ಮೌನಂ ಭಿನ್ನಮತ ಲಕ್ಷಣಂ! ಈಶ್ವರಪ್ಪ ಹೆಸರು ಪ್ರಸ್ತಾಪಿಸದೆಯೇ ಬಿಎಸ್ವೈ ಭಾಷಣ

Published : May 07, 2017, 02:22 AM ISTUpdated : Apr 11, 2018, 12:49 PM IST
ಮೌನಂ ಭಿನ್ನಮತ ಲಕ್ಷಣಂ! ಈಶ್ವರಪ್ಪ ಹೆಸರು ಪ್ರಸ್ತಾಪಿಸದೆಯೇ ಬಿಎಸ್ವೈ ಭಾಷಣ

ಸಾರಾಂಶ

ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಇತರ ಎಲ್ಲ ನಾಯಕರ ಹೆಸರುಗಳನ್ನು ಹೇಳಿದರೂ ಈಶ್ವರಪ್ಪ ಹೆಸರು ಪ್ರಸ್ತಾಪಿಸಲಿಲ್ಲ. ಅವರೊಬ್ಬರ ಹೆಸರನ್ನಷ್ಟೇ ಬಿಟ್ಟರೆ ಅಪಚಾರವಾದೀತು ಎಂಬ ಕಾರಣಕ್ಕಾಗಿ ಜಗದೀಶ್‌ ಶೆಟ್ಟರ್‌ ಹೆಸರನ್ನೂ ಹೇಳಲಿಲ್ಲ. ಬದಲಾಗಿ, ಉಭಯ ಸದನಗಳ ವಿಪಕ್ಷ ನಾಯಕರು ಎಂದು ಸರಿದೂಗಿಸಿದರು. ಸಭೆಯುದ್ದಕ್ಕೂ ಒಳಗೊಳಗೇ ಮುಜುಗರ, ತುಸು ಅವಮಾನ ಅನುಭವಿಸುತ್ತಿದ್ದುದು ಅವರಿಬ್ಬರ ಮುಖದಲ್ಲೂ ಕಂಡು ಬರುತ್ತಿತ್ತು. ಅಷ್ಟರ ಮಟ್ಟಿಗೆ ಭಿನ್ನಮತ ಎದ್ದು ಕಾಣಿಸಿತು. ಜತೆಗೆ ಉಭಯ ನಾಯಕರ ಭಿನ್ನಮತ ಸದ್ಯಕ್ಕೆ ಮುಗಿಯು​ವುದಿಲ್ಲ ಎಂಬ ಸಂದೇಶವನ್ನೂ ನಿಚ್ಚಳವಾಗಿ ನೀಡಿತು.

ಬೆಂಗಳೂರು/ಮೈಸೂರು: ವಾಕ್ಸಮರ, ವಾದ-ಪ್ರತಿವಾದದ ಸ್ವರೂಪದಲ್ಲಿದ್ದ ಬಿಜೆಪಿ​ಯಲ್ಲಿನ ಭಿನ್ನಮತ ಇದೀಗ ನಿವಾರಣೆಯಾಗದಿದ್ದರೂ ಮೌನ ರೂಪ ತಳೆದಿದೆ. ಮೈಸೂರಿನಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿ ವೇಳೆ ಭಿನ್ನಾಭಿಪ್ರಾಯ ಹೊಂದಿರುವ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಇಡೀ ದಿನ ಒಟ್ಟಿಗೆ ಕಳೆದರೂ ಭಿನ್ನಾಭಿ​ಪ್ರಾಯ ಆರಿಲ್ಲ ಎಂಬುದು ಸ್ಪಷ್ಟವಾಗಿ ಕಂಡು ಬಂತು.

ಇಬ್ಬರೂ ಬೆಳಗ್ಗೆಯಿಂದ ರಾತ್ರಿವರೆಗೆ ಒಂದೇ ಸಭಾಂ ಗಣದಲ್ಲಿ, ಒಂದೇ ವೇದಿಕೆಯಲ್ಲಿ ಜತೆಗಿದ್ದರೂ ಪರಸ್ಪರ ಮುಖ ನೋಡಲಿಲ್ಲ, ಮಾತನಾಡಲಿಲ್ಲ. ಇತರರೊಂದಿಗೆ ಬೆರೆತು ನಗಲೂ ಇಲ್ಲ. ಈಶ್ವರಪ್ಪ ಅವರು ಯಡಿಯೂರಪ್ಪ ಅವರತ್ತ ನೋಡಿ ಕೈಮುಗಿದರೂ ಯಡಿಯೂರಪ್ಪ ಮಾತ್ರ ತಲೆ ಎತ್ತಿ ನೋಡಲಿಲ್ಲ.

ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಇತರ ಎಲ್ಲ ನಾಯಕರ ಹೆಸರುಗಳನ್ನು ಹೇಳಿದರೂ ಈಶ್ವರಪ್ಪ ಹೆಸರು ಪ್ರಸ್ತಾಪಿಸಲಿಲ್ಲ. ಅವರೊಬ್ಬರ ಹೆಸರನ್ನಷ್ಟೇ ಬಿಟ್ಟರೆ ಅಪಚಾರವಾದೀತು ಎಂಬ ಕಾರಣಕ್ಕಾಗಿ ಜಗದೀಶ್‌ ಶೆಟ್ಟರ್‌ ಹೆಸರನ್ನೂ ಹೇಳಲಿಲ್ಲ. ಬದಲಾಗಿ, ಉಭಯ ಸದನಗಳ ವಿಪಕ್ಷ ನಾಯಕರು ಎಂದು ಸರಿದೂಗಿಸಿದರು. ಸಭೆಯುದ್ದಕ್ಕೂ ಒಳಗೊಳಗೇ ಮುಜುಗರ, ತುಸು ಅವಮಾನ ಅನುಭವಿಸುತ್ತಿದ್ದುದು ಅವರಿಬ್ಬರ ಮುಖದಲ್ಲೂ ಕಂಡು ಬರುತ್ತಿತ್ತು. ಅಷ್ಟರ ಮಟ್ಟಿಗೆ ಭಿನ್ನಮತ ಎದ್ದು ಕಾಣಿಸಿತು. ಜತೆಗೆ ಉಭಯ ನಾಯಕರ ಭಿನ್ನಮತ ಸದ್ಯಕ್ಕೆ ಮುಗಿಯು​ವುದಿಲ್ಲ ಎಂಬ ಸಂದೇಶವನ್ನೂ ನಿಚ್ಚಳವಾಗಿ ನೀಡಿತು.

ಸಭೆಯಲ್ಲಿ ಉಸ್ತುವಾರಿ ಮುರಳೀಧರ ರಾವ್‌, ಅನಂತಕುಮಾರ್‌, ಡಿ.ವಿ.ಸದಾನಂದಗೌಡ, ಶೆಟ್ಟರ್‌, ಪ್ರಹ್ಲಾದ್‌ ಜೋಶಿ ಮೊದಲಾದ ಹಿರಿಯ ನಾಯಕರಿದ್ದರೂ ಯಾರೊಬ್ಬರೂ ಈ ಉಭಯ ನಾಯಕರನ್ನು ಕೂಡಿಸುವ ಸಾಹಸಕ್ಕೆ ಕೈಹಾಕಲಿಲ್ಲ. ಭಿನ್ನಮತದ ರೂವಾರಿ ಎಂಬ ಆಪಾದನೆಗೊಳಗಾಗಿರುವ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಸಂಜೆವರೆಗೆ ಕಾರ್ಯಕಾರಿಣಿಯತ್ತ ತಲೆ ಹಾಕದೆ ಸಂಜೆ ನಂತರ ಸಭೆಯಲ್ಲಿ ಪಾಲ್ಗೊಂಡರಾದರೂ ಅವರು ಹೆಚ್ಚು ಮಾತಿಗಿಳಿಯಲಿಲ್ಲ ಎನ್ನಲಾಗಿದೆ.

