ಇಂದು ಬಿಜೆಪಿಯಿಂದ ಉತ್ತರಪ್ರದೇಶ ಸಿಎಂ ಆಯ್ಕೆಯ ಕಸರತ್ತು

By Suvarna Web DeskFirst Published Mar 16, 2017, 2:07 AM IST
Highlights

ಇವತ್ತು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಅಮಿತ್​ ಶಾ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.

ನವದೆಹಲಿ(ಮಾ. 16): ಉತ್ತರಪ್ರದೇಶದಲ್ಲಿ ಹಿಂದೆಂದೂ ಕಾಣದಂತ ಗೆಲುವು ಸಾಧಿಸಿರುವ ಕಮಲ ಪಾಳಯದಲ್ಲಿ ಸಿಎಂ ಆಯ್ಕೆ ವಿಚಾರ ತೀವ್ರ ಚರ್ಚೆಗೆ ಬಂದಿದೆ. ಅದ್ರಲ್ಲೂ ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ದೇಶಾದ್ಯಂತ ಮನೆ ಮಾಡಿದೆ. ಈ ಬಗ್ಗೆ ಇವತ್ತು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಅಮಿತ್​ ಶಾ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಕೆಲವು ಆಕಾಂಕ್ಷಿಗಳ ಬೆಂಬಲಿಗರು ಈಗಾಗಲೇ ಲಾಬಿ ಮಾಡಲೂ ಆರಂಭಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜೊತೆ  ಸೇರಿ ಪಕ್ಷವನ್ನು ಗೆಲುವಿನ ದಡ ಸೇರಿಸಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೇಶವ ಪ್ರಸಾದ್‌ ಮೌರ್ಯ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಿಶ್ವಾಸವನ್ನು ಅವರ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಚೋದನಾತ್ಮಕ ಹೇಳಿಕೆಯಿಂದ ವಿವಾದ ಸೃಷ್ಟಿಸುವ ಗೋರಖ್‌'ಪುರ ಸಂಸದ ಯೋಗಿ ಆದಿತ್ಯನಾಥ್‌ ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿ ಗುರುತಿಸಿಕೊಂಡವರು. ಜೊತೆಗೆ ಉತ್ತರ ಪ್ರದೇಶ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಲಖನೌ ಮೇಯರ್‌ ದಿನೇಶ್‌ ಶರ್ಮಾ ಅವರ ಹೆಸರೂ ಚಾಲ್ತಿಯಲ್ಲಿದೆ.

ಕೇಶವ ಪ್ರಸಾದ್​ ಮೌರ್ಯ
* ಹಿಂದುಳಿದ ವರ್ಗಗಳ ಮುಖಂಡ, ಕುರ್ಮಿ ಜನಾಂಗದ ನಾಯಕ ಕೇಶವ್  ಮೌರ್ಯ
* ವಿಹೆಚ್ ಪಿ ಹಿನ್ನೆಲೆ ಹೊಂದಿರುವ ಕೇಶವ್ ಮೌರ್ಯ ಕೇಂದ್ರ ಸಚಿವರಾಗಿದ್ದಾರೆ
* ಉತ್ತರ ಪ್ರದೇಶ ಬಿಜೆಪಿ ಘಟಕದ ಸಾರಥ್ಯ, ಈ ಬಾರಿಯ ಚುನಾವಣೆಯ ಸಾರಥಿ
* ಲೋಕಸಭಾ ಚುನಾವಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಕೇಶವ್​ ಮೌರ್ಯ
* ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಉತ್ತಮ ಒಡನಾಟ

ರಾಜನಾಥ್ ಸಿಂಗ್
* ಹಾಲಿ ಕೇಂದ್ರ ಗೃಹ ಸಚಿವ, ಒಂದು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ
* ವಾಜಪೇಯಿ ಸರಕಾರದಲ್ಲಿ ಕೃಷಿ ಸಚಿವ, ಎರಡು ಬಾರಿ ಬಿಜೆಪಿ ಅಧ್ಯಕ್ಷ
* ಈ ಬಾರಿಯ ಚುನಾವಣೆಯ ಸ್ಟಾರ್ ಕ್ಯಾಂಪೇನರ್ ಆಗಿದ್ದ ರಾಜನಾಥ್​​
* ನರೇಂದ್ರ ಮೋದಿಗೆ ರಾಜತಾಂತ್ರಿಕ ವಿಚಾರದಲ್ಲಿ ಆಪ್ತ ಸಲಹೆಗಾರ
* ಉತ್ತರ ಪ್ರದೇಶದಲ್ಲಿ ಪ್ರಬಲ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು

ಯೋಗಿ ಆದಿತ್ಯನಾಥ್
* ಪೂರ್ವಾಂಚಲ ಭಾಗದ ಪ್ರಬಲ ಮುಖಂಡರಾಗಿರುವ ಯೋಗಿ ಆದಿತ್ಯಾನಾಥ್
* ಆರ್ ಎಸ್ ಎಸ್ ಮುಖಂಡರ ಬೆಂಬಲ ಸಂಸದ ಯೋಗಿ ಆದಿತ್ಯಾನಾಥ್
* ವಿವಾದಾತ್ಮಕ ಹೇಳಿಕೆಗಳು ಯೋಗಿ ಆದಿತ್ಯಾನಾಥ್ ಸಿಎಂ ಕನಸಿಗೆ ಭಂಗ ತರುವ ಸಾಧ್ಯತೆ
* ಸಂಸದ ಯೋಗಿ ಆದಿತ್ಯಾನಾಥ್​​ ಅತೀ ಚಿಕ್ಕವಯಸ್ಸಿನಲ್ಲೇ ಸಂಸದ ಖ್ಯಾತಿ
* ಬಲಿಷ್ಠ ರಜಪೂತ ಕುಟುಂಬದ ಹಿನ್ನೆಲೆ ಯೋಗಿ ಆದಿತ್ಯನಾಥ್'​​ಗಿದೆ

click me!