ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮಾಸ್ಟರ್ ಪ್ಲಾನ್

By Web DeskFirst Published Aug 8, 2018, 12:01 PM IST
Highlights

ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದ್ದು ಹೆಚ್ಚು ಮತಗಳನ್ನು ಸೆಳೆಯುವ ಸಲುವಾಗಿ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಸಾಮಾಜಿಕ ನ್ಯಾಯ ಪಾಕ್ಷಿಕ ಆಚರಣೆ ಮಾಡುತ್ತಿದೆ. 

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಇತರೆ ಹಿಂದುಳಿದ ವರ್ಗ (ಒಬಿಸಿ) ಹಾಗೂ ದಲಿತರ ಓಲೈಕೆಗೆ ಇಳಿದಿರುವ ಕೇಂದ್ರ ಸರ್ಕಾರ ಆ. 15 ರಿಂದ 30 ರವರೆಗೆ ಸಾಮಾಜಿಕ ನ್ಯಾಯ ಪಾಕ್ಷಿಕ ಆಚರಿಸಲು ಉದ್ದೇಶಿಸಿದೆ. ಇದಲ್ಲದೆ ಮುಂದಿನ ವರ್ಷದಿಂದ ಆ.1 ರಿಂದ 9 ರವರೆಗೆ ಸಾಮಾಜಿಕ ನ್ಯಾಯ ಸಪ್ತಾಹ ಆಚರಣೆಗೆ ನಿರ್ಧರಿಸಿದೆ. 

ಒಬಿಸಿ ಆಯೋಗಕ್ಕೆ ಬಲ ತುಂಬುವ ವಿಧೇಯಕ ಸಂಸತ್ತಿನಲ್ಲಿ ಸೋಮವಾರವಷ್ಟೇ ಅಂಗೀಕಾರವಾಗಿತ್ತು. ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಗಟ್ಟಿಗೊಳಿಸುವ ಮಸೂದೆಯೂ ಒಂದೆರಡು ದಿನದಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಳ್ಳಲಿದೆ. ಈ ಎರಡೂ ಮಸೂದೆಗಳ ಅಂಗೀಕಾರದ ಸ್ಮರಣಾರ್ಥ ಪಾಕ್ಷಿಕ ಹಾಗೂ ಸಪ್ತಾಹಗಳನ್ನು ಆಚರಿಸಲು ತೀರ್ಮಾನಿಸಿದೆ. ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಹಾಲಿ ನಡೆಯುತ್ತಿರುವ ಸಂಸತ್ತಿನ ಅಧಿವೇಶನವನ್ನು ಸಾಮಾಜಿಕ ನ್ಯಾಯ ಅಧಿವೇಶನ ಎಂದು ಸ್ಮರಿಸಲಾಗುತ್ತದೆ ಎಂದು ಹೇಳಿದರು. 

ಒಂದು ಕಾನೂನು ಅಂಗೀಕಾರವಾಗಿದೆ. ಮತ್ತೊಂದು ಒಂದೆರಡು ದಿನಗಳಲ್ಲಿ ಪಾಸ್ ಆಗಲಿದೆ. ಆ. 15ರಿಂದ 30ರವರೆಗೆ ಜನರನ್ನು ತಲುಪಿ, ಸರ್ಕಾರ ಸಾಧನೆ ವಿವರಿಸುವಂತೆ ಬಿಜೆಪಿ ನಾಯಕರಿಗೆ ಸೂಚಿಸಲಾಗಿದೆ ಎಂದು ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ತಿಳಿಸಿದರು.

click me!