2002 ರಲ್ಲಿ ಬಿಲ್ಕಿಸ್ ಬನೋ ಎನ್ನುವ ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ 11 ಜನ ಅಪರಾಧಿಗಳಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ.
ನವದೆಹಲಿ (ಮೇ.04): 2002 ರಲ್ಲಿ ಬಿಲ್ಕಿಸ್ ಬನೋ ಎನ್ನುವ ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ 11 ಜನ ಅಪರಾಧಿಗಳಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ.
ಘಟನೆ ಬಳಿಕ ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿದಾಗ ಪಲಾಯನಗೈಯಲು ಪ್ರಯತ್ನಿಸಿದ ಆಕೆಯ ಕುಟುಂಬದ 8 ಮಂದಿಯನ್ನು ಈ ಅಪರಾಧಿಗಳು ಹತ್ಯೆಗೈದಿದ್ದರು. ಘಟನೆಗೆ ಸಂಬಂಧಿಸಿದ ಸಾಕ್ಷಾಧಾರಗಳನ್ನು ನಾಶಪಡಿಸಲು ಪ್ರಯತ್ನಿಸಿದ ವೈದ್ಯರು, ಪೊಲೀಸರು ಸೇರಿದಂತೆ 7 ಮಂದಿಯನ್ನು ಖುಲಾಸೆಗೊಳಿಸಲಾಗಿತ್ತು.
ಜಸ್ವಂತ್ ನಾಯ್, ಗೋವಿಂದ ನಾಯ್ ಹಾಗೂ ಇನ್ನೊಬ್ಬ ಅಪರಾಧಿಗೆ ಶಿಕ್ಷೆಯ ಪ್ರಮಾಣವನ್ನು ಜೀವಾವಧಿಯಿಂದ ಗಲ್ಲುಶಿಕ್ಷೆಗೆ ಏರಿಸಬೇಕು ಎನ್ನುವ ಸಿಬಿಐ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಖುಲಾಸೆಗೊಳಿಸಿದ 7 ಮಂದಿಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೋರ್ಟ್ ಸಿಬಿಐಗೆ ಅವಕಾಶ ನೀಡಿದೆ.
ನ್ಯಾಯಾಲಯದ ಈ ತೀರ್ಪನ್ನು ಗುಜರಾತಿನ ಬಿಲ್ಕಿಸ್ ಸ್ವಾಗತಿಸಿದ್ದಾರೆ. ನ್ಯಾಯಾಲಯಕ್ಕೆ ಹಾಗೂ ನ್ಯಾಯಾಧೀಶರಿಗೆ ನಾನು ಋಣಿ. ನ್ಯಾಯಾಂಗ ವ್ಯವಸ್ಥೆ ಮೇಲೆ ನಾನು ಇಟ್ಟಿರುವ ನಂಬಿಕೆಯನ್ನು ಎತ್ತಿ ಹಿಡಿಯಲಾಗಿದೆ. ನನಗೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿತ್ತು. ಈಗ ನಾನು, ನನ್ನ ಕುಟುಂಬ ಮೊದಲಿನಂತೆ ಬದುಕಬಹುದು. ಭಯದಿಂದ ಮುಕ್ತರಾಗಿದ್ದೇವೆ ಎಂದು ಬಿಲ್ಕಿಸ್ ಹೇಳಿದ್ದಾರೆ.