ಬಿಜೆಪಿ ನಾಯಕ ರಹೀಂ ಉಚ್ಚಿಲ್'ರನ್ನು ಶ್ರೀ ಶ್ರೀ ರಹೀಮ್ ಪೂಜಾರಿಯನ್ನಾಗಿ ಮಾಡಿದ ಫೇಸ್ಬುಕ್ ಪೋಸ್ಟ್..!

By Suvarna Web DeskFirst Published Jul 21, 2017, 11:40 AM IST
Highlights

ರಹೀಮ್ ಉಚ್ಚಿಲ್ ಅವರು ವಿಲಿಯಮ್ ಪಿಂಟೋ ವಿರುದ್ಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಠದಲ್ಲಿ ತಾನು ತೆಗೆಸಿಕೊಂಡ ಫೋಟೋ ಇಟ್ಟುಕೊಂಡು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಫೇಸ್ಬುಕ್'ನಲ್ಲಿ ಪೋಸ್ಟ್ ಹಾಕಲಾಗಿದೆ ಎಂದು ಉಚ್ಚಿಲ್ ಅವರು ದೂರಿದ್ದಾರೆ.

ಬೆಂಗಳೂರು(ಜುಲೈ 21): ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಹೋಗಿ ಗುರುಗಳ ಗದ್ದುಗೆ ಎದರು ಫೋಟೋ ತೆಗೆಸಿಕೊಂಡಿದ್ದ ಬಿಜೆಪಿ ಯುವ ಮುಖಂಡ ರಹೀಮ್ ಉಚ್ಚಿಲ್ ಅವರನ್ನು ಫೇಸ್ಬುಕ್'ನಲ್ಲಿ ಅವಹೇಳನ ಮಾಡಿ ಪೋಸ್ಟ್ ಹಾಕಲಾಗಿದೆ. ವಿಲಿಯಮ್ ಪಿಂಟೋ ಎಂಬ ವ್ಯಕ್ತಿಯು ರಹೀಮ್ ಉಚ್ಚಿಲ್ ಅವರ ಫೋಟೋ ಹಾಕಿ "ಶ್ರೀ ಶ್ರೀ ರಹೀಮ್ ಪೂಜಾರಿ" ಎಂದು ಬಣ್ಣಿಸಿದ್ದಾನೆ. ರಹೀಮ್ ಪೂಜಾರಿ ಅವರು ಶ್ರೀ ಸಿದ್ದಾರೂಢ ಮಠ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕವಾಗಿದ್ದಾರೆ ಎಂದೂ ವ್ಯಂಗ್ಯ ಮಾಡಿದ್ದಾನೆ. ನಿನ್ನೆ ಹಾಕಿದ ಈ ಪೋಸ್ಟ್ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದೆ.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿರುವ ರಹೀಂ ಉಚ್ಚಿಲ್ ಅವರು ಈ ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿ, ಫೇಸ್ಬುಕ್'ನಲ್ಲಿ ತಮ್ಮನ್ನು ಅವಹೇಳನ ಮಾಡಿರುವುದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. ತಾವೊಬ್ಬ ಪ್ರಾಮಾಣಿಕ ಮುಸ್ಲಿಮನಾಗಿದ್ದು, ಅನ್ಯ ಧರ್ಮವನ್ನು ಗೌರವಿಸಬೇಕೆಂದು ಇಸ್ಲಾಮ್ ತನಗೆ ಕಲಿಸಿಕೊಟ್ಟಿದೆ ಎಂದು ತಮ್ಮ ಟೀಕಾಕಾರರಿಗೆ ಚಾಟಿ ಬೀಸಿದ್ದಾರೆ. "ನಾನು ಅಲ್ಲಾಹುವನ್ನು ನಂಬಿರುವ, ಆರಾಧಿಸುವ ವ್ಯಕ್ತಿ. ಬೇರೆ ಧರ್ಮಕ್ಕೆ ಗೌರವ ಕೊಡಬೇಕೆಂದು ನನ್ನ ಧರ್ಮ ಹೇಳಿಕೊಟ್ಟಿದೆ. ಇವರು ಯಾರು ನನಗೆ ಫತ್ವಾ ಹೊರಡಿಸಲು?" ಎಂದು ರಹೀಮ್ ಉಚ್ಚಿಲ್ ಹೇಳಿದ್ದಾರೆ.

