
ಬೆಂಗಳೂರು: ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಮತ್ತು ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡುವ ಪ್ರಸ್ತಾಪದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉರುಳಿಸಿರುವ ಅನಿರೀಕ್ಷಿತ ರಾಜಕೀಯ ದಾಳಕ್ಕೆ ಬಿಜೆಪಿ ತತ್ತರಿಸಿದ್ದು, ಇದನ್ನು ಸಮರ್ಥವಾಗಿ ಹೇಗೆ ಎದುರಿಸುವುದು ಎಂಬ ಜಿಜ್ಞಾಸೆಯಲ್ಲಿ ಮುಳುಗಿದೆ.
ಎರಡೂ ಸೂಕ್ಷ್ಮ ವಿಚಾರಗಳು. ಒಂದು ನಾಡಿಗೆ ಸಂಬಂಧಿಸಿದ್ದು. ಮತ್ತೊಂದು ಧರ್ಮಕ್ಕೆ ಸಂಬಂಧಿಸಿದ್ದು. ಹೀಗಾಗಿ, ಪಕ್ಷಕ್ಕೆ ನಷ್ಟ ಉಂಟಾಗದಂತೆ ಅತ್ಯಂತ ಜಾಣತನದಿಂದ ಎರಡೂ ವಿಷಯಗಳನ್ನು ಎದುರಿಸಬೇಕು ಎಂಬ ನಿಲವಿಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನದ ಹಿನ್ನೆಲೆ ದೆಹಲಿಯಲ್ಲಿರುವ ಯಡಿಯೂರಪ್ಪ ಅವರು ಇಂದು ಬುಧವಾರ ಸಂಜೆ ಪಕ್ಷದ ಸಂಸದರ ಮಹತ್ವದ ಸಭೆಯೊಂದನ್ನು ಕರೆದಿದ್ದು, ಈ ಎರಡೂ ವಿಷಯಗಳ ಬಗ್ಗೆ ಸಂಸದರ ಅಭಿಪ್ರಾಯ ಆಲಿಸಲಿದ್ದಾರೆ. ಜತೆಗೆ ಸುದೀರ್ಘ ಚರ್ಚೆ ನಡೆಸಿ ಈ ಸನ್ನಿವೇಶವನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.
ಸಂಸದರ ಸಭೆಯನ್ನು ಪ್ರತ್ಯೇಕ ನಾಡಧ್ವಜ ಮತ್ತು ಸ್ವತಂತ್ರ ಲಿಂಗಾಯತದ ಧರ್ಮ ಕುರಿತು ಚರ್ಚಿಸಲು ಅಲ್ಲ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸಮಾಲೋಚನೆ ನಡೆಸಲು ಕರೆದಿರುವ ಸಭೆ ಎಂಬ ಸಮಜಾಯಿಷಿಯನ್ನು ಪಕ್ಷದ ಮುಖಂಡರು ನೀಡಿದರೂ ಇದು ಸಾಮಾನ್ಯ ಸಭೆ ಅಲ್ಲ ಎಂಬ ಮಾಹಿತಿ ಲಭಿಸಿದೆ. ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚಿಸುವುದಕ್ಕಾಗಿಯೇ ಕರೆದಿರುವ ಸಭೆ ಎಂಬುದು ಖಚಿತವಾಗಿದೆ.
ಈ ಸಂಸದರ ಸಭೆಯಲ್ಲಿನ ಸಮಾಲೋಚನೆ ನಂತರ ಯಡಿಯೂರಪ್ಪ ಅವರು ಅಗತ್ಯ ಕಂಡು ಬಂದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರನ್ನೂ ಭೇಟಿ ಮಾಡಿ ಮುಂದೆ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಸಲಹೆ-ಸೂಚನೆ ಪಡೆಯಲಿದ್ದಾರೆ ಎನ್ನಲಾಗಿದೆ.
