
ಮಂಗಳೂರು(ಡಿ.17): ‘ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳ ಊಟವನ್ನು ಸರ್ಕಾರ ಕಸಿದುಕೊಂಡರೂ ನಾವು ಅವರ ಹಸಿವು ನೀಗಿಸುತ್ತೇವೆ. ಬಿಜೆಪಿ ಮಹಿಳಾ ಮೋರ್ಚಾದಿಂದ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ ಪ್ರತಿ ಸಂಕ್ರಾಂತಿ ದಿನ ಶಾಲೆಗೆ ಅಕ್ಕಿ ನೀಡುತ್ತೇವೆ’ ಎಂದು ಘೋಷಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಈಗ ಮಾತು ತಪ್ಪಿದ್ದಾರೆ. ಮಾತ್ರವಲ್ಲ, ಶಾಲೆ ಮಕ್ಕಳನ್ನೂ ಮರೆತಿದ್ದಾರೆ.
ಹೌದು, ಕಳೆದ ಆಗಸ್ಟ್ ತಿಂಗಳಿನಿಂದ ನಾಲ್ಕೈದು ಸಂಕ್ರಾಂತಿಗಳು ಬಂದು ಹೋದರೂ ಕಲ್ಲಡ್ಕ ಶಾಲೆಗೆ ಮಹಿಳಾ ಮೋರ್ಚಾದಿಂದ ಅಕ್ಕಿ ಸಂದಾಯವಾಗಿದ್ದು ಕೇವಲ ಒಂದೇ ಬಾರಿ. ಸರ್ಕಾರದಿಂದ ಬರುವ ಅನುದಾನ ನಿಂತರೂ ಐದು ತಿಂಗಳಿನಿಂದ ಕಲ್ಲಡ್ಕ ಶಾಲೆ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಮಾತ್ರ ನಿಂತಿಲ್ಲ. ಶಾಲೆಯ 3500ಕ್ಕೂ ಅಧಿಕ ಮಕ್ಕಳ ಬಿಸಿಯೂಟ ಅವರಿವರು ದಾನವಾಗಿ ನೀಡಿದ ದೇಣಿಗೆಯಲ್ಲೇ ಮುಂದುವರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಭರವಸೆ ನೀಡಿ ಮರೆತ ಶೋಭಾ ಕರಂದ್ಲಾಜೆ ಅವರ ‘ಭಿಕ್ಷೆಯ ಅಕ್ಕಿ’ಗಾಗಿ ಮಕ್ಕಳು ಎದುರು ನೋಡುತ್ತಿದ್ದಾರೆ.
ಅದ್ಧೂರಿ ಚಾಲನೆ ಠುಸ್ಸಾಯ್ತು: ಆ.1ರಿಂದ ಅನ್ವಯವಾಗುವಂತೆ ಕಲ್ಲಡ್ಕದ ಶ್ರೀದೇವಿ ವಿದ್ಯಾ ಕೇಂದ್ರ ಮತ್ತು ಪುಣಚದ ಶ್ರೀದೇವಿ ಪ್ರೌಢಶಾಲೆಗೆ ಕೊಲ್ಲೂರು ದೇವಾಲಯದಿಂದ ಸಿಗುತ್ತಿದ್ದ ನೆರವನ್ನು ಸರ್ಕಾರ ಸ್ಥಗಿತಗೊಳಿಸಿದ್ದು, ರಾಜ್ಯಾದ್ಯಂತ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಬಿಜೆಪಿಯ ಘಟಾನುಘಟಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಇದರ ಬೆನ್ನಲ್ಲೆ ಅ.17ರಂದು ಮಂಗಳೂರಿಗೆ ಆಗಮಿಸಿದ ಸಂಸದೆ ಶೋಭಾ, ಭಾರಿ ಪ್ರಚಾರದೊಂದಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಅವರ ಮನೆಯ ವಠಾರದಲ್ಲಿ ಬಟ್ಟೆಯ ಜೋಳಿಗೆ ಹಿಡಿದು ನಾಲ್ಕೈದು ಮನೆಗಳಿಂದ ಹಿಡಿ ಅಕ್ಕಿ ಭಿಕ್ಷೆ ಎತ್ತಿ ಅದ್ಧೂರಿ ಚಾಲನೆ ನೀಡಿದ್ದರು. ಇನ್ಮುಂದೆ ಪ್ರತಿ ಸಂಕ್ರಾಂತಿಯ ದಿನ ಜಿಲ್ಲೆಯ ತಾಯಂದಿರಿಂದ ಹಿಡಿ ಅಕ್ಕಿ ಸಂಗ್ರಹಿಸಿ ಶಾಲೆಗೆ ನೀಡುತ್ತೇವೆ. ಸರ್ಕಾರ ನೀಡದಿದ್ದರೇನಂತೆ, ಮಕ್ಕಳ ಹಸಿವನ್ನು ನಾವು ನೀಗಿಸುತ್ತೇವೆ. ಈ ಕಾರ್ಯಕ್ರಮ ಅಭಿಯಾನದ ರೀತಿ ಮುಂದುವರಿಯಲಿದೆ ಎಂದು ವಾಗ್ದಾನ ಮಾಡಿದ್ದರು.
