ಬಿಜೆಪಿ ಕಾರ್ಯಕಾರಿಣಿ ಮುಕ್ತಾಯ; ಮೇ.18 ರಿಂದ 36 ದಿನ ರಾಜ್ಯ ಪ್ರವಾಸಕ್ಕೆ ನಿರ್ಧಾರ

Published : May 07, 2017, 04:46 PM ISTUpdated : Apr 11, 2018, 12:50 PM IST
ಬಿಜೆಪಿ ಕಾರ್ಯಕಾರಿಣಿ ಮುಕ್ತಾಯ; ಮೇ.18 ರಿಂದ 36 ದಿನ ರಾಜ್ಯ ಪ್ರವಾಸಕ್ಕೆ ನಿರ್ಧಾರ

ಸಾರಾಂಶ

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸಲು ಮೇ 18 ರಿಂದ ತುಮಕೂರಿನಿಂದ ಪಕ್ಷದ ಮುಖಂಡರ ರಾಜ್ಯ ಪ್ರವಾಸ ಆರಂಭಿಸಲು ಬಿಜೆಪಿ ಕಾರ್ಯಕಾರಿಣಿ ತೀರ್ಮಾನಿಸಿದೆ.

ಮೈಸೂರು (ಮೇ.07): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸಲು ಮೇ 18 ರಿಂದ ತುಮಕೂರಿನಿಂದ ಪಕ್ಷದ ಮುಖಂಡರ ರಾಜ್ಯ ಪ್ರವಾಸ ಆರಂಭಿಸಲು ಬಿಜೆಪಿ ಕಾರ್ಯಕಾರಿಣಿ ತೀರ್ಮಾನಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದು, ತುಮಕೂರಿನಿಂದ ಪ್ರವಾಸಕ್ಕೆ ಚಾಲನೆ ನೀಡಲಾಗುವುದು ಎಂದರು.

ಸತತ 36 ದಿನಗಳ ನಿರಂತರ ಪ್ರವಾಸ ಇದಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಒಂದೊಂದು ದಿನ ಕಳೆಯಲಾಗುವುದು. ಅಲ್ಲಿನ ಬರ ಪರಿಹಾರ ಕಾಮಗಾರಿ, ರೈತರ ಸಂಕಷ್ಟ ವಿಚಾರಿಸುವುದು ಮತ್ತು ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಲಾಗುವುದು. ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ ಸೇರಿ ಪಕ್ಷದ ಎಲ್ಲಾ ಹಿರಿಯ ಮುಖಂಡರು ಪ್ರವಾಸಕ್ಕೆ ಕೈ ಜೋಡಿಸುವರು ಎಂದು ಹೇಳಿದರು. 

ಮೈಸೂರಿನ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಯಶಸ್ವಿಯಾಗಿ ನಡೆದಿದೆ. ರಾಷ್ಟ್ರೀಯ ಕಾರ್ಯಕಾರಿಣಿ ನಡೆದ ೧೫ ದಿನದೊಳಗೆ ರಾಜ್ಯ ಕಾರ್ಯಕಾರಿಣಿ, ನಂತರದ ೧೫ ದಿನದಲ್ಲಿ ಜಿಲ್ಲಾ ಕಾರ್ಯಕಾರಿಣಿ ನಡೆಯಬೇಕು ಎಂಬುದು ಪಕ್ಷದ ಸೂಚನೆ. ಅದರಂತೆ ಕಾರ್ಯಕಾರಿಣಿ ನಡೆದಿದೆ ಎಂದರು.

ಕೇಂದ್ರದ ಯೋಜನೆಯನ್ನು ಜನರಿಗೆ ತಲುಪಿಸುವುದು ಹೇಗೆ? ಉಜ್ವಲ್, ಫಸಲ್ ಬೀಮಾ ಯೋಜನೆ ಸೌಲಭ್ಯ ಹೇಗೆ ಪಡೆಯಬೇಕು. ಕೇಂದ್ರದ ಯೋಜನೆಯನ್ನು ಯಥಾಸ್ಥಿತಿ ತಲುಪಿಸುವುದು ಹೇಗೆ ಎಂಬುದನ್ನು ಪೆಟ್ರೋಲಿಯಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ವಿಸ್ತೃತವಾಗಿ ವಿಷಯ ಮಂಡಿಸಿದ್ದಾರೆ. ಉಜ್ವಲ್ ಯೋಜನೆ ತರಲು ಕೇಂದ್ರ ಪೂರ್ವ ತಯಾರಿ ನಡೆಸುತ್ತಿದೆ. ಯಾರಿಗೆ ಅನಿಲ ಸಂಪರ್ಕ ದೊರಕಿಲ್ಲ ಎಂಬುದನ್ನು ಪಟ್ಟಿ ಮಾಡಲು ಕಾರ್ಯಕರ್ತರೊಂದಿಗೆ ಚರ್ಚಿಸಲಾಯಿತು ಎಂದು ಅವರು ಶೋಭಾ ಕರಂದ್ಲಾಜೆ ತಿಳಿಸಿದರು.