ವಿಲಿಯಂ ಪಿಂಟೋ ಬರೆದದ್ದೇನು?
ಹುಬ್ಬಳ್ಳಿಯ ಹೆಸರಾಂತ ಶ್ರೀ ಸಿದ್ದಾರೂಢ ಮಠ ದೇವಸ್ಥಾನದ ಮುಖ್ಯ ಅರ್ಚಕರಾಗಿ ರಹೀಂ ಉಚ್ಚಿಲ್ ಅವರನ್ನು ನೇಮಕ ಮಾಡಲಾಯಿತು. ಇಂದು ಮುಂಜಾನೆ ನಡೆದ ಆಡಳಿತ ಮಂಡxಳಿಯ ಸದಸ್ಯರ ಸಭೆಯಲ್ಲಿ ಒಮ್ಮತಾಭಿಪ್ರಾಯದೊಂದಿಗೆ ಶ್ರೀ ಶ್ರೀ ರಹೀಂ ಪೂಜಾರಿ ಅವರನ್ನು ಅನುಮೋದಿಸಿ ನೇಮಕ ಮಾಡಲಾಯಿತು ಎಂದು ತಿಳಿದುಬಂದಿದೆ

ಪಿಂಟೋ ವಿರುದ್ಧ ದೂರು:
ರಹೀಮ್ ಉಚ್ಚಿಲ್ ಅವರು ವಿಲಿಯಮ್ ಪಿಂಟೋ ವಿರುದ್ಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಠದಲ್ಲಿ ತಾನು ತೆಗೆಸಿಕೊಂಡ ಫೋಟೋ ಇಟ್ಟುಕೊಂಡು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಫೇಸ್ಬುಕ್'ನಲ್ಲಿ ಪೋಸ್ಟ್ ಹಾಕಲಾಗಿದೆ ಎಂದು ಉಚ್ಚಿಲ್ ಅವರು ದೂರಿದ್ದಾರೆ.

ಸಿದ್ದಾರೂಢ ಮಠದ ಮೇಲಿನ ಗೌರವದಿಂದ ಅಲ್ಲಿಗೆ ಭೇಟಿ ನೀಡಿದ್ದೆ. ಅಲ್ಲಿ ಜಾತಿ-ಮತ-ಪಂಥದ ಭೇದವಿಲ್ಲದೇ ಎಲ್ಲರಿಗೂ ಸಮಾನವಾಗಿ ಕಾಣುವುದು ತನಗೆ ಬಹಳ ಇಷ್ಟವಾಯಿತು. ಮಠದಲ್ಲಿ ಸಂತ ಶಿಶುನಾಳ ಷರೀಫರ ಚಿತ್ರವನ್ನೂ ಹಾಕಿದ್ದಾರೆ. ಕರಾವಳಿಯ ಮಂದಿಗೆ ಈ ಮಠವು ಮಾದರಿಯಾಗಿದೆ ಎಂದು ರಹೀಮ್ ಉಚ್ಚಿಲ್ ತಿಳಿಸಿದ್ದಾರೆ. ಅಲ್ಲದೇ, ರಾಷ್ಟ್ರೀಯತೆಯ ಸಿದ್ಧಾಂತಕ್ಕೆ ತಾನು ಸಾಕಷ್ಟು ಬಾರಿ ಹಲ್ಲೆಗಳನ್ನು ಎದುರಿಸಬೇಕಾಗಿ ಬಂದಿತು ಎಂದು ವಿಷಾದಿಸಿದ್ದಾರೆ.

ರಹೀಮ್ ಉಚ್ಚಿಲ್ ಅವರು ಕೆಲ ಕಾಲದ ಹಿಂದೆ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿದ್ದೂ ಕರಾವಳಿಯಲ್ಲಿ ಅವರ ಸಮುದಾಯದ ಕೆಲವರಿಗೆ ಇರಿಸುಮುರಿಸು ತಂದಿತ್ತು.

click me!