ಇದೆಲ್ಲದರ ಜತೆಗೆ ಈಶ್ವರಪ್ಪ ಅವರನ್ನು ಅನೇಕ ಮುಖಂಡರು ಮೊದಲಿನ ರೀತಿಯಲ್ಲಿ ಸಹಜವಾಗಿ ಮಾತನಾಡಿಸದೆ ಅಂತರ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿದ್ದರು. ಎಲ್ಲಿ ಅವರನ್ನು ಮಾತನಾಡಿಸಿದರೆ ಯಡಿಯೂರಪ್ಪ ಬೆಂಬಲಿಗರು ತಮ್ಮನ್ನು ಭಿನ್ನರ ಗುಂಪಿಗೆ ಸೇರಿಸಿಬಿಡುತ್ತಾರೊ ಎಂಬ ಆತಂಕವೂ ಇದ್ದಿರಬಹುದು. ಒಟ್ಟಾರೆ, ಕಳೆದ ಬಾರಿ ಕಲಬುರಗಿಯಲ್ಲಿ ನಡೆದ ಕಾರ್ಯಕಾರಿಣಿಯಂತೆ ಮೈಸೂರಿನ ಕಾರ್ಯಕಾರಿಣಿ ಸಭೆಯಲ್ಲಿ ವಾಕ್ಸಮರ, ಕುರ್ಚಿಗಳನ್ನು ಎಸೆ ದಾಡಿದ ರೀತಿ ಗದ್ದಲ ನಡೆಯಲಿಲ್ಲ ಎಂಬುದಕ್ಕೆ ಬಿಜೆಪಿ ನಾಯಕರು ಸಮಾಧಾನಪಟ್ಟು ಕೊಳ್ಳಬಹುದು.

ವಾಸ್ತವವಾಗಿ ಈಶ್ವರಪ್ಪ ಅವರು ಈ ಕಾರ್ಯಕಾರಿಣಿ ಸಭೆಗೆ ಗೈರು ಹಾಜರಾಗುವುದಕ್ಕೇ ನಿರ್ಧರಿಸಿದ್ದರು. ಸಂಘ ಪರಿವಾರ ಮೂಲದ ಸಂತೋಷ್‌ ಅವರ ವಿರುದ್ಧ ಯಡಿಯೂರಪ್ಪ ಆಪಾದನೆ ಮಾಡಿದ್ದು ತಮಗೂ ಸೇರಿದಂತೆ ಅನೇಕರಿಗೆ ನೋವು ತಂದಿದೆ ಎಂದು ಹೇಳಿದ್ದ ಅವರು ಅದೇ ಕಾರಣ ಮುಂದೊಡ್ಡಿ ಸಭೆಯಿಂದ ದೂರ ಉಳಿಯಲು ಬಯಸಿದ್ದರು. ಜತೆಗೆ ಸೋಮವಾರ ರಾಯಚೂರಿನಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌'ನ ಸಭೆಯಲ್ಲಿ ಭಾಗವಹಿಸಲು ಸಜ್ಜಾಗಿದ್ದರು.

ಆದರೆ, ಶುಕ್ರವಾರ ಮಧ್ಯಾಹ್ನ ಈಶ್ವರಪ್ಪ ಅವರ ಲೆಕ್ಕಾಚಾರ ತಲೆಕೆಳಗಾಯಿತು. ಪಕ್ಷದ ಉಸ್ತುವಾರಿ ಮುರಳೀಧರ ರಾವ್‌ ಅವರು ದೂರವಾಣಿ ಮೂಲಕ ಈಶ್ವರಪ್ಪ ಅವರನ್ನು ಸಂಪರ್ಕಿಸಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳದಿದ್ದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಯಾವುದೇ ಕಾರಣಕ್ಕೂ ಗೈರು ಹಾಜರಾಗುವಂತಿಲ್ಲ ಎಂಬ ಖಡಕ್‌ ಸಂದೇಶ ನೀಡಿದರು. ಜತೆಗೆ ಯಡಿಯೂರಪ್ಪ ಅವರ ಬಿಗಿಪಟ್ಟಿನ ಹಿನ್ನೆಲೆಯಲ್ಲಿ ರಾಯಚೂರಿನ ಬ್ರಿಗೇಡ್‌ ಸಭೆಯನ್ನು ಮುಂದೂಡುವಂತೆಯೂ ಸೂಚನೆ ನೀಡಿದರು. ಇದು ಈಶ್ವರಪ್ಪ ಅವರಿಗೆ ಆದ ಹಿನ್ನಡೆಯೇ ಸರಿ.

