ಶಾರದಾ ನಾಯ್ಕಗೆ ಬಿಜೆಪಿ ಕಾರವಾರ ಟಿಕೆಟ್?

By Suvarna Web DeskFirst Published Nov 6, 2017, 4:05 PM IST
Highlights

ಮಹಿಳೆಗೆ ಮಣೆ? ಚುನಾವಣೆಗೆ ಸ್ಪರ್ಧಿಸಲು ಮಾಜಿ ಪತ್ರಕರ್ತೆ ಸದ್ದಿಲ್ಲದೆ ತಯಾರಿ | ಆನಂದ ಅಸ್ನೋಟಿಕರ್ ನಿರಾಸಕ್ತಿ: ಇನ್ನಿತರ ಮುಖಂಡರಿಂದ ಲಾಬಿ

ಬೆಂಗಳೂರು: ತೇಜಸ್ವಿನಿಗೌಡ ನಂತರ ಮತ್ತೊಬ್ಬ ಮಾಜಿ ಪತ್ರಕರ್ತೆ ಶಾಸನ ಸಭೆ ಪ್ರವೇಶಿಸುವ ಸಿದ್ಧತೆ ಭರದಿಂದ ನಡೆಯತೊಡಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಪತ್ರಕರ್ತೆ ಹಾಗೂ ಬೆಂಗಳೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾರದಾ ನಾಯ್ಕ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

ಕಾರವಾರ-ಅಂಕೋಲಾ ಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಹಾಗೂ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಬಲ ಕ್ಷತ್ರಿಯ ಕೋಮಾರ ಪಂತ ಸಮಾಜಕ್ಕೆ ಸೇರಿದ ಶಾರದಾ ನಾಯ್ಕ ಕಳೆದ ಕೆಲವು ತಿಂಗಳಿಂದ ಈ ಭಾಗದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮೂಲತಃ ಈ ಕ್ಷೇತ್ರದವರೇ ಆಗಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಕಾರವಾರದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸನ್ಮಾನ ಸಮಾರಂಭದ ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಷ ಕೆ.ಜಿ.ನಾಯ್ಕ, ಮುಂತಾದ ನಾಯಕರುಗಳ ಜೊತೆ ಶಾರದಾ ನಾಯ್ಕ ಕಾಣಿಸಿಕೊಂಡಿದ್ದರು. ನಂತರ ಅಕ್ಟೋಬರ್ 24ರಂದು ಅಂಕೋಲಾದಲ್ಲಿ ನಡೆದ ಬಿಜೆಪಿಯ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮಾಜಿ ಶಾಸಕ ಗಂಗಾಧರ ಭಟ್, ಮುಖಂಡರಾದ ನಾಗರಾಜ್ ನಾಯಕ್, ಪಕ್ಷದ ಕಾರ್ಯಕಾರಿಣಿ ಸದಸ್ಯೆ

ರೂಪಾಲಿ ನಾಯ್ಕ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಮು ರಾಯ್ಕರ್ ಮೊದಲಾದವರೂ ಈ ಕ್ಷೇತ್ರದಲ್ಲಿ ಆಕಾಂಕ್ಷಿ ಗಳಾಗಿದ್ದಾರೆ. ಆದರೆ, ಮುಂಬರುವ ಚುನಾವಣೆಯಲ್ಲಿ ಹೊಸ ಮುಖದ ಜತೆಗೆ ಮಹಿಳೆಯರು ಹಾಗೂ ಯುವ ಸಮುದಾಯಕ್ಕೆ ಪ್ರಾಧಾನ್ಯತೆ ಕೊಡಬೇಕು ಎಂಬ ಇಂಗಿತವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗಂಭೀರವಾಗಿ ವ್ಯಕ್ತಪಡಿಸುತ್ತಿರುವುದರಿಂದ ಶಾರದಾ ನಾಯ್ಕ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ.

ಸದ್ಯಕ್ಕೆ ಕಾರವಾರದಲ್ಲಿ ಹಾಲಿ ಪಕ್ಷೇತರ ಶಾಸಕ ಸತೀಶ್ ಸೈಲ್ ಬೇಲೆಕೇರಿ ಕಬ್ಬಿಣದ ಅದಿರು ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ಜೈಲಿನಿಂದ ಹೊರಬಂದಿದ್ದರೂ ಸಿಬಿಐ ಕುಣಿಕೆ ಇನ್ನೂ ತೂಗುತ್ತಲೇ ಇದೆ. ಕಾಂಗ್ರೆಸ್ ಟಿಕೆಟ್ ಅವರಿಗೆ ಲಭಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಇನ್ನು ಬಿಜೆಪಿಯಿಂದ ಕಳೆದ ಬಾರಿ ಶಾಸಕರಾಗಿದ್ದ ಆನಂದ್ ಅಸ್ನೋಟಿಕರ್ ಈಗ ಪಕ್ಷದಿಂದ ದೂರವೇ ಉಳಿದಿದ್ದಾರೆ.

ಪಕ್ಷವೂ ಅವರನ್ನು ದೂರ ಇರಿಸಿದೆ. ಉತ್ತರ ಕನ್ನಡದ ಆರು ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದರಲ್ಲಿ ಮಾತ್ರ ಬಿಜೆಪಿ ಗೆದ್ದಿದ್ದು, ಈ ಬಾರಿ ಆರರ ಪೈಕಿ ಐದು ಕ್ಷೇತ್ರಗಳಲ್ಲಾದರೂ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಕಾರವಾರ ಸಂಸದರೂ ಆಗಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಈಗಿಂದಲೇ ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗಿದೆ.

ಅನೇಕ ವರ್ಷಗಳ ಕಾಲ ಪತ್ರಿಕೆ ಮತ್ತು ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ ಶಾರದಾ ನಾಯ್ಕ ಅವರು ನಂತರ ಆರೋಗ್ಯ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ, ವಿಶ್ವಸಂಸ್ಥೆಯ ಎಚ್‌ಐವಿ ಏಡ್ಸ್ ನಿರ್ಮೂಲನಾ ಯೋಜನೆ ಹೀರೋಸ್ ಪ್ರಾಜೆಕ್ಟ್‌ನ ರಾಜ್ಯ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಬಿಜೆಪಿ ಸೇರ್ಪಡೆಯಾಗಿ ರಾಜಕೀಯ ಆರಂಭಿಸಿದ ಅವರು, ಸದ್ಯ ಬಿಜೆಪಿ ಬೆಂಗಳೂರು ನಗರ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ವಿಷಯಾಧಾರಿತ ಹೋರಾಟ ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಅವರ ಕೆಲಸದ ಬಗ್ಗೆ ಪಕ್ಷದ ಹಿರಿಯ ನಾಯಕರಿಗೂ ಮೆಚ್ಚುಗೆ ಇದೆ. ಈ ಬಗ್ಗೆ ತಮ್ಮನ್ನು ಸಂಪರ್ಕಿಸಿದ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಶಾರದಾ ನಾಯ್ಕ, ನಾನು ಬರವಣಿಗೆ ಆರಂಭಿಸಿದ್ದೇ ಉತ್ತರ ಕನ್ನಡ ಜಿಲ್ಲೆಯಿಂದ. ಜಿಲ್ಲೆಯ ಎಲ್ಲ ಜನರ ಪ್ರೀತಿ ನನಗಿದೆ. ಕಾರವಾರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷ ನನ್ನನ್ನು ಗುರುತಿಸುವ ಭರವಸೆ ಇದೆ ಎಂದು ಪ್ರತಿಕ್ರಿಯಿಸಿದರು.

 

click me!