ಜೆಡಿಎಸ್’ನಿಂದ ಬಿಬಿಎಂಪಿಯಲ್ಲಿ ಬೆಂಬಲ ವಾಪಸ್ ಬೆದರಿಕೆ

Published : Dec 30, 2017, 10:25 AM ISTUpdated : Apr 11, 2018, 01:01 PM IST
ಜೆಡಿಎಸ್’ನಿಂದ ಬಿಬಿಎಂಪಿಯಲ್ಲಿ ಬೆಂಬಲ ವಾಪಸ್ ಬೆದರಿಕೆ

ಸಾರಾಂಶ

ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಬಿಬಿಎಂಪಿಗೆ ಘೋಷಿಸಿದ್ದ ₹7,300 ಕೋಟಿ ಅನುದಾನ ಬಳಕೆಗೆ ರೂಪಿಸಿದ್ದ ಕ್ರಿಯಾ ಯೋಜನೆಗಳನ್ನು ಪಾಲಿಕೆ ಅನುಮೋದನೆ ಪಡೆಯದೆ ಸರ್ಕಾರವೇ ಮಂಜೂರಾತಿ ನೀಡಿರುವುದಕ್ಕೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಶುಕ್ರವಾರ ಪ್ರತಿಪಕ್ಷ ಬಿಜೆಪಿ ಹಾಗೂ ಆಡಳಿತದ ಮೈತ್ರಿ ಜೆಡಿಎಸ್ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಬೆಂಗಳೂರು (ಡಿ.30): ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಬಿಬಿಎಂಪಿಗೆ ಘೋಷಿಸಿದ್ದ ₹7,300 ಕೋಟಿ ಅನುದಾನ ಬಳಕೆಗೆ ರೂಪಿಸಿದ್ದ ಕ್ರಿಯಾ ಯೋಜನೆಗಳನ್ನು ಪಾಲಿಕೆ ಅನುಮೋದನೆ ಪಡೆಯದೆ ಸರ್ಕಾರವೇ ಮಂಜೂರಾತಿ ನೀಡಿರುವುದಕ್ಕೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಶುಕ್ರವಾರ ಪ್ರತಿಪಕ್ಷ ಬಿಜೆಪಿ ಹಾಗೂ ಆಡಳಿತದ ಮೈತ್ರಿ ಜೆಡಿಎಸ್ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಅಲ್ಲದೆ, ಬಿಜೆಪಿ ಹೋರಾಟದ ಎಚ್ಚರಿಕೆ ನೀಡಿದರೆ, ಜೆಡಿಎಸ್ ಪಕ್ಷವು ಬೆಂಬಲವನ್ನು ಹಿಂಪಡೆಯುವ ಬೆದರಿಕೆಯೊಟ್ಟಿದೆ.

ಬಿಬಿಎಂಪಿ ಆಯುಕ್ತರು ಕೂಡಲೇ ಸರ್ಕಾರದಿಂದ ನೇರವಾಗಿ ಅನುಮೋದನೆ ಪಡೆದಿರುವ ಎಲ್ಲ ಕ್ರಿಯಾ ಯೋಜನೆಗಳನ್ನು ವಾಪಸ್ ತರಿಸಿಕೊಂಡು ಸ್ಥಾಯಿ ಸಮಿತಿಗಳ ಮೂಲಕ ಕೌನ್ಸಿಲ್‌ನಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಬೇಕು.

ಇಲ್ಲದಿದ್ದರೆ ಈ ವಿಚಾರವಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಸದಸ್ಯರು ಎಚ್ಚರಿಕೆ ನೀಡಿದರು. ಜೆಡಿಎಸ್ ಸದಸ್ಯರು, ಪಾಲಿಕೆ ಆಡಳಿತದಲ್ಲಿ ಕಾಂಗ್ರೆಸ್ ನಮ್ಮನ್ನು ಸಹಮತಕ್ಕೆ ತೆಗೆದುಕೊಳ್ಳದೆ ಹಳೇ ಚಾಳಿ ಮುಂದುವರಿಸಿದೆ, ಇದು ಹೀಗೇ ಮುಂದುವರಿದರೆ ಬಿಬಿಎಂಪಿ ಆಡಳಿತದಲ್ಲಿ ಕಾಂಗ್ರೆಸ್’ಗೆ ನೀಡಿರುವ ಬೆಂಬಲವನ್ನೇ ಹಿಂಪಡೆಯುವ ಬೆದರಿಕೆ ಹಾಕಿದರು.

