
ಬೆಂಗಳೂರು(ಆ. 30): ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಆರ್.ಬಿ.ತಿಮ್ಮಾಪುರ ಸೇರಿದಂತೆ 8 ವಿಧಾನಪರಿಷತ್ ಸದಸ್ಯರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದ ವಿಚಾರ ಬಹಿರಂಗಗೊಂಡಿದೆ. ಬಿಬಿಎಂಪಿ ನಡೆಸಿದ್ದ ಆಂತರಿಕ ತನಿಖೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. 2016ರ ಸೆಪ್ಟಂಬರ್'ನಲ್ಲಿ ಮೇಯರ್ ಚುನಾವಣೆ ನಡೆದಿತ್ತು. ಈ ವೇಳೆ ಹಲವು ಶಾಸಕರು ತಪ್ಪು ವಿಳಾಸ ನೀಡಿ ಮತ ಚಲಾಯಿಸಿದ್ದಾರೆಂದು ಪದ್ಮನಾಭ ರೆಡ್ಡಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಬಿಬಿಎಂಪಿಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿತ್ತು.
ಆರ್.ಬಿ ತಿಮ್ಮಾಪುರ, ಎನ್.ಎಸ್. ಬೋಸರಾಜ್, ಎಸ್. ರವಿ, ಸಿ.ಆರ್.ಮನೋಹರ್, ಅಪ್ಪಾಜಿಗೌಡ, ಎಂ.ಡಿ ಲಕ್ಷ್ಮೀನಾರಾಯಣ, ಅಲ್ಲಮ ವೀರಭದ್ರಪ್ಪ ಮತ್ತು ರಘು ಅಚಾರ್ ಅವರು ತಪ್ಪು ಮಾಹಿತಿ ಕೊಟ್ಟಿರುವುದು ಪತ್ತೆಯಾಗಿದೆ. ಇವರ ಪೈಕಿ ಸಿ.ಆರ್.ಮನೋಹರ್ ಮತ್ತು ಅಪ್ಪಾಜಿಗೌಡ ಇಬ್ಬರು ಜೆಡಿಎಸ್ ಸದಸ್ಯರಾದರೆ, ಉಳಿದವರು ಕಾಂಗ್ರೆಸ್ ಶಾಸಕರಾಗಿದ್ದಾರೆ. ಆರ್.ಬಿ.ತಿಮ್ಮಾಪೂರ್ ಅವರು ಮುಂಬರುವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಏನು ತಪ್ಪು ಮಾಹಿತಿ?
ಆರ್.ಬಿ.ತಿಮ್ಮಾಪೂರ್ ಅವರು ಬೆಂಗಳೂರಿನ ನಿವಾಸಿಯಲ್ಲ. ವಿಧಾನಪರಿಷತ್ ಸದಸ್ಯರಿಗೆ ನೀಡಲಾಗುವ ಟಿಎ/ಡಿಎಗಾಗಿ ಅವರು ಬಾಗಲಕೋಟೆಯ ವಿಳಾಸದ ದಾಖಲೆಯನ್ನು ನೀಡಿದ್ದಾರೆ. ಆದರೆ ಈಗ ಮೇಯರ್ ಚುನಾವಣೆಗಾಗಿ ತರಾತುರಿಯಲ್ಲಿ ಬೆಂಗಳೂರಿನ ನಿವಾಸಿ ಎಂದು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರಿಸಿರುವುದು ತಿಳಿದುಬಂದಿದೆ. ಜನವರಿ 17ರಂದು ಶಾಸಕರು ಫಾರ್ಮ್ 7 ಸಲ್ಲಿಕೆ ಮಾಡಿದ್ದಾರೆ. ಜನವರಿ 20ರಂದು ಅವರ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದೆ. ಆದರೆ, ಮೂರೇ ದಿನದಲ್ಲಿ ಆರ್.ಬಿ.ತಿಮ್ಮಾಪುರ್ ಹೆಸರು ಪಟ್ಟಿಗೆ ಸೇರ್ಪಡೆಯಾಗಿದೆ. ನಿಯಮದ ಪ್ರಕಾರ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ಕನಿಷ್ಠ 7 ದಿನ ಕಾಲಾವಕಾಶ ಬೇಕು.
ಹೀಗೆ, ತಪ್ಪು ಮಾಹಿತಿ ನೀಡಿದವರಿಗೆ ಮತ್ತು ಅಕ್ರಮ ನಡವಳಿಕೆ ತೋರಿದ ಆರ್.ಬಿ.ತಿಮ್ಮಾಪುರ್ ಅವರಿಗೆ ಸಚಿವ ಭಾಗ್ಯ ಕಲ್ಪಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.