
ಬೆಂಗಳೂರು(ಏ.23): ನಂಜನಗೂಡು ಹಾಗೂ ಗುಂಡ್ಲುಪೇಟೆ ಎರಡೂ ಕ್ಷೇತ್ರಗಳ ಉಪಚುನಾವಣೆಯ ಸೋಲು ಕಮಲ ಪಾಳೆಯದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ.
ಇಂದು ನಡೆದ ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಸೋಲಿನ ಬಗ್ಗೆ ಪರಾಮರ್ಶೆ ನಡೀತು. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿಗಳು, ಎರಡೂ ಕ್ಷೆತ್ರದ ಉಸ್ತುವಾರಿ, ಪ್ರಮುಖ ನಾಯಕರು ಉಪಸ್ಥಿತರಿದ್ದರು. ಸೋಲಿನ ಕುರಿತಂತೆ ಸಭೆಯಲ್ಲಿದ್ದ ಮುಖಂಡರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಆಡಳಿತರೂಢ ಕಾಂಗ್ರೆಸ್ ಉಪಚುನಾವಣೆ ವೇಳೆ ಸಂಪೂರ್ಣವಾಗಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿತು.. ಎರಡು ಕ್ಷೇತ್ರದಲ್ಲೂ ಮತದಾರರಿಗೆ ಹಣ ಹಂಚಿಕೆ ಮಾಡುವ ಮೂಲಕ ಕಾಂಗ್ರೆಸ್ ಮತ ಖರೀದಿ ಮಾಡಿದ್ದು, ಕೊನೆಯ ಎರಡು ದಿನಗಳ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ರೂಪಿಸುವಲ್ಲಿ ವಿಫಲವಾಯ್ತು ಅಂತ ನಾಯಕರು ಅರಿತುಕೊಂಡಿದ್ದಾರೆ. ಅಲ್ಲದೆ, ಬಿಜೆಪಿ ನಾಯಕರ ಅತಿಯಾದ ಆತ್ಮವಿಶ್ವಾಸ, ಗುಂಡ್ಲುಪೇಟೆ ಕ್ಷೇತ್ರದ್ಲಲ್ಲಿ ಡಿಕೆಶಿವಕುಮಾರ್ ರೂಪಿಸಿದ ತಂತ್ರಕ್ಕೆ ಪ್ರತಿತಂತ್ರ ರೂಪಿಸುವಲ್ಲಿ ವಿಫಲವಾಗಿದ್ದು ಕೂಡ ಸೋಲಿಗೆ ಕಾರಣ ಅಂತ ಹೇಳಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಚುನಾವಣೆ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನ ಹೆಚ್ಚು ಪ್ರಚಾರ ಮಾಡದೇ ಇರುವುದು ಬಿಜೆಪಿ ಅಭ್ಯರ್ಥಿಗಳಿಗೆ ಸೋಲಾಗಲು ಕಾರಣ ಅಂತ ಕೇಸರಿ ಬ್ರಿಗೇಡ್ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಈ ಸೋಲಿನ ಪರಾಮರ್ಶೆಯೊಂದಿಗೆ ಮುಂದಿನ ಚುನಾವಣೆಯಲ್ಲಿ 150+ ಗೆಲುವಿನ ಗುರಿಯೊಂದಿಗೆ ಮುಂದುವರಿಯುವ ನಿರ್ಣಯ ಮಾಡಿರೋದಾಗಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು. ಇನ್ನು ಸಭೆಯಲ್ಲಿ ಯಡಿಯೂರಪ್ಪ ಅವ್ರ ನಾಯಕತ್ವವನ್ನು ಬೆಂಬಲಿಸುವ ಅಭಿಪ್ರಾಯಗಳು ವ್ಯಕ್ತವಾದವು.
ಪ್ರಮುಖ ನಾಯಕರೇ ಗೈರು!
ಇಂದಿನ ಬಿಜೆಪಿ ಸಭೆಗೆ ಪಕ್ಷದ ಪ್ರಮುಖ ನಾಯಕರು ಗೈರಾಗಿದ್ದರು. ಉಪಚುನಾವಣೆ ವೇಳೆ ಪ್ರಚಾರ ಕೈಗೊಂಡಿದ್ದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್, ಕೇಂದ್ರ ಸಚಿವ ಸದಾನಂದಗೌಡ ಸಭೆಗೆ ಗೈರಾಗಿದ್ದರು. ಈ ಮೂಲಕ ಪಕ್ಷದಲ್ಲಿ BSY ಎಲ್ಲರನ್ನ ವಿಶ್ವಾಸಕ್ಕೆ ತಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಅನ್ನೋ ಸಂದೇಶ ರವಾನಿಸುವ ಪ್ರಯತ್ನವನ್ನ ಅತೃಪ್ತ ನಾಯಕರು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.