ಇತರೆ ನಿರ್ಣಯಗಳು

- ಪಕ್ಷದ ಪ್ರಚಾರ ಕಾರ್ಯಕ್ಕೆ ಸುಮಾರು 10 ಸಾವಿರ ವಿಸ್ತಾರಕರನ್ನು ನೇಮಿಸಲು ನಿರ್ಧಾರ

- ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಜೂ.೧ ರಿಂದ ೧೫ ರವರೆಗೆ ಸಂಪೂರ್ಣವಾಗಿ ಒಂದೊಂದು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು. ಈ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳುವುದು, ಪ್ರತಿಯೊಬ್ಬ ಕಾರ್ಯಕರ್ತರೂ ಕನಿಷ್ಠ ೫೦ ಗಿಡ ನೆಟ್ಟು ಪೋಷಿಸುವುದು. 

- ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ, ರಾಜ್ಯ ಸರ್ಕಾರದ ವೈಫಲ್ಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದು.

ಆರೋಪ, ಪ್ರತ್ಯಾರೋಪ, ಗಿಮಿಕ್ ಮತ್ತು ವ್ಯಂಗ್ಯದ ಮೂಲಕ ದಿನ ಕಳೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕಾಶದಲ್ಲಿ ಹಾರಾಡುವುದು ಬಿಟ್ಟು ಭೂಮಿಗಿಳಿಯಬೇಕು. ಆಗ ರೈತರ ಸಂಕಷ್ಟದ ಅರಿವು ಕಣ್ಣಾರೆ ಗೊತ್ತಾಗುತ್ತದೆ. ಈ ಭಾಗದಲ್ಲಿ ನೀವು ಕಾರಿನಲ್ಲಿ ತಿರುಗಾಡಬಹುದು. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಹೋಗಿ ನೋಡಿ. ನೀವಿರಲಿ ನಿಮ್ಮ ಸಚಿವರೂ ತಿರುಗಿ ನೋಡಿಲ್ಲ.

-ಶೋಭಾ ಕರಂದ್ಲಾಜೆ, ಸಂಸದೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

 

ಇನ್ನು ಕೇಂದ್ರ ಸರ್ಕಾರ ಬರ ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಅನುದಾನವನ್ನು ರಾಜ್ಯಕ್ಕೆ ನೀಡಿದೆ. ಈ ಬಾರಿಯ ಬರ ಪರಿಹಾರಕ್ಕೆ ₹೧,೭೨೦ ಕೋಟಿ ನೀಡಿದೆ. ಅಲ್ಲದೆ ಎನ್‌ಡಿಆರ್‌ಎಫ್ ಮೂಲಕ ₹೬೮೦೦ ಕೋಟಿ ನೀಡಿದೆ. ಆದರೆ ರಾಜ್ಯ ಸರ್ಕಾರ ಇಲ್ಲಸಲ್ಲದ ನೆಪ ಹೇಳಿಕೊಂಡು ತನ್ನಲ್ಲೇ ಉಳಿಸಿಕೊಂಡಿದೆ. ಮೇವು ಬ್ಯಾಂಕ್‌ನಲ್ಲೂ ಅವ್ಯವಹಾರ ನಡೆದಿದೆ. ಕುಡಿಯುವ ನೀರಿನ ಸಮಸ್ಯೆ ಮುಗಿಲುಮುಟ್ಟಿದೆ. ಆದರೂ ಸರ್ಕಾರ ಜನರಿಗೆ ಸ್ಪಂದಿಸುತ್ತಿಲ್ಲ ಎಂದು ಶೋಭಾ ಆರೋಪಿಸಿದರು.

ಶ್ವೇತಪತ್ರ ಹೊರಡಿಸಿ

ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ಅನುದಾನ ನೀಡಿಲ್ಲ. ತಾರತಮ್ಯ ಮಾಡಿದೆ ಎಂದು ಆರೋಪಿಸುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಶ್ವೇತಪತ್ರ ಹೊರಡಿಸಬೇಕು. ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಎಷ್ಟು ಹಣ ಬಂದಿದೆ. ಈಗ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಎಷ್ಟು ಹಣ ಬಂದಿದೆ ಎಂಬುದನ್ನು ಶ್ವೇತಪತ್ರದ ಮೂಲಕ ತಿಳಿಸಲಿ. ಅಲ್ಲದೆ ನೀರಾವರಿ ಯೋಜನೆಗಾಗಿ ಕೇಂದ್ರ ಸರ್ಕಾರ ನೀಡಿದ 3,500 ಕೋಟಿ ರುಪಾಯಿಯನ್ನು ಅಧಿಕಾರಿಗಳು ತಮ್ಮ ಖಾತೆಗೆ ಜಮೆ ಮಾಡಿಕೊಂಡರಲ್ಲ, ಆ ಹಣದ ಬಗ್ಗೆಯೂ ಸಿದ್ದರಾಮಯ್ಯ ಉತ್ತರಿಸಬೇಕು. ಕೇಂದ್ರದ ಹಣವನ್ನು ಹೇಗೆ ತಮ್ಮ ಖಾತೆಗೆ ಜಮೆ ಮಾಡಿಕೊಂಡರು ಎಂಬುದನ್ನು ತನಿಖೆ ನಡೆಸಿದಿರಾ? ಯಾರ ಮೇಲೆ ಕ್ರಮ ಕೈಗೊಂಡರು ಎಂದು  ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!