ಅರೆಕಾಸಿನ ‘ಮಜ್ಜಿಗೆ’: ಇದಾಗಿ ಕೆಲ ಸಮಯದ ಬಳಿಕ ದ.ಕ. ಜಿಲ್ಲಾ ಮಹಿಳಾ ಮೋರ್ಚಾದಿಂದ ಒಂದು ಸಾರಿ ಮಾತ್ರ ಶಾಲೆಗೆ ಅಕ್ಕಿ ಸಂದಾಯವಾಗಿದೆ. ಕಲ್ಲಡ್ಕ ಶಾಲೆಗೆ ಒಮ್ಮೆ ಮಾತ್ರ 11 ಕ್ವಿಂಟಲ್ ಅಕ್ಕಿ ನೀಡಿದ್ದೇವೆ. ಪುಣಚ ಶಾಲೆಗೂ 5 ಕ್ವಿಂಟಲ್'ನಷ್ಟು ನೀಡಿದ್ದೇವೆ ಎಂದು ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ಕಲ್ಲಡ್ಕ ಶಾಲೆಯಲ್ಲಿ ಪ್ರತಿದಿನ 3500ಕ್ಕೂ ಅಧಿಕ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡಲಾಗುತ್ತದೆ. ಬಿಜೆಪಿ ನೀಡಿದ 11 ಕ್ವಿಂಟಲ್ ಅಕ್ಕಿ ಅರೆಕಾಸಿನ ಮಜ್ಜಿಗೆಯಂತಾಗಿದೆ. ಹೆಚ್ಚೆಂದರೆ ವಾರದ ಖರ್ಚಿಗಷ್ಟೇ ಈ ಅಕ್ಕಿ ಸಾಕಾಗಿದೆ. ಜೋಳಿಗೆ ಹಿಡಿದು ಭಿಕ್ಷೆ ಎತ್ತಿದ ಬಳಿಕ ಸಂಸದೆ ಶೋಭಾ ಕೆಲ ಬಾರಿ ಮಂಗಳೂರಿಗೆ ಬಂದು ಹೋಗಿದ್ದರು. ಆದರೆ ಕಲ್ಲಡ್ಕ ಶಾಲೆಗೆ ನೀಡಿದ ಭರವಸೆಯ ಋಣ ಸಂದಾಯ ಮಾಡುವ ಬಗ್ಗೆ ಮಾತ್ರ ತುಟಿ ಪಿಟಿಕ್ಕೆಂದಿಲ್ಲ. ಈ ಬಗ್ಗೆ ಪ್ರತಿಕ್ರಿಯೆಗಾಗಿ ಕರೆ ಮಾಡಿದರೂ ಅವರು ಸ್ವೀಕರಿಸಿಲ್ಲ. ಕೊಲ್ಲೂರು ದೇವಾಲಯದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚದ ಶ್ರೀದೇವಿ ವಿದ್ಯಾಕೇಂದ್ರವನ್ನು 2007ರಲ್ಲಿ ದತ್ತು ಸ್ವೀಕಾರಕ್ಕೆ ನಿರ್ಧಾರ ಮಾಡಲಾಗಿತ್ತು. ಕಳೆದ 10 ವರ್ಷಗಳಿಂದ ಈ ಶಾಲೆಗಳಿಗೆ ದೇವಾಲಯದ ನೆರವು ಪ್ರತಿವರ್ಷ ದೊರೆಯುತ್ತಿತ್ತು. ಅದರಲ್ಲೇ ಮಕ್ಕಳ ಬಿಸಿಯೂಟದ ಖರ್ಚು ನೀಗುತ್ತಿತ್ತು. ಆ ದತ್ತು ಸ್ವೀಕಾರದ ಆದೇಶವನ್ನು ಈ ವರ್ಷ ರಾಜ್ಯ ಸರ್ಕಾರ ರದ್ದುಗೊಳಿಸಿ ಜು.31ರಂದು ಆದೇಶ ಹೊರಡಿಸಿತ್ತು.
ಭಿಕ್ಷೆ ಬೇಡಿಯಾದರೂ ಊಟ ಹಾಕ್ತೇವೆ: ಭಟ್
ಶೋಭಾ ಅವರು ಅಕ್ಕಿ ಭಿಕ್ಷೆ ನೀಡುವುದಾಗಿ ಹೇಳಿದ ಬಳಿಕ ಒಂದು ಬಾರಿ ಮಾತ್ರ ನಮ್ಮ ಶಾಲೆಗೆ ಅಕ್ಕಿ ಬಂದಿದೆ. ಶಾಲೆಯಲ್ಲಿ 3500 ಮಕ್ಕಳಿಗೆ ನಿತ್ಯ ಬಿಸಿಯೂಟ ನೀಡುತ್ತೇವೆ. ದಿನಕ್ಕೆ 4 ಕ್ವಿಂಟಾಲ್ ಅಕ್ಕಿ ಬೇಕಾಗುತ್ತದೆ. ಏನೇ ಆದರೂ ಬಿಸಿಯೂಟ ಮಾತ್ರ ನಿಲ್ಲಿಸುವುದಿಲ್ಲ. ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಊಟ ಹಾಕುವುದಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ರೂವಾರಿ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ವರದಿ: ಸಂದೀಪ್ ವಾಗ್ಲೆ ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.