ವಿಶೇಷ ಎಂದರೆ, ಈ ವೇಳೆ ಜೆಡಿಎಸ್ ಪಕ್ಷದಿಂದ ಪಕ್ಷದ ಪಾಲಿಕೆ ನಾಯಕಿ ನೇತ್ರಾನಾರಾಯಣ್ ಮತ್ತು ಸದಸ್ಯ ಇಮ್ರಾನ್‌ಪಾಷಾ ಇಬ್ಬರೇ ಹಾಜರಿದ್ದರು. ಮಧ್ಯಾಹ್ನದ ನಂತರ ಸಭೆಗೆ ಹಾಜರಾದ ಇಮ್ರಾನ್ ಪಾಷಾ ಸಭೆ ಇನ್ನೇನು ಮುಕ್ತಾಯದ ಹಂತದಲ್ಲಿದ್ದಾಗ ಮಾತನಾಡಿ, ‘ಬಿಬಿಎಂಪಿಯಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ಮರ್ಯಾದೆಯೇ ಸಿಗುತ್ತಿಲ್ಲ. ನಮ್ಮ (ಜೆಡಿಎಸ್) ಬೆಂಬಲದಿಂದ ನೀವು (ಕಾಂಗ್ರೆಸ್) ಅಧಿಕಾರದಲ್ಲಿ ಕುಳಿತಿದ್ದೀರ. ನೀವು ಇದೇ ರೀತಿ ಮಾಡುತ್ತಿದ್ದರೆ ನಿಮಗೆ ನೀಡಿರುವ ಬೆಂಬಲ ವಾಪಸ್ ಪಡೆಯುತ್ತೇವೆ. ಈ ಬಗ್ಗೆ ನಮ್ಮ ನಾಯಕರು ನಿರ್ಧಾರ ಮಾಡಿದ್ದಾರೆ’ ಎಂದರು.

ಗುಣಮಟ್ಟ ಪರಿಶೀಲಿಸದೆ ಹಣ ಬಿಡುಗಡೆ : ನೇತ್ರಾ ನಾರಾಯಣ್ ಆಕ್ರೋಶ : ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಸೇರಿದಂತೆ ನಗರೋತ್ಥಾನ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸದೆ ಟೆಂಡರ್ ನಿಯಮಾವಳಿಗಳನ್ನು ಉಲ್ಲಂಘಿಸಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಪಾಲಿಕೆ ಜೆಡಿಎಸ್ ನಾಯಕಿ ನೇತ್ರಾನಾರಾಯಣ್ ಆರೋಪಿಸಿ ದರು. ಸಂಸ್ಥೆಗಳನ್ನು ಏಜೆನ್ಸಿಗಳನ್ನಾಗಿ ನೇಮಕ ಮಾಡಿದೆ. ಸಂಸ್ಥೆಗಳನ್ನು ಗುಣಮಟ್ಟ ಪರಿಶೀಲನೆಗೆ ಆಹ್ವಾನವನ್ನೇ ನೀಡಿಲ್ಲ. ತಾವು ಖುದ್ದು ಬರೆದ ಪತ್ರಕ್ಕೆ ಈ ಸಂಸ್ಥೆಗಳೇ ಪರಿಶೀಲನೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಉತ್ತರಿಸಿದೆ ಎಂದರು.

