
ಬೆಂಗಳೂರು(ಜು.01): ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಜ್ವರಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುವ ಕಡು ಬಡವರ ಪ್ಲೇಟ್ಲೆಟ್ ಖರೀದಿ ವೆಚ್ಚವನ್ನು ಬಿಬಿಎಂಪಿಯಿಂದಲೇ ಭರಿಸಲಾಗುವುದು ಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಭರವಸೆ ನೀಡಿದ್ದಾರೆ.
ನಗರಾದ್ಯಂತ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದು ಬಿಬಿಎಂಪಿಯು ಡೆಂಘೀ ಜ್ವರ ನಿಯಂತ್ರಿಸಲು ವಿಫಲವಾಗಿದೆ. ಡೆಂಘೀ ಜ್ವರ ನಿಯಂತ್ರಣಕ್ಕೆ ಹಾಗೂ ಸೂಕ್ತ ಚಿಕಿತ್ಸೆ ಲಭಿಸುವಂತೆ ಮಾಡಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪಕ್ಷ ಭೇದ ಮರೆತು ಎಲ್ಲ ಸದಸ್ಯರೂ ಒತ್ತಾಯ ಮಾಡಿದರು.
ಈ ವೇಳೆ ಡೆಂಘೀ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮುಖ್ಯ ಆರೋಗ್ಯಾಧಿಕಾರಿ ಡಾ. ಲೋಕೇಶ್ ನೀಡಿದ ವಿವರಣೆಯಿಂದ ಪಾಲಿಕೆ ಸದಸ್ಯರು ತೃಪ್ತರಾಗಲಿಲ್ಲ. ಜ್ವರ ನಿಯಂತ್ರಣ ಮಾಡಲು ಹಾಗೂ ಸೊಳ್ಳೆ ನಿಯಂತ್ರಣ ಮಾಡಲು ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಡಿ.ಜೆ. ಹಳ್ಳಿ ವಾರ್ಡ್ ಸಂಪತ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಪಾಲಿಕೆ ಸದಸ್ಯೆ ನೇತ್ರಾ ಪಲ್ಲವಿ ಮಾತನಾಡಿ, ನಮ್ಮ ತಾಯಿಗೆ ಡೆಂಘೀ ಜ್ವರ ಬಂದು ಉಳಿ ಯುವುದೇ ಇಲ್ಲ ಎಂಬ ಹಂತಕ್ಕೆ ಹೋಗಿದ್ದರು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ೫೦ರಿಂದ 70 ಸಾವಿರ ರು.ಗಳವರೆಗೆ ವೆಚ್ಚವಾಗುತ್ತದೆ. ನಮ್ಮ ತಾಯಿಗೆ ಬರೋಬ್ಬರಿ 5 ಲಕ್ಷ ವೆಚ್ಚವಾಗಿದೆ. ಬಡವರು ಚಿಕಿತ್ಸೆ ಹೇಗೆ ಪಡೆಯಬೇಕು? ಎಂದು ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಿದ ಬಿಬಿಎಂಪಿ ಆಯುಕ್ತರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀಗೆ ಒಳಗಾಗಿ ಪ್ಲೇಟ್ಲೆಟ್ ಸಂಖ್ಯೆ ಕ್ಷೀಣಿಸಿ ಸಮಸ್ಯೆ ಎದುರಿಸುವ ಬಡ ರೋಗಿಗಳಿಗೆ ಪಾಲಿಕೆಯಿಂದಲೇ ನೆರವು ನೀಡಲಾಗುವುದು. ಆಸ್ಪತ್ರೆಯಲ್ಲಿ ಪ್ಲೇಟ್ಲೆಟ್ ಗಳಿಗೆ ತಗಲುವ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲು ಅಗತ್ಯ ಕ್ರಮಕ್ಕೆ ಆದೇಶಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರ ನೀಡಿರುವ ಕೋಟ್ಯಂತರ ರು. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಬಿಬಿಎಂಪಿ ಸದಸ್ಯರು ಕೌನ್ಸಿಲ್ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ವಿವಿ‘ ವಿಭಾಗದ ಮುಖ್ಯ ಇಂಜಿನಿಯರ್‌ಗಳನ್ನು ಸಭೆಯಲ್ಲಿ ಪರೇಡ್ ನಡೆಸಿ ಅವರಿಗೆ ನೀಡಲಾಗಿರುವ ಜವಾಬ್ದಾರಿಗಳ ವಿವರ ಪಡೆಯಲಾಯಿತು. ಮಧ್ಯಪ್ರವೇಶಿಸಿದ ಮೇಯರ್ ಜಿ.ಪದ್ಮಾವತಿ, ಮುಂದಿನ ಸಭೆಯಲ್ಲಿ ಅಧಿಕಾರಿಗಳು ಬರದಿದ್ದರೆ ಹಾಗೂ ಬಿಬಿಎಂಪಿ ಸದಸ್ಯರಿಗೆ ಮಾಹಿತಿ ನೀಡದಿದ್ದರೆ ಅಂತಹ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಯುಕ್ತರಿಗೆ ಸೂಚನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.