
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ತಿದಾರರಿಂದ ಸಂಗ್ರಹಿಸುತ್ತಿರುವ ‘ಘನ ತ್ಯಾಜ್ಯ ವಿಲೇವಾರಿ ಉಪಕರ' ಪರಿಷ್ಕರಣೆಗೆ ಚಿಂತಿಸಿರುವ ಬಿಬಿಎಂಪಿ, ಆಸ್ತಿದಾರರ ಒಟ್ಟು ಆಸ್ತಿ ತೆರಿಗೆ ಮೊತ್ತದ ಶೇ.15ರಷ್ಟನ್ನು ತ್ಯಾಜ್ಯ ಉಪಕರ ರೂಪದಲ್ಲಿ ಸಂಗ್ರಹಿಸಲು ಪ್ರಸ್ತಾವ ಮಂಡಿಸಲು ಸಿದ್ಧತೆ ನಡೆಸಿದೆ. ಕೌನ್ಸಿಲ್ ಸಭೆಯಲ್ಲಿ ಅನುಮೋದನೆಯಾಗಿ ಸರ್ಕಾರದ ಅಂಗೀಕಾರ ಪಡೆದರೆ 2017ರ ಏಪ್ರಿಲ್‌ನಿಂದ ಜಾರಿಗೆ ಬರಲಿದೆ.
ಈವರೆಗೂ ಕಟ್ಟಡದ ನಿರ್ಮಿತ ಪ್ರದೇಶ ವಿಸ್ತೀರ್ಣಕ್ಕೆ ಅನುಗುಣವಾಗಿ ಉಪಕರ ದರ ನಿಗದಿಪಡಿಸಲಾಗುತ್ತಿತ್ತು. ಇದೀಗ ವಾರ್ಷಿಕ ಆಸ್ತಿ ತೆರಿಗೆ ಮೊತ್ತದ ಶೇ.15ರಷ್ಟನ್ನು ತ್ಯಾಜ್ಯ ಉಪಕರ ರೂಪದಲ್ಲಿ ಸಂಗ್ರಹಿಸಲು ಪಾಲಿಕೆ ಮುಂದಾಗಿದೆ. ಹಾಗಾಗಿ ಆಸ್ತಿದಾರರು ಈ ಹಿಂದೆ ಪಾವತಿಸುತ್ತಿದ್ದ ಉಪಕರ, 5ರಿಂದ 6 ಪಟ್ಟು ಹೊರೆಯಾಗುವ ಸಾಧ್ಯತೆಗಳಿವೆ. 2017-18ನೇ ಹಣಕಾಸು ವರ್ಷದಿಂದ ಅಂದರೆ, 2017ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಸಂಗ್ರಹಿಸುವ ಸಂಬಂಧ ಸಿದ್ಧಪಡಿಸಿರುವ ಯೋಜನೆಯ ಪ್ರಸ್ತಾವ ಡಿ.28ರಂದು ನಡೆಯಲಿರುವ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಂಡನೆಯಾಗಲಿದೆ.
