
ಬೆಂಗಳೂರು: ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ತಕ್ಷಣ ರೈತರ ಸಾಲ ಮನ್ನಾ ಘೋಷಣೆ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಆಚರಿಸ ಲಾಗುವುದು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆ ಸ್ವತಃ ಬಿಜೆಪಿಯಲ್ಲೇ ಗೊಂದಲ ಮೂಡಿಸಿದ್ದು, ಸೋಮವಾರ ಬಂದ್ ನಡೆಯುವುದೇ ಎಂಬ ಕುತೂಹಲ ಮೂಡಿಸಿದೆ.
ಈ ನಡುವೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಬಿಜೆಪಿ ಬಂದ್‌ಗೆ ಕರೆ ನೀಡಿದೆ ಎನ್ನುವುದಕ್ಕಿಂತ ರೈತರೇ ಬಂದ್ ಮಾಡಲು ನಿರ್ಧರಿಸಿದ್ದಾರೆ. ರೈತರು ಸ್ವಯಂಪ್ರೇರಿತರಾಗಿ ಬಂದ್ ಆಚರಿಸಲಿದ್ದಾರೆ ಎಂದು ಹೇಳಿದರು. ಆದರೆ, ಯಾವುದೇ ರೈತ ಸಂಘಟನೆಗಳು ಅಥವಾ ಇತರ ಸಂಘಟನೆಗಳು ಇದುವರೆಗೆ ತಾವು ಬಂದ್ ಆಚರಿಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿಲ್ಲ.
ಹೀಗಾಗಿ, ಬಂದ್ ನಡೆಯುವುದರ ಬಗ್ಗೆ ಅನುಮಾನಗಳೂ ವ್ಯಕ್ತವಾಗಿವೆ. ಶುಕ್ರವಾರ ಯಡಿಯೂರಪ್ಪ ಅವರು ಬಂದ್ ಆಚರಿಸುವ ಬಗ್ಗೆ
ಪ್ರಕಟಣೆ ನೀಡಿದ ಬೆನ್ನಲ್ಲೇ ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಎಲ್ಲ ಜಿಲ್ಲೆಗಳ ಪಕ್ಷದ ಘಟಕಗಳಿಗೆ ಸಂದೇಶ ರವಾನಿಸಲಾಗಿದೆ. ಆದರೆ, ಯಾವ ಸಂಘಟನೆಗಳ ಜತೆಗೆ ಬಂದ್ ಆಚರಿಸಬೇಕು? ಹೇಗೆ ಎಂಬಿತ್ಯಾದಿ ವಿವರಗಳಿಲ್ಲ ಎನ್ನಲಾಗಿದೆ.
ವಾಸ್ತವವಾಗಿ ಕರ್ನಾಟಕ ಬಂದ್‌ಗೆ ಕರೆ ನೀಡುವ ಬಗ್ಗೆ ಯಡಿಯೂರಪ್ಪ ಅವರು ಪಕ್ಷದಲ್ಲಿ ಗಂಭೀರವಾಗಿ ಚರ್ಚೆಯನ್ನೂ ನಡೆಸಿರಲಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಅನೌಪಚಾರಿಕವಾಗಿ ಪ್ರಸ್ತಾಪ ಮಾಡಿದ್ದರು. ಆ ವೇಳೆ ಕುಮಾರಸ್ವಾಮಿ ಸರ್ಕಾರಕ್ಕೆ ಇನ್ನೂ ಕೆಲವು ದಿನಗಳವರೆಗೆ ಕಾಲಾವಕಾಶ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೂ ಯಡಿಯೂರಪ್ಪ ಅವರು ಶುಕ್ರವಾರ ವಿಧಾನ ಸಭೆಯಲ್ಲಿ ಘೋಷಣೆ ಮಾಡಿಬಿಟ್ಟರು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.