ಈ ಎರಡೂ ವಿಷಯಗಳು ಸ್ಪಷ್ಟವಾಗಿ ಬಿಜೆಪಿಯ ಮತಬುಟ್ಟಿಗೇ ಕೈಹಾಕುವಂಥದ್ದಾಗಿರುವುದರಿಂದ ಬಿಜೆಪಿ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ಜತೆಗೆ ಸಮರ್ಥವಾಗಿ ಎದುರಿಸುವಂಥ ಕ್ರಮವನ್ನೂ ಕೈಗೊಳ್ಳಬೇಕು ಎಂಬ ಅಭಿಪ್ರಾಯ ಪಕ್ಷದ ಆಂತರಿಕ ಪಾಳೆಯದಿಂದ ಬಲವಾಗಿ ಕೇಳಿಬರುತ್ತಿದೆ.
ಆಂತರಿಕ ಭಿನ್ನಮತದ್ದೇ ಸವಾಲು:
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸಿದ್ದರಾಮಯ್ಯ ಅವರ ತಂತ್ರ ಎದುರಿಸುವುದಕ್ಕಿಂತ ಪಕ್ಷದೊಳಗಿನ ಆಂತರಿಕ ಭಿನ್ನಮತ ಎದುರಿಸುವುದೇ ಸವಾಲಾಗಿ ಕಾಡುತ್ತಿದೆ. ನಾಡಧ್ವಜ ಮತ್ತು ಲಿಂಗಾಯತ ಧರ್ಮ ಕುರಿತ ವಿಷಯಗಳು ಪ್ರಸ್ತಾಪವಾಗುತ್ತಿದ್ದಂತೆಯೇ ಯಡಿಯೂರಪ್ಪ ಅವರೊಬ್ಬರೇ ಮುಂದಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರೇ ಹೊರತು ಬಿಜೆಪಿಯ ಇತರ ಹಿರಿಯ ನಾಯಕರು ಹೆಚ್ಚು ತಲೆಕೆಡಿಸಿಕೊಳ್ಳದೆ ಮೌನಕ್ಕೆ ಶರಣಾಗಿರುವುದನ್ನು ಗಮನಿಸಬಹುದು. ಇದಕ್ಕೆ ಕಾರಣ, ಯಡಿಯೂರಪ್ಪ ಅವರು ಪ್ರಮುಖ ವಿಷಯಗಳು ಪ್ರಸ್ತಾಪವಾದಾಗ ಯಾರೊಬ್ಬರಿಂದಿಗೂ ಚರ್ಚಿಸದೇ ಇರುವುದು.
ಒಂದು ವಿಷಯ ಅಥವಾ ವಿವಾದ ಸೃಷ್ಟಿಯಾದಾಗ ಅದರ ಬಗ್ಗೆ ಪಕ್ಷದ ನಿಲುವು ಏನಿರಬೇಕು? ಪಕ್ಷದ ಮುಖಂಡರು ಯಾವ ರೀತಿ ಹೇಳಿಕೆ ನೀಡಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ಯಡಿಯೂರಪ್ಪ ಅವರು ತಕ್ಷಣವೇ ಯಾರೊಂದಿಗೂ ಸಮಾಲೋಚನೆ ನಡೆಸುವುದಿಲ್ಲ. ಜತೆಗೆ ಸಲಹೆ-ಸೂಚನೆಯನ್ನೂ ನೀಡುವುದಿಲ್ಲ. ಈಗಲೂ ಅಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರ ಪ್ರಮುಖ ವಿಷಯಗಳನ್ನು ಎತ್ತಿಕೊಂಡು ರಾಜಕೀಯ ಮಾಡುತ್ತಿದ್ದರೂ ಅದನ್ನು ಸಮರ್ಥವಾಗಿ ಎದುರಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಕ್ಷದ ಹಿರಿಯ ಮುಖಂಡರೊಬ್ಬರು ‘ಕನ್ನಡಪ್ರಭ’ದೊಂದಿಗೆ ತಮ್ಮ ಅಳಲು ವ್ಯಕ್ತಪಡಿಸಿದರು.
