ಆಸ್ಪತ್ರೆಯಲ್ಲಿ ಕಿರುಚಿ, ಬೆತ್ತಲೆ ಓಡಿದ ಪ್ರಥಮ್!

By Suvarna Web DeskFirst Published Apr 7, 2017, 9:11 AM IST
Highlights

ಪ್ರಥಮ್‌ ತಾನು ಧರಿಸಿದ್ದ ಬಟ್ಟೆಕಳಚಿಟ್ಟು ಬೆತ್ತಲಾಗಿ ಐಸಿಯುನಲ್ಲಿ ಓಡಾಡಿದ್ದಾರೆ. ಪರಿಸ್ಥಿತಿ ಅತಿರೇಕಕ್ಕೆ ತಿರುಗಿದ ಪರಿಣಾಮ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆಸಿಕೊಂಡಿದ್ದಾರೆ. ಪೊಲೀಸರು ಬಂದ ಕೂಡಲೇ ಪ್ರಥಮ್‌ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಅಲ್ಲದೆ ಪೊಲೀಸರು ಹೊರ ಹೋಗದೆ ಇದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ‘ಬಿಗ್‌ಬಾಸ್‌' ಖ್ಯಾತಿಯ ಪ್ರಥಮ್‌ ಅವರು ನಡುರಾತ್ರಿ ಆ ಆಸ್ಪತ್ರೆಯಲ್ಲಿ ವಿವಸ್ತ್ರನಾಗಿ ಹುಚ್ಚಾಟ ನಡೆಸಿದ ಪರಿಣಾಮ ರಾತ್ರೋರಾತ್ರಿ ಅವರನ್ನು ಕಿಮ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 

ಪ್ರಸ್ತುತ ಕಿಮ್ಸ್‌ ಆಸ್ಪತ್ರೆ ಐಸಿಯುನಲ್ಲಿ ಪ್ರಥಮ್‌'ಗೆ ಚಿಕಿತ್ಸೆ ನಡೆಸಲಾಗಿದ್ದು, ಅವರನ್ನು 42 ಗಂಟೆ ನಿರೀ​ಕ್ಷಣೆಯಲ್ಲಿಟ್ಟು ವರದಿ ನೀಡುವಂತೆ ಕಿಮ್ಸ್‌ ವೈದ್ಯರಿಗೆ ನಿಮ್ಹಾನ್ಸ್‌ ಮನಃಶಾಸ್ತ್ರಜ್ಞರು ಕೋರಿದ್ದಾರೆ. ಈ ನಡುವೆ ತಾನು 20 ನಿದ್ರೆ ಮಾತ್ರೆ ಸೇವಿಸಿದ್ದಾಗಿ ಪ್ರಥಮ್‌ ಪೊಲೀಸರಿಗೆ ಲಿಖಿತ ಹೇಳಿಕೆ ನೀಡಿದ್ದಾರೆ.

