ಬಿಜೆಪಿ ರಥ ಯಾತ್ರೆಗೆ ಹೈಕೋರ್ಟ್ ಸಮ್ಮತಿ: ಸರ್ಕಾರಕ್ಕೆ ಒಳ್ಳೆ ಫಜೀತಿ!

By Web DeskFirst Published Dec 20, 2018, 3:47 PM IST
Highlights

ಬಿಜೆಪಿ ರಥ ಯಾತ್ರೆಗೆ ತಡೆ ನೀಡುವಂತಿಲ್ಲ ಎಂದ ಹೈಕೋರ್ಟ್| ಅಮಿತ್ ಶಾ ರಥ ಯಾತ್ರೆಗೆ ಶರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್| ಸೂಕ್ತ ಭದ್ರತೆಗೆ ಪ.ಬಂಗಾಳ ಸರ್ಕಾರಕ್ಕೆ ಆದೇಶ ನೀಡಿದ ಕೋಲ್ಕತ್ತಾ ಹೈಕೋರ್ಟ್| ಪ.ಬಂಗಾಳದಲ್ಲಿ ಅಮಿತ್ ಶಾ ಅವರಿಂದ ಮೂರು ರಥ ಯಾತ್ರೆಗಳು

ಕೋಲ್ಕತ್ತಾ(ಡಿ.20): ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮೂರು ರಥ ಯಾತ್ರೆಗಳನ್ನು ನಡೆಸಲು ಕೋಲ್ಕತಾ ಹೈಕೋರ್ಟ್ ಅನುಮತಿ ನೀಡಿದೆ.

ರಾಜ್ಯದಲ್ಲಿ ರಥ ಯಾತ್ರೆಗೆ ಅನುಮತಿ ನಿರಾಕರಿಸಿದ್ದ ಪಶ್ಚಿಮ ಬಂಗಾಳ ಸರ್ಕಾರದ ಆದೇಶ ಪ್ರಶ್ನಿಸಿ, ಬಿಜೆಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಕೆಲ ಷರತ್ತುಗಳನ್ನು ವಿಧಿಸಿ ಯಾತ್ರೆಗೆ ಅನುಮತಿ ನೀಡಿ ಎಂದು ಸರ್ಕಾರಕ್ಕೆ ಸೂಚಿಸಿದೆ.

ಈ ಹಿಂದೆ ಕೂಚ್ ಬಿಹಾರ್‌ನಿಂದ ಆರಂಭವಾಗಬೇಕಿದ್ದ ಬಿಜೆಪಿ ರಥ ಯಾತ್ರೆಗೆ ಕೋಲ್ಕತಾ ಹೈಕೋರ್ಟ್‌ ಏಕ ಸದಸ್ಯ ಪೀಠ ಅನುಮತಿ ನಿರಾಕರಿಸಿತ್ತು.

ರಥ ಯಾತ್ರೆಗೆ ಅನುಮತಿ ನೀಡುವ ಕುರಿತು ಬಿಜೆಪಿಯ ಮೂವರು ಸದಸ್ಯರ ತಂಡದೊಂದಿಗೆ ಚರ್ಚಿಸಿ, ಡಿಸೆಂಬರ್ 14ರೊಳಗೆ ಅಂತಿಮ ನಿರ್ಧಾರಕ್ಕೆ ಬನ್ನಿ ಎಂದು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಗೃಹ ಕಾರ್ಯದರ್ಶಿಗೆ ಹೈಕೋರ್ಟ್ ಸೂಚಿಸಿದೆ.

ರಥ ಯಾತ್ರೆಯಿಂದ ಕೋಮುಗಲಭೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರಥ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

click me!