ ಮುಖಂಡರಲ್ಲಿತ್ತು. ಹೀಗಾಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಯಡಿಯೂರಪ್ಪ ಅವರನ್ನು ಕರೆದೊಯ್ದು ಆರ್‌ಎಸ್‌ಎಸ್ ಮುಖಂಡರ ಜತೆ ಮಾತುಕತೆ ನಡೆಸುವ ಮೂಲಕ ಯಶಸ್ವಿ ಸಂಧಾನ ನಡೆಸಿದ್ದರು. ಜತೆಗೆ, ಇನ್ನು ಮುಂದೆ ಆರ್‌ಎಸ್‌ಎಸ್ ಮುಖಂಡರ ಸಲಹೆ-ಸೂಚನೆಗಳನ್ನು ಪಾಲಿಸಬೇಕು ಎಂಬ ನಿರ್ದೇಶನವನ್ನೂ ಯಡಿಯೂರಪ್ಪ ಅವರಿಗೆ ನೀಡಿದ್ದರು ಎನ್ನಲಾಗಿದೆ. ಅಮಿತ್ ಶಾ ಸೂಚನೆ ಪ್ರಕಾರ ಯಡಿಯೂರಪ್ಪ ಅವರು ಪಕ್ಷದ ಮುಖಂಡರನ್ನು ಕರೆದುಕೊಂಡು ಆರ್'ಎಸ್‌ಎಸ್ ಮುಖಂಡರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲು ಮುಂದಾಗಿದ್ದಾರೆ. ಇವತ್ತಿನ ಈ ಸಭೆಗೆ ಪಕ್ಷದ ಚುನಾವಣಾ ಉಸ್ತುವಾರಿಯಾಗಿ ಕಳೆದ ವಾರವಷ್ಟೇ ನೇಮಕಗೊಂಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರೂ ಆಗಮಿಸುವ ನಿರೀಕ್ಷೆಯಿತ್ತು. ಆದರೆ, ಕೊನೆ ಕ್ಷಣದ ಅನಿವಾರ್ಯ ಕಾರ್ಯಕ್ರಮಗಳಿಂದ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

Latest Videos

ಕನ್ನಡಪ್ರಭ ವಾರ್ತೆ
epaper.kannadaprabha.in

click me!