 ಪಾಲಿಕೆ ಆಯುಕ್ತರ ಉತ್ತರವೇನು? : ಸಭೆಗೆ ಉತ್ತರ ನೀಡಿದ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಸಂವಿಧಾನದ 243(ಡಬ್ಲ್ಯು) ವಿಧಿಯ ಪ್ರಕಾರ ಪೌರ ಸಂಸ್ಥೆಗಳ ಅಧಿಕಾರ ಕುರಿತು ರಾಜ್ಯ ಸರ್ಕಾರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹಾಗಾಗಿ ಸರ್ಕಾರ ಬಿಬಿಎಂಪಿಗೆ ನೀಡಿದ ಅನುದಾನ ಬಳಕೆಯ ಕ್ರಿಯಾ ಯೋಜನೆಗಳನ್ನು ಉನ್ನತಾಧಿಕಾರ ಸಮಿತಿ ಯಿಂದ ನೇರವಾಗಿ ಮಂಜೂರು ಮಾಡಿರುವುದರಿಂದ ಬಿಬಿಎಂಪಿ ಆಡಳಿತಕ್ಕೆ ಧಕ್ಕೆಯಾಗಿರುವುದು ಕಂಡು ಬರುತ್ತಿಲ್ಲ ಮತ್ತು ಆ ರೀತಿ ಗ್ರಹಿಸುವುದು ಸಮಂಜಸವೂ ಅಲ್ಲ. ಬಿಬಿಎಂಪಿಗೆ ಸರ್ಕಾರ ನೀಡಿರುವ ಅನುದಾನವನ್ನು ಪಾಲಿಕೆ ಅನುದಾನ ಎಂದು ಪರಿಗಣಿಸಬೇಕಾಗಿಲ್ಲ ಎಂದು ಸರ್ಕಾರದ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದ ಬಿಬಿಎಂಪಿಗೆ ಬಂದಿರುವ ಪತ್ರದಲ್ಲಿ ತಿಳಿಸಲಾಗಿದೆ.

ಈ ಪತ್ರವನ್ನು ಪಾಲಿಕೆ ಪ್ರತಿಪಕ್ಷ ನಾಯಕರು ಸರ್ಕಾರಕ್ಕೆ ಬರೆದಿದ್ದ ಪತ್ರದ ಆಧಾರದ ಮೇಲೆಯೇ ಕಳುಹಿಸಿದ್ದಾರೆ. ಅಲ್ಲದೆ, 2012ರ ಜುಲೈನಿಂದಲೂ ಇದೇ ರೀತಿ ವಿಶೇಷ ಸಂದರ್ಭಗಳಲ್ಲಿ ಸರ್ಕಾರಕ್ಕೆ ನೇರವಾಗಿ ಕಡತಗಳನ್ನು ಸಲ್ಲಿಸಿ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆದು ಬರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ನೀಡಿರುವ ₹7300 ಕೋಟಿ ಅನುದಾನದ ಕ್ರಿಯಾ ಯೋಜನೆಯನ್ನು ನೇರವಾಗಿ ಸರ್ಕಾರವೇ ಉನ್ನತಾಧಿಕಾರ ಸಮಿತಿ ಮೂಲಕ ಮಂಜೂರಾತಿ ನೀಡಿದೆ. ಆ ಮೂಲಕ ಸಂವಿಧಾನದ 74ನೇ ತಿದ್ದುಪಡಿಗೆ ಗೌರವ ನೀಡದೆ ಬಿಬಿಎಂಪಿ ಅಧಿಕಾರ ಕಸಿದುಕೊಳ್ಳಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಸಿದ್ಧವಾಗಿರುವ ಇತರೆ ಕ್ರಿಯಾಯೋಜನೆಗಳನ್ನು ಕೌನ್ಸಿಲ್‌ನಲ್ಲಿ ಮಂಡಿಸಿ ನಂತರ ಸರ್ಕಾರದ ಅನುಮೋದನೆಗೆ ಕಳುಹಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರೆ, ಜೆಡಿಎಸ್ ಸದಸ್ಯರು ಕಾಂಗ್ರೆಸ್‌ಗೆ ನೀಡಿರುವ ಬೆಂಬಲ ವಾಪಸ್ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿತ್ರದುರ್ಗ ದುರಂತ: ಮದುವೆ ಫಿಕ್ಸ್ ಆಗಿದ್ದ ಜೀವದ ಗೆಳತಿಯರಿಬ್ಬರ ಕೊನೆಯ ಪ್ರಯಾಣ! ಓದಿದ್ದೂ ಜೊತೆಯಲ್ಲೇ ಜೀವ ಹೋಗಿದ್ದೂ ಒಟ್ಟಿಗೆ!
ಭಾರತದಲ್ಲಿ ಮಿಡ್ಲ್ ಕ್ಲಾಸ್ ಮದುವೆ ಖರ್ಚು ಭಾರಿ ಏರಿಕೆ? ಅದ್ಧೂರಿ ವಿವಾಹಕ್ಕೆ ಲೆಕ್ಕವೇ ಸಿಗುತ್ತಿಲ್ಲ