ನಾಗರಬಾವಿಯ ಫೋರ್ಟಿಸ್‌ ಆಸ್ಪತ್ರೆಯಲ್ಲಿದ್ದ ಪ್ರಥಮ್‌, ಬುಧವಾರ ಮಧ್ಯರಾತ್ರಿ ಚಿಕಿತ್ಸೆಗೆ ವಿರೋ ಧಿಸಿದ್ದರು. ಆಗ ತನ್ನನ್ನು ಸಮಾಧಾನಪಡಿಸಲು ಬಂದ ವೈದ್ಯರು, ಶುಶ್ರೂಷಕಿಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ತಾವು ಧರಿಸಿದ್ದ ಬಟ್ಟೆತೆಗೆದು ಬೆತ್ತಲಾಗಿ ಓಡಾಡಿ ದುಂಡಾವರ್ತನೆ ತೋರಿದ್ದಾರೆ. ಈ ನಡವಳಿಕೆಯಿಂದ ಬೇಸರಗೊಂಡ ವೈದ್ಯರು, ಮುಂಜಾನೆ 3 ಗಂಟೆ ಸುಮಾರಿಗೆ ನಿಮ್ಹಾನ್ಸ್‌ ಆಸ್ಪತ್ರೆಗೆ ಬಲವಂತದಿಂದ ಅವರನ್ನು ಪೊಲೀಸರ ರಕ್ಷಣೆಯಲ್ಲಿ ಸ್ಥಳಾಂತರಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆ ಸಲುವಾಗಿ ಕಿಮ್ಸ್‌ ಆಸ್ಪತ್ರೆಗೆ ನಿಮ್ಹಾನ್ಸ್‌ ವೈದ್ಯರು ಕಳುಹಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಆತ್ಮಹತ್ಯೆ ಯತ್ನ ಪ್ರಕರಣಗಳಲ್ಲಿ ಕಾನೂನು ಪ್ರಕಾರ ಘಟನೆ ನಡೆದು 42 ತಾಸುಗಳ ಬಳಿಕ ಮನಃಶಾಸ್ತ್ರಜ್ಞರು ಚಿಕಿತ್ಸೆ ನೀಡಬೇಕಿದೆ. ಹಾಗಾಗಿ ಪ್ರಥಮ್‌ಗೆ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದ್ದು, ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ವರದಿ ಪಡೆದು ಅಗತ್ಯವಿದ್ದರೆ ಚಿಕಿತ್ಸೆ ನೀಡುವುದಾಗಿ ನಿಮ್ಹಾನ್ಸ್‌ ವೈದ್ಯರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಸಿಯುನಲ್ಲಿ ತಡರಾತ್ರಿ ಹೈಡ್ರಾಮಾ:
ತನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಗೆಳೆಯ ಲೋಕೇಶ್'ನನ್ನು ಭೇಟಿಯಾಗಿ ತೆರಳಿದ ನಂತರ ಪ್ರಥಮ್ ಆಸ್ಪತ್ರೆಯಲ್ಲಿ ಹುಚ್ಚಾಟ ಶುರು ಮಾಡಿದ್ದಾರೆ. ಬಾಯಿಗೆ ಬಂದಂತೆ ವೈದ್ಯರು, ಸಿಬ್ಬಂದಿಯನ್ನು ನಿಂದಿಸಿದ್ದಾರೆ. ಆಗ ಗಲಾಟೆ ಮಾಡದೆ ಸಂಯಮದಿಂದ ನಡೆದುಕೊಳ್ಳುವಂತೆ ಪೋಷಕರು ಹೇಳಿದ ಬಿದ್ಧಿಮಾತಿಗೂ ಅವರು ಬಗ್ಗಿಲ್ಲ. ಬದಲಿಗೆ, ಅವರ ಮಾತು ಕೇಳಿ ಮತ್ತಷ್ಟು ಕೆರಳಿದ ಪ್ರಥಮ್, ಕಿರುಚಾಡಿ ರಾದ್ಧಾಂತ್ ಮಾಡಿದ್ದಾರೆ.

ಈ ವೇಳೆ ಐಸಿಯುನಲ್ಲಿದ್ದ ಇತರೆ ರೋಗಿಗಳು ಹಾಗೂ ಅವರ ಸಂಬಂಧಿಕರು ಪ್ರಥಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪ್ರಥಮ್'ನನ್ನು ಆಸ್ಪತ್ರೆಯಿಂದ ಹೊರಕಳುಹಿಸುವಂತೆ ಅವರು ಒತ್ತಾಯಿಸಿದ್ದು, ಕೆಲ ರೋಗಿಗಳು ಪ್ರಥಮ್ ನಡವಳಿಕೆ ಸಹಿಸಲಾರದೆ ಆ ಕ್ಷಣವೇ ಬೇರೆ ವಾರ್ಡ್'ಗೆ ವರ್ಗಾಯಿಸಿಕೊಂಡಿದ್ದಾರೆ.

