ಬೆಂಗಳೂರು ವಿಷನ್ ಗ್ರೂಪ್ ರದ್ದು

First Published Jun 12, 2018, 12:07 PM IST
Highlights

ಬೆಂಗಳೂರು ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡಲು ಬೆಂಗಳೂರು ನೀಲ ನಕ್ಷಾ ಕ್ರಿಯಾ ತಂಡವನ್ನು (ಬಿಬಿಪಿಎಜಿ) ರಚಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಬಿಬಿಪಿಎಜಿಯನ್ನು ಮುಂದುವರಿಸುವ ಅಗತ್ಯತೆ ಬಗ್ಗೆ ಹೈಕೋರ್ಟ್ ಪ್ರಶ್ನಿಸಿತ್ತು. 

ಬೆಂಗಳೂರು : ಬೆಂಗಳೂರು ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡಲು ಬೆಂಗಳೂರು ನೀಲ ನಕ್ಷಾ ಕ್ರಿಯಾ ತಂಡವನ್ನು (ಬಿಬಿಪಿಎಜಿ) ರಚಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಬಿಬಿಪಿಎಜಿಯನ್ನು ಮುಂದುವರಿಸುವ ಅಗತ್ಯತೆ ಬಗ್ಗೆ ಹೈಕೋರ್ಟ್ ಪ್ರಶ್ನಿಸಿತ್ತು. 

ಇದರಿಂದ ರಾಜ್ಯ ಸರ್ಕಾರವು ಬಿಬಿಪಿಎಜಿ ರಚನೆ ಮಾಡಿದ್ದ ಆದೇಶವನ್ನು ಜೂನ್ ೮ರಂದು ಹಿಂಪಡೆದುಕೊಂಡಿದೆ. ಆ ಕುರಿತು ಅಧಿಕೃತ ಆದೇಶವನ್ನು ಸರ್ಕಾರವು ಹೈಕೋರ್ಟ್‌ಗೆ ಸೋಮವಾರ ಸಲ್ಲಿಸಿದೆ. ಬಿಬಿಪಿಎಜಿ (ಬೆಂಗಳೂರು ವಿಷನ್ ಗ್ರೂಪ್) ರಚನೆ ಪ್ರಶ್ನಿಸಿ ಸಂಸದ ರಾಜೀವ್ ಚಂದ್ರಶೇಖರ್ ಮತ್ತು ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠಕ್ಕೆ, ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು ಆದೇಶ ಪತ್ರವನ್ನು ಸಲ್ಲಿಸಿದರು.

ಇದನ್ನು ದಾಖಲಿಸಿಕೊಂಡ ಹೈಕೋರ್ಟ್, ಬೆಂಗಳೂರು ವಿಷನ್ ಗ್ರೂಪ್ ಅನ್ನು ರಚಿಸಿದ ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದೆ. ಹೀಗಾಗಿ ಅರ್ಜಿಯ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ. ಬಿಬಿಪಿಎಜಿಯನ್ನು ಹಿಂಪಡೆದಿರುವುದರಿಂದ ಬೆಂಗಳೂರು ಮೆಟ್ರೋ ಪಾಲಿಟನ್ ಸಮಿತಿ ಮುಂದುವರಿಯಲಿದೆ. ಇದರಿಂದ ಬೆಂಗಳೂರು ವಿಷನ್ ಗ್ರೂಪ್‌ಗೆ ಸಂಬಂಧಿಸಿದ ಮತ್ತು ಅದಕ್ಕೆ ಹೊರಿಸಲಾಗಿದ್ದ ಜವಾಬ್ದಾರಿಗಳ ಕುರಿತ ದಾಖಲೆಗಳನ್ನು ಮೆಟ್ರೋ ಪಾಲಿಟನ್ ಸಮಿತಿಗೆ ವರ್ಗಾವಣೆ ಮಾಡಬೇಕು ಎಂದು ಸರ್ಕಾರಕ್ಕೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿಯ ಹಿಂದಿನ ವಿಚಾರಣೆ ವೇಳೆ, ಬೆಂಗಳೂರು ನಗರದ ಅಭಿವೃದ್ಧಿಗೆ ಸಲಹೆ ನೀಡಲು ಶಾಸನಬದ್ಧವಾಗಿ ರಚಿಸಿದ ಬೆಂಗಳೂರು ಮಹಾನಗರ ಯೋಜನಾ ಸಮಿತಿ (ಬಿಎಂಪಿಸಿ) ಅಸ್ತಿತ್ವದಲ್ಲಿದೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಪರ್ಯಾಯ ಸಂಸ್ಥೆ ಬೆಂಗಳೂರು ನೀಲನಕ್ಷೆ ಕ್ರಿಯಾ ಸಮಿತಿ (ಬಿಬಿಪಿಎಜಿ) ರಚಿಸುವ ಅಗತ್ಯ ಏನಿತ್ತು? 

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬಿಎಂಪಿಸಿ ಕೆಲಸ ಮಾಡಲಿದೆ. ಇದಕ್ಕಿಂತ ದೊಡ್ಡ ಸಂಸ್ಥೆ ಬೇಕಾ ಎಂದು ಹೈಕೋರ್ಟ್ ಪ್ರಶ್ನಿಸಿತ್ತು. ಹಾಗೆಯೇ, ಬಿಬಿಪಿಎಜಿಯನ್ನು ಮುಂದುವರಿಸುವ ಅಗತ್ಯತೆ ಕುರಿತು ನಿರ್ಧಾರ ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಇದರಿಂದ  ಸರ್ಕಾರವು ಬಿಬಿಪಿಎಜಿ ರಚಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದುಕೊಂಡಿದೆ. 

ಆದೇಶದಲ್ಲಿ ಏನಿದೆ?: ಬೆಂಗಳೂರು ವಿಷನ್ ಗ್ರೂಪ್ ಒಂದು ಸಲಹಾತ್ಮಕ ಸಮಿತಿಯಾಗಿದೆ. ಇದರಲ್ಲಿ ಮಹಾನಗರ ಬಗ್ಗೆ ಆಸಕ್ತಿ ಉಳ್ಳವರು, ಉದ್ಯಮಿಗಳು ಮತ್ತು ತಜ್ಞರನ್ನು ಒಳಗೊಂಡ ಸದಸ್ಯರನ್ನು ನೇಮಿಸಲಾಗಿದೆ. ಬೆಂಗಳೂರು ಮೆಟ್ರೋ ಪಾಲಿಟನ್ ಸಮಿತಿ ಒಂದು ಸಂವಿಧಾನಾತ್ಮಕ ಸಮಿತಿಯಾಗಿದ್ದು, ಹೆಚ್ಚಾಗಿ ಜನಪ್ರತಿನಿಧಿಗಳು ಸದಸ್ಯರಾಗಿದ್ದಾರೆ. ಸುಮಾರು 70-80 ಸದಸ್ಯರಿರುತ್ತಾರೆ. ಈ ಸಮಿತಿ ಬೆಂಗಳೂರಿನ ಅಭಿವೃದ್ಧಿ ಯೋಜನೆ ಯನ್ನು ತಯಾರಿಸುವ ಜವಾಬ್ದಾರಿ ಹೊಂದಿರುತ್ತದೆ. ಆದರೂ, ನ್ಯಾಯಾಲಯದ ಸೂಚನೆ ಮೆರೆಗೆ ವಿಷಯವನ್ನು ಸರ್ಕಾರವು ಪುನಃ ಪರಿಶೀಲಿಸಿ ಬೆಂಗಳೂರು ವಿಷನ್ ಗ್ರೂಪ್ಅನ್ನು ರದ್ದುಗೊಳಿಸಲು ತೀರ್ಮಾನಿಸಿರುತ್ತದೆ.

ಅದರಂತೆ ಬೆಂಗಳೂರು ವಿಷನ್ ಗ್ರೂಪ್  ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶಿಸಲಾಗಿದೆ ಎಂದು ಜೂನ್ ೮ರಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.


ಬೆಂಗಳೂರು ವಿಷನ್ ಗ್ರೂಪ್ ರಚನೆಯು ಹಿಂದಿನ ಕಾಂಗ್ರೆಸ್ ಸರ್ಕಾರವು ಸಂವಿಧಾನ ಉಲ್ಲಂಘಿಸಿ ನಡೆಸುತ್ತಿದ್ದ ದುಂದುವೆಚ್ಚ ಹಾಗೂ ಜಾರಿ ಮಾಡುತ್ತಿದ್ದ ಅನು ಮಾನಸ್ಪದ ಯೋಜನೆಗಳಿಗೆ ಒಂದು ಉದಾಹರಣೆಯಾ ಗಿತ್ತು. ಸಿದ್ದರಾಮಯ್ಯ ಸರ್ಕಾರವು ತನ್ನ  ಅಧಿಕಾರವಧಿಯಲ್ಲಿ ಕೇವಲ ಎರಡು ಬಾರಿಯಷ್ಟೇ ಮೆಟ್ರೋಪಾಲಿಟನ್ ಸಮಿತಿ ಯ ಸಭೆ ನಡೆಸಿತ್ತು. ಅದೂ ಹೈಕೋರ್ಟ್ ಮಧ್ಯಪ್ರವೇಶ ಮಾಡಿದರ ಪರಿಣಾಮ. ಸದ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ, ವಿಷನ್ ಗ್ರೂಪ್ ರಚನೆ ಕುರಿತು ಹೊರಡಿಸಿದ್ದ ಕಾನೂನು  ಹಿರ ಆದೇಶ ಹಿಂಪಡೆದುಕೊಂಡಿದೆ. ಇದು ಬೆಂಗಳೂರಿಗೆ ಒಂದು ಸೂಚನೆ. ಸರ್ಕಾರವು ಕಾನೂನು ಪ್ರಕಾರ ಕೆಲಸ ಮಾಡಬೇಕು. ಇಲ್ಲವಾದರೆ, ನಾವು ಶ್ರಮ ವಹಿಸಿದರೆ, ಕಾನೂನು ಪ್ರಕಾರ ಕೆಲಸ ಮಾಡಿಸುತ್ತೇವೆ. ಅಧಿಕಾರ ಕಸಿಯುವವರಿಗೆ ಇದು ಗೊತ್ತಾಗಲಿ. ನಾನು ಮತ್ತು ಬೆಂಗಳೂರು ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ಶೋಷಣೆ ವಿರುದ್ಧ ಯಾವಾಗಲೂ ಹೋರಾಡುತ್ತೇನೆ.

- ರಾಜೀವ್ ಚಂದ್ರಶೇಖರ್ ರಾಜ್ಯಸಭಾ ಸದಸ್ಯರು

click me!