ಕಾಂಗ್ರೆಸ್ ನಡೆ ತಿಳಿಸಲು ಬಿಜೆಪಿ ಮುಖಂಡರ ಪ್ರವಾಸ ಸಾಧ್ಯತೆ:
ಸ್ವತಂತ್ರ ಲಿಂಗಾಯತ ಧರ್ಮ ಕುರಿತಂತೆ ಜನರಿಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ಸರ್ಕಾರ ಲಿಂಗಾಯತ ಸಮುದಾಯದ ಸಚಿವರು, ಶಾಸಕರು ರಾಜ್ಯ ಪ್ರವಾಸ ಕೈಗೊಳ್ಳುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಬಿಜೆಪಿಯಲ್ಲೂ ಇಂಥದೇ ಚಿಂತನೆ ಮೂಡಿದೆ. ಕಾಂಗ್ರೆಸ್ ಸರ್ಕಾರದ ನಿಲುವು ಸಮುದಾಯವನ್ನು ಒಡೆಯುವ ಉದ್ದೇಶ ಹೊಂದಿದ್ದು, ಇದಕ್ಕೆ ವೀರಶೈವ ಲಿಂಗಾಯತ ಸಮುದಾಯದ ಜನರು ಬಲಿಯಾಗಬಾರದು ಎಂಬುದನ್ನು ಹೇಳಲು ಪ್ರತಿಯಾಗಿ ಬಿಜೆಪಿಯಲ್ಲಿನ ಸಮುದಾಯದ ಮುಖಂಡರು ಪ್ರವಾಸ ಹಮ್ಮಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಪಕ್ಷದಲ್ಲಿ ಕೇಳಿಬಂದಿದ್ದು, ಈ ಬಗ್ಗೆ ಹಿರಿಯ ನಾಯಕರು ಶೀಘ್ರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬಿಎಸ್‌ವೈ ಪ್ರಾಬಲ್ಯ ಕ್ಷೀಣಿಸುವ ಸಂತಸ?
ಸ್ವತಂತ್ರ ಲಿಂಗಾಯತ ಧರ್ಮ ಕುರಿತು ವಿವಾದ ಹುಟ್ಟು ಹಾಕಿರುವ ಬಗ್ಗೆ ಖುದ್ದು ಬಿಜೆಪಿಯಲ್ಲೇ ಕೆಲವು ಮುಖಂಡರಲ್ಲಿ ಸಂತಸ ಮೂಡಿಸಿದೆ ಎಂಬ ಸುದ್ದಿಯೂ ಹೊರಬಿದ್ದಿದೆ. ಇದಕ್ಕೆ ಕಾರಣ- ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಡೆಯ ಕುರಿತ ಆಕ್ರೋಶ. ರಾಜ್ಯದಲ್ಲಿನ ಪ್ರಬಲ ವೀರಶೈವ ಲಿಂಗಾಯತ ಸಮುದಾಯ ತಮ್ಮ ಬೆನ್ನಿಗಿದೆ ಎಂಬ ಭಾವನೆಯಲ್ಲಿರುವ ಆ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಅವರ ಪ್ರಾಬಲ್ಯ ಈ ಮೂಲಕವಾದರೂ ಮುರಿಯಬಹುದೇನೋ ಎಂಬ ನಿರೀಕ್ಷೆ ಪಕ್ಷದಲ್ಲಿನ ಅತೃಪ್ತ ಮುಖಂಡರಲ್ಲಿದೆ. ಈ ಸಮುದಾಯದ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರನ್ನೂ ಪಕ್ಷದ ಹೈಕಮಾಂಡ್ ಒಲಿಸಿಕೊಂಡು ಬರುತ್ತಿದೆ. ಸಮುದಾಯವೇ ವಿಭಜನೆಯಾದಲ್ಲಿ ಯಡಿಯೂರಪ್ಪ ಅವರ ನಾಯಕತ್ವದ ಪ್ರಾಬಲ್ಯವೂ ಕ್ಷೀಣಿಸುತ್ತದೆ ಎಂಬ ಲೆಕ್ಕಾಚಾರವೂ ಪಕ್ಷದಲ್ಲಿ ಕೇಳಿಬರತೊಡಗಿದೆ.
ಕನ್ನಡಪ್ರಭ ವಾರ್ತೆ
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.