ಆಗ ಐಯುಸಿಗೆ ಆಗಮಿಸಿದ ಆಸ್ಪತ್ರೆಯ ಹಿರಿಯ ವೈದ್ಯರು, ‘ಶಾಂತವಾಗಿ ನಡೆದುಕೊಳ್ಳದಿದ್ದರೆ ಆಸ್ಪತ್ರೆಯಿಂದ ಹೊರಹಾಕಲಾಗುತ್ತದೆ' ಎಂದು ಪ್ರಥಮ್‌ಗೆ ತಾಕೀತು ಮಾಡಿದ್ದರು. ವೈದ್ಯರ ಸೂಚನೆಯಿಂದ ಆಕ್ರೋಶಗೊಂಡ ಪ್ರಥಮ್‌, ತಾನು ಧರಿಸಿದ್ದ ಬಟ್ಟೆಕಳಚಿಟ್ಟು ಬೆತ್ತಲಾಗಿ ಐಸಿಯುನಲ್ಲಿ ಓಡಾಡಿದ್ದಾರೆ. ಪರಿಸ್ಥಿತಿ ಅತಿರೇಕಕ್ಕೆ ತಿರುಗಿದ ಪರಿಣಾಮ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆಸಿಕೊಂಡಿದ್ದಾರೆ. ಪೊಲೀಸರು ಬಂದ ಕೂಡಲೇ ಪ್ರಥಮ್‌ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಅಲ್ಲದೆ ಪೊಲೀಸರು ಹೊರ ಹೋಗದೆ ಇದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಹೀಗೆ ಕೆಲ ಸಮಯ ಹೈಡ್ರಾಮಾ ನಡೆದ ಬಳಿಕ ಆಸ್ಪತ್ರೆ ಸಿಬ್ಬಂದಿ, ಪೊಲೀಸರ ಸಹಕಾರದಲ್ಲಿ ಆತನಿಗೆ ಚುಚ್ಚುಮದ್ದು ನೀಡಿದ್ದಾರೆ. ಬಳಿಕ ಅರೆಪ್ರಜ್ಞನಾದ ಪ್ರಥಮ್‌ರನ್ನು ಆಂಬ್ಯುಲೆನ್ಸ್‌ನಲ್ಲಿ ನಿಮ್ಹಾನ್ಸ್‌ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿಂದ ಕಿಮ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈಗ ಕಿಮ್ಸ್‌ನಲ್ಲಿ ಸಮಾಧಾನಚಿತ್ತದಿಂದ ಪ್ರಥಮ್‌ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ. ಚಿಕಿತ್ಸೆ ಸಲುವಾಗಿ ರೋಗಿಯನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಸ್ಥಳಾಂತರಿಸುವುದು ವೈದ್ಯರು ತೆಗೆದುಕೊಳ್ಳುವ ನಿರ್ಧಾರವಾಗಿದೆ. ಒಬ್ಬ ರೋಗಿಗೆ ಚಿಕಿತ್ಸೆ ಅಗತ್ಯವಿದ್ದಲ್ಲಿಗೆ ಕಳುಹಿಸುವ ಅಧಿಕಾರ ವೈದ್ಯರಿಗಿದೆ. ಈ ವಿಷಯದಲ್ಲಿ ಪೊಲೀಸರ ಹಸ್ತಕ್ಷೇಪವಿಲ್ಲ. ಅದರಂತೆ ಪ್ರಥಮ್‌ ಪ್ರಕರಣದಲ್ಲಿ ಸಹ ಕಿಮ್ಸ್‌, ನಿಮ್ಹಾನ್ಸ್‌ ವೈದ್ಯರ ಜತೆ ಚರ್ಚಿಸಿಯೇ ಫೋರ್ಟಿಸ್‌ ವೈದ್ಯರು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

20 ಮಾತ್ರೆ ನುಂಗಿರುವೆ: ಪ್ರಥಮ್‌:
ಸ್ನೇಹಿತನ ಅಪಪ್ರಚಾರದಿಂದ ಬೇಸರಗೊಂಡು ನಾನು 20 ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದೆ. ನನ್ನ ಈ ನಿರ್ಧಾರಕ್ಕೆ ಗೆಳೆಯ ಲೋಕೇಶನೇ ಕಾರಣ ಎಂದು ಪೊಲೀಸರಿಗೆ ಪ್ರಥಮ್‌ ಲಿಖಿತ ಹೇಳಿಕೆ ನೀಡಿರುವುದಾಗಿ ಮೂಲಗಳು ಹೇಳಿವೆ. ಪ್ರಕರಣದ ಸಂಬಂಧ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಫೋರ್ಟಿಸ್‌ ಆಸ್ಪತ್ರೆಯಲ್ಲಿ ಪ್ರಥಮ್‌'ರನ್ನು ವಿಚಾರಣೆ ನಡೆಸಿದ್ದರು. 

ಕನ್ನಡಪ್ರಭ ವಾರ್ತೆ
epaper.kannadaprabha.in

click me!