ಪರಿಣಾಮ, ತಮ್ಮ ನಿರ್ಧಾರ ಬದಲಿಸಿದ ಈಶ್ವರಪ್ಪ ಅವರು ರಾಯಚೂರಿನ ಬ್ರಿಗೇಡ್‌ ಸಭೆಯನ್ನು ಮುಂದೂಡಿ ಮೈಸೂರಿನ ಪಕ್ಷದ ಕಾರ್ಯಕಾರಿಣಿ ಸಭೆಗೆ ಹಾಜರಾದರು. ಶನಿವಾರ ಬೆಳಗ್ಗೆ ಈಶ್ವರಪ್ಪ ಅವರು ಸಭೆಗೂ ಮುನ್ನ ಚಾಮುಂಡಿಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಅಗ್ರಹಾರದಲ್ಲಿರುವ ಪಾತಾಳ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಕಾರ್ಯಕಾರಿಣಿ ಸಭೆಯತ್ತ ಹೆಜ್ಜೆ ಹಾಕಿದರು.

ಕಾರ್ಯಕಾರಿಣಿ ಸಭೆಯ ವೇದಿಕೆ ಮೇಲೇರಿ ದ ಈಶ್ವರಪ್ಪ ಅವರು ಅಲ್ಲಿದ್ದ ಒಬ್ಬೊಬ್ಬ ನಾಯಕರಿಗೆ ಕೈಕುಲುಕುತ್ತ ಬರುವಾಗ ಯಡಿ ಯೂರಪ್ಪ ಅವರು ತಲೆಬಗ್ಗಿಸಿ ಚೀಟಿಯಲ್ಲಿ ಏನನ್ನೋ ಬರೆದುಕೊಳ್ಳುತ್ತಿದ್ದರು. ಈಶ್ವರಪ್ಪ ಬಂದಿದ್ದು ಅವರಿಗೆ ಗೊತ್ತಾಯಿತೋ ಅಥವಾ ಇಲ್ಲವೋ; ಒಟ್ಟಿನಲ್ಲಿ ಯಡಿಯೂರಪ್ಪ ತಲೆ ಮಾತ್ರ ಎತ್ತಲಿಲ್ಲ. ಈಶ್ವರಪ್ಪ ಒಂದು ಕ್ಷಣ ನೋಡಿದರೂ ಯಡಿಯೂರಪ್ಪ ಅವರನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ.

ಇಂದು ಈಶ್ವರಪ್ಪ ಭಾಷಣಕ್ಕೆ ಅವಕಾಶ:
ಮೈಸೂರು: ಮೊದಲು ಸಿದ್ಧಗೊಂಡಿದ್ದ ಕಾರ್ಯಕಾರಿಣಿಯ ಗೋಷ್ಠಿಗಳಲ್ಲಿ ಈಶ್ವರಪ್ಪ ಹೆಸರನ್ನು ಕೈಬಿಡಲಾಗಿತ್ತು. ಇದೀಗ ಕಾರ್ಯಕಾರಿಣಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರಿಗೆ ಭಾನುವಾರ ಮಾತನಾಡಲು ಅವಕಾಶ ನೀಡಲಾಗಿದೆ. 

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಮುಂದುವರಿಕೆ ಸಂಬಂಧ ರಾಷ್ಟ್ರೀಯ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ರಾಯಣ್ಣ ಬ್ರಿಗೇಡ್‌'ನಲ್ಲಿ ರಾಜಕೀಯ ಚಟುವಟಿಕೆ ನಡೆಸುವುದಿಲ್ಲ. ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ಮುಂದುವರೆಯಲಿವೆ.
- ಕೆ.ಎಸ್‌.ಈಶ್ವರಪ್ಪ, ಬಿಜೆಪಿ ನಾಯಕ

ಕನ್ನಡಪ್ರಭ ವಾರ್ತೆ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

1971ರ ಯುದ್ಧದಲ್ಲಿ ಭಾರತ ಮುಳುಗಿಸಿದ್ದ ಪಿಎನ್‌ಎಸ್‌ ಘಾಜಿ ಸಬ್‌ಮರೀನ್‌ ನೌಕೆ ಪುನಃ ಪಡೆದ ಪಾಕಿಸ್ತಾನ
ರಾಮನಗರದಲ್ಲಿದೆ ವಾರಸುದಾರರಿಲ್ಲದ 48.69 ಕೋಟಿ ರು! ಹಣ ವಾಪಸ್ ಹಿಂದಿರುಗಿಸಲು ನಿಮ್ಮ ಹಣ-ನಿಮ್ಮ ಹಕ್ಕು ಅಭಿಯಾನ