ಸೋತರೂ ನಿಮ್ಮ ದುರಹಂಕಾರ ಅಡಗಿಲ್ಲ!

First Published Jun 12, 2018, 8:18 AM IST
Highlights

ಬಹುಮತ ಸಾಬೀತುಪಡಿಸಲು ಶಾಸಕರಿಗೆ 50 ಅಥವಾ 100 ಕೋಟಿ ರು. ಹಣದ ಆಮಿಷ ಒಡ್ಡಲಾಗಿತ್ತು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪಾದನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಬಲವಾಗಿ ತಳ್ಳಿಹಾಕಿದ್ದಾರೆ.
 

ಬೆಂಗಳೂರು : ಬಹುಮತ ಸಾಬೀತುಪಡಿಸಲು ಶಾಸಕರಿಗೆ 50 ಅಥವಾ 100 ಕೋಟಿ ರು. ಹಣದ ಆಮಿಷ ಒಡ್ಡಲಾಗಿತ್ತು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪಾದನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಬಲವಾಗಿ ತಳ್ಳಿಹಾಕಿದ್ದಾರೆ.

ನಿರಾಧಾರವಾಗಿ ಹೇಳಿಕೆ ನೀಡುವುದು ನಿಮ್ಮ ಬಾಲಿಶತನವನ್ನು ತೋರುತ್ತದೆ. ನೀವು ಮತ್ತು ನಿಮ್ಮ ಪಕ್ಷ ಹೀನಾಯ ಸೋಲು ಅನುಭವಿಸಿದರೂ ನಿಮ್ಮ ದುರಹಂಕಾರ ಅಡಗಿಲ್ಲ’ ಎಂದು ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ನಿಮ್ಮ ಆತ್ಮಸಾಕ್ಷಿ ಮತ್ತು ಜನತೆಯ ಅಭಿಮತಕ್ಕೆ ಅನುಗುಣವಾಗಿ ನನ್ನನ್ನು ಬೆಂಬಲಿಸಿ ಎಂದು ಬಹುಮತ ಸಾಬೀತಿನ ವೇಳೆ ಮನವಿ ಮಾಡಿಕೊಂಡಿದ್ದೆ. ಆದರೆ, ಯಾವ ಶಾಸಕರಿಗೂ 50 ಅಥವಾ 100 ಕೋಟಿ ರು. ಹಣದ ಆಮಿಷ ಒಡ್ಡಿಲ್ಲ. ಮಾಜಿ ಮುಖ್ಯಮಂತ್ರಿಯಾಗಿ ಮತ್ತು ಕಾಂಗ್ರೆಸ್‌ನ ಜವಾಬ್ದಾರಿಯುತ ನಾಯಕರಾಗಿ ಇಂತಹ ಹೇಳಿಕೆ ಕೊಡುವುದು ಘನತೆಗೆ ತಕ್ಕದಲ್ಲ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ದೊಡ್ಡ ಸ್ವಾಭಿಮಾನಿ ನಾಯಕರೆಂದು ಹೇಳಿಕೊಳ್ಳುವ ನೀವು, ಕಾಂಗ್ರೆಸ್‌ ಪಕ್ಷವನ್ನು ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ಅಡಿಯಾಳಾಗಿ ಮಾಡಿ ಜನತೆಯ ಅಭಿಮತಕ್ಕೆ ವಿರುದ್ಧವಾಗಿ ಸರ್ಕಾರ ರಚನೆ ಮಾಡಿದ್ದೀರಿ. ಇದು ಯಾವ ಸ್ವಾಭಿಮಾನದ ಸಂಕೇತ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಜನತೆ ನಿಮ್ಮ ದುರಹಂಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ರಾಜ್ಯದ ಚುನಾವಣೆ ಇತಿಹಾಸದಲ್ಲಿಯೇ ಹಾಲಿ ಮುಖ್ಯಮಂತ್ರಿ 36 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಹೀನಾಯವಾಗಿ ಸೋಲು ಅನು ಭವಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದಲೇ ಬಾದಾಮಿಗೆ ಹೋಗಿದ್ದು, ಅಲ್ಲಿಯೂ ಕೂಡ ಅತ್ಯಲ್ಪ 1600 ಮತಗಳಿಂದ ಪ್ರಯಾಸದ ಗೆಲುವು ಸಾಧಿಸಿದ್ದೀರಿ. ಇದು ದೊಡ್ಡ ಸಾಧನೆ ಏನಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನ ಹಣ ಮತ್ತು ಇತರೆ ಆಮಿಷಗಳಿಗೆ ಒಳಗಾಗಿ ವಿರೋಧಿಗಳ ಕುತಂತ್ರಕ್ಕೆ ಬಲಿಯಾಗಿ ನನ್ನನ್ನು ಸೋಲಿಸಿದರು ಎಂಬ ಹೇಳಿಕೆಯು ಪ್ರಜಾಪ್ರಭುತ್ವದಲ್ಲಿ ಜನತೆಗೆ ಮಾಡಿದ ಅಪಮಾನ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ.

click me!