
ಬುಲಂದ್‌ಶಹರ್(ಜೂ.05): ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಜೊತೆ ಸಬ್ ಕಾ ವಿಶ್ವಾಸ್ ಎಂಬ ಪದ ಸೇರಿಸಿದ್ದ ಪ್ರಧಾನಿ ಮೋದಿ, ಬಿಜೆಪಿ ಸಂಸದರ ಮೊದಲ ಸಭೆಯಲ್ಲೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದ್ದರು.
ಆದರೆ ಬಿಜೆಪಿಯ ಕೆಲ ಸಂಸದರು ಮತ್ತು ನಾಯಕರು ಅಲ್ಪಸಂಖ್ಯಾತ ಸಮುದಾಯದ ಕುರಿತು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸುತ್ತಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಆಯೋಜಿಸಿದ್ದ ಇಫ್ತಾರ್ ಕೂಟ ಪ್ರಶ್ನಿಸಿದ್ದ ಸಂಸದ ಗಿರಿರಾಜ್ ಸಿಂಗ್ ಕಿಶೋರ್ ಅವರನ್ನು ಗೃಹ ಸಚಿವ ಅಮಿತ್ ಶಾ ಸುಮ್ಮನಾಗಿಸಿದ್ದಾರೆ.
ಆದರೆ ಇದೀಗ ಮತ್ತೋರ್ವ ಸಂಸದ ಅಲ್ಪಸಂಖ್ಯಾತ ಸಮುದಾಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದು, ಬಿಜೆಪಿ ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಲಿದೆ ಕಾದು ನೋಡಬೇಕಿದೆ.
ಈದ್ ಹಬ್ಬದ ಪ್ರಯುಕ್ತ ಮಾಡುವ ನಮಾಜ್ ಮಸೀದಿಯಲ್ಲಿ ಅಥವಾ ಮನೆಯಲ್ಲಿ ಮಾಡಬೇಕೇ ಹೊರತು ಸಾರ್ವಜನಿಕ ರಸ್ತೆಯಲ್ಲಿ ಅಲ್ಲ ಎಂದು ಬುಲಂದ್‌ಶಹರ್ ಬಿಜೆಪಿ ಸಂಸದ ಭೋಲಾ ಸಿಂಗ್ ಹೇಳಿದ್ದಾರೆ.
ಎಲ್ಲ ಧರ್ಮದಲ್ಲೂ ಹಬ್ಬಗಳನ್ನು ಆಚರಿಸಲಾಗುತ್ತದೆ. ಆದರೆ ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಭೋಲಾ ಸಿಂಗ್ ಹೇಳಿದ್ದಾರೆ.
ರಸ್ತೆಯಲ್ಲಿ ನಮಾಜ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹಿಂದೂಗಳ ಹಬ್ಬವಾದ ದೀಪಾವಳಿ, ರಕ್ಷಾ ಬಂಧನ, ದೀಪಾವಳಿ ಸಮಯದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭೋಲಾ ಸಿಂಗ್ ಹೇಳಿದ್ದಾರೆ.
ಈದ್ ಪ್ರಯುಕ್ತ ದೇಶಾದ್ಯಂತ ರಾಜಕಾರಣಿಗಳಿಂದ ದ್ವೇಷದ ಮಾತುಗಳೇ ಕೇಳಿ ಬರುತ್ತಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಈದ್ ಹಬ್ಬವನ್ನು ಬಿಜೆಪಿ ವಿರುದ್ಧ ಕಿಡಿಕಾರಲು ಬಳಸಿಕೊಂಡಿದ್ದಾರೆ.
ತಮ್ಮನ್ನು ರಾಜಕೀಯವಾಗಿ ಮುಗಿಸಲು ಮಾಡಲು ಬಂದವರು ಸರ್ವನಾಶವಾಗುತ್ತಾರೆ ಎಂದು ಮಮತಾ ಹೇಳಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಈದ್ ಪ್ರಯುಕ್ತ ಗಡಿಯಲ್ಲಿ ಪರಸ್ಪರ ಬಂದೂಕು ಹಿಡಿದು ನಿಂತ ಯೋಧರು ಕೂಡ ಸಿಹಿ ಹಂಚಿ ಭಾತೃತ್ವ ಮರೆದರೆ, ದೇಶದೊಳಗಿನ ರಾಜಕಾರಣಿಗಳು ಮಾತ್ರ ಹಬ್ಬದ ಸಂದರ್ಭದಲ್ಲೂ ಪರಸ್ಪರ ಕೆಸರೆರಚುವ ಮೂಲಕ ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವುದು ನೋವಿನ ಸಂಗತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.