
ಬೆಂಗಳೂರು: ನಗರದಲ್ಲಿರುವ ಎಲ್ಲ ಆಸ್ತಿಗಳ ಸ್ವರೂಪ, ಆಸ್ತಿ ತೆರಿಗೆ, ಆಸ್ತಿ ತೆರಿಗೆ ಪಾವತಿ ಕುರಿತು ಸಂಪೂರ್ಣ ಮಾಹಿತಿ ಒದಗಿಸುವ ಉದ್ದೇಶದಿಂದ ರೂಪಿಸಲಾದ ಮಹತ್ವಾಕಾಂಕ್ಷಿ ‘ಜೆಪ್ಟಿಸ್'(GEPTIS) ಸೇವೆಗೆ ಸಿಎಂ ಮಂಗಳವಾರ ಚಾಲನೆ ನೀಡಿದರು.
ಈ ಸೇವೆಯಿಂದ ಆಸ್ತಿ ಮಾಲೀಕರು ವೆಬ್‌ಸೈಟ್‌ನಲ್ಲಿ ತಮ್ಮ ಆಸ್ತಿಯನ್ನು ಗುರುತಿಸಿ, ತೆರಿಗೆ ವಿವರ, ಪಾವತಿ/ ಬಾಕಿ ವಿವರ, ತಮ್ಮ ಸುತ್ತಮುತ್ತಲಿನ ಆಸ್ತಿಗಳ ತೆರಿಗೆ ವಿವರ ಸೇರಿದಂತೆ ಹಲವು ಮಾಹಿತಿಯನ್ನು ಕುಳಿತಲ್ಲೇ ಪಡೆಯಬಹುದಾಗಿದೆ. ಜನತೆ ತಮಗೆ ನೀಡಲಾಗಿರುವ ನೂತನ ಪಿಐಡಿ ಸಂಖ್ಯೆ, ಅಪ್ಲಿಕೇಷನ್ ಸಂಖ್ಯೆ ಹಾಗೂ ಸ್ಥಳದ ಆಧಾರದ ಮೇಲೆ ತಮ್ಮ ಆಸ್ತಿಯನ್ನು ಪತ್ತೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಇದರೊಂದಿಗೆ ನೂತನ ವೆಬ್'ಸೈಟ್‌ನಲ್ಲಿ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಇತರೆ ಸೇವೆಗಳ ಮಾಹಿತಿ ಸುಲಭವಾಗಿ ಪಡೆಯುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಕೌನ್ಸಿಲ್'ನಲ್ಲಿ ಪಾಲಿಕೆಯ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಣಯಗಳು, ಪಾಲಿಕೆಯ ವಿವಿಧ ಇಲಾಖೆಗಳು, ಪಾಲಿಕೆಯಲ್ಲಿರುವ ಅಧಿಕಾರಿಗಳ ದೂರವಾಣಿ ಸಂಖ್ಯೆ ಸೇರಿದಂತೆ ಹಲವು ಉಪಯುಕ್ತ ಮಾಹಿತಿ ಸಾರ್ವಜನಿಕರಿಗೆ ದೊರೆಯುವಂತೆ ವೆಬ್'ಸೈಟ್ ವಿನ್ಯಾಸಗೊಳಿಸಲಾಗಿದೆ.
ಚಿತಾಗಾರದಲ್ಲೇ ಪ್ರಮಾಣಪತ್ರ!: ಪಾಲಿಕೆಯಿಂದ ಈಗಾಗಲೇ ನಗರದಲ್ಲಿ ರುವ ಚಿತಾಗಾರಗಳನ್ನು ಮುಂಗಡವಾಗಿ ಕಾಯ್ದಿರಿಸುವ ವ್ಯವಸ್ಥೆ ಜಾರಿಗೊಳಿಸಲಾ ಗಿದೆ. ಅದರಂತೆ ವೆಬ್‌ಸೈಟ್‌ನಲ್ಲಿ ಸಿಗುವ ಅರ್ಜಿ ಭರ್ತಿ ಮಾಡಿ, ದಿನಾಂಕ ಹಾಗೂ ಸಮಯ ನಿಗದಿಪಡಿಸಿದರೆ ಆ ಸಮಯದಲ್ಲಿ ಅಂತ್ಯಸಂಸ್ಕಾರ ನಡೆಸಬಹುದು. ಇದರೊಂದಿಗೆ ಮುಂದಿನ ದಿನಗಳಲ್ಲಿ ಚಿತಾಗಾರಕ್ಕೆ ಬರುವ ಮೃತದೇಹಗಳ ಅಂತ್ಯಸಂಸ್ಕಾರವಾದ ನಂತರ ಅಲ್ಲಿಯೇ ಮರಣ ಪ್ರಮಾಣ ಪತ್ರ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.
ವೆಬ್'ಸೈಟ್ ಎರರ್!: ನವೀಕೃತ ವೆಬ್'ಸೈಟ್ ಸಾರ್ವಜನಿಕರಿಗೆ ಪಾಲಿಕೆಯ ಬಗ್ಗೆ ಮಾಹಿತಿ ಪಡೆಯಲು ಸುಲಭ ಆಯ್ಕೆಗಳನ್ನು ಹೊಂದಿದೆ. ಆದರೆ, ಕೆಲ ವಿಷಯ ಹೊರತುಪಡಿಸಿದರೆ ಬಹುತೇಕ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿದಾಗ ‘ಎರರ್' ಎಂಬ ಸಂದೇಶ ಬರುತ್ತಿದೆ. ಜೆಪ್ಟಿಸ್ ಪುಟವೂ ಎರರ್ ಸಂದೇಶ ನೀಡುತ್ತಿದೆ.
ತಡವಾಗಿ ಬಂದ ಮೇಯರ್!
ಪಾಲಿಕೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸಿ 10 ನಿಮಿಷ ಕಳೆದರೂ ಮೇಯರ್ ಜಿ.ಪದ್ಮಾವತಿ ಸುಳಿವಿರಲಿಲ್ಲ. ಕಾರ್ಯಕ್ರಮ ಆರಂಭವಾಗಿ ಕೆಲ ಹೊತ್ತಿನ ಬಳಿಕ ಪುರಭವನಕ್ಕೆ ಬಂದ ಅವರು ಅವಸರದಿಂದಲೇ ವೇದಿಕೆ ಏರಿದರು. ಈ ವೇಳೆ ವೇದಿಕೆಯಲ್ಲಿ ಆಸೀನರಾಗಿದ್ದ ಸಿಎಂ, ‘ನಿಮ್ಮ ಮನೆ ಕಾರ್ಯಕ್ರಮಕ್ಕೆ ನೀನೇ ತಡವಾಗಿ ಬಂದರೆ ಹೇಗಮ್ಮಾ...' ಎಂದರು. ಆಗ ಮೇಯರ್ ನಗುತ್ತಲೇ ಸಮಾಜಾಯಿಷಿ ನೀಡಿದರು.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.