ಈಗಾಗಲೇ ನಗರದ ಜನತೆ ಆಸ್ತಿ ತೆರಿಗೆ, ನೀರಿನ ದರ, ವಿದ್ಯುತ್ ದರ ಏರಿಕೆಯಿಂದ ತತ್ತರಿಸುತ್ತಿದ್ದು, ತ್ಯಾಜ್ಯ ವಿಲೇವಾರಿ ಕರದ ಹೊರೆಯೂ ಇದಕ್ಕೆ ಸೇರಲಿದೆ. 1976ರ ಕಾಯ್ದೆ ಅಡಿ ತೆರಿಗೆ ವಸೂಲಾತಿ ನಿಯಮ 19ಎಗೆ 2010ರಲ್ಲಿ ತಿದ್ದುಪಡಿ ತರುವ ಮೂಲಕ ಘನ ತ್ಯಾಜ್ಯ ವಿಲೇವಾರಿ ಕರ ಸಂಗ್ರಹಿಸಲು ಪಾಲಿಕೆ ಸಭೆ ನಿರ್ಣಯ ಕೈಗೊಂಡಿತ್ತು. ಪಾಲಿಕೆ ವ್ಯಾಪ್ತಿಯಲ್ಲಿರುವ ವಸತಿ ಕಟ್ಟಡ, ವಾಣಿಜ್ಯ ಕಟ್ಟಡ, ಕೈಗಾರಿಕಾ ಕಟ್ಟಡ ಹಾಗೂ ಕಲ್ಯಾಣ ಮಂಟಪ, ಆಸ್ಪತ್ರೆ, ಹೋಟೆಲ್‌ಗಳಿಗೆ ನಾಲ್ಕು ಹಂತದಲ್ಲಿ ಪ್ರತ್ಯೇಕವಾಗಿ ಕರ ಸಂಗ್ರಹಿಸಲು ನಿರ್ಧರಿಸಿ, 2011-12ನೇ ಸಾಲಿನಿಂದ ಆಸ್ತಿ ತೆರಿಗೆ ಜತೆಯಲ್ಲಿ ತ್ಯಾಜ್ಯ ಉಪಕರವನ್ನೂ ಸಂಗ್ರಹಿಸಲಾಗುತ್ತಿದೆ. ಇದೀಗ ಈ ಉಪಕರ ಪ್ರಮಾಣವನ್ನು ಮತ್ತಷ್ಟುಹೆಚ್ಚಳ ಮಾಡುವುದಕ್ಕೆ ಪಾಲಿಕೆ ಮುಂದಾಗಿದೆ.
ಸರ್ಕಾರ ಸಮರ್ಥನೆ: ನಗರದಲ್ಲಿನ ಕಸ ವಿಲೇವಾರಿಗೆ ಪ್ರತಿ ವರ್ಷ ರೂ.450ರಿಂದ ರೂ.500 ಕೋಟಿ ವೆಚ್ಚವಾಗುತ್ತಿದೆ. ಪ್ರಸ್ತುತ ತ್ಯಾಜ್ಯ ಕರದಿಂದ ಕೇವಲ ರೂ.40 ಕೋಟಿ ಸಂಗ್ರಹವಾಗುತ್ತಿದ್ದು, ಖರ್ಚು ಮಾಡುತ್ತಿರುವ ಹಣದ ಶೇ.10ರಷ್ಟೂ ಪಾಲಿಕೆಗೆ ಬರುತ್ತಿಲ್ಲ. ಹೀಗಾಗಿ ಆಸ್ತಿ ತೆರಿಗೆ ಮೇಲೆ ಶೇ.15ರಷ್ಟುತೆರಿಗೆ ವಿಧಿಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಪ್ರಸ್ತಾವದಲ್ಲಿ ಸಮರ್ಥನೆ ಮಾಡಿಕೊಂಡಿದೆ. ದರ ಪರಿಷ್ಕರಣೆಯಾದರೆ ಸುಮಾರು ಎರಡು ಸಾವಿರ ಕೋಟಿ ರು. ಆಸ್ತಿ ತೆರಿಗೆ ಸಂಗ್ರಹವಾದರೆ, ತ್ಯಾಜ್ಯ ಉಪಕರದಿಂದ ರೂ.300 ಕೋಟಿ ಸಂಗ್ರಹವಾಗಲಿದೆ. ಇದರಿಂದ ನಗರದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.
ಹೊಸ ಕಟ್ಟಡಗಳು ಉಪಕರ ವ್ಯಾಪ್ತಿಗೆ: ಈವರೆಗೂ ವಿನಾಯಿತಿ ಪಡೆದಿದ್ದ (ಹೊಸ ಪ್ರಸ್ತಾವದಂತೆ) ಧಾರ್ಮಿಕ ಸಂಸ್ಥೆ ಹಾಗೂ ಬಿಬಿಎಂಪಿ ಬಾಡಿಗೆ ನೀಡಿರುವ ಕಟ್ಟಡಗಳೂ ಕಸ ವಿಲೇವಾರಿ ಉಪಕರ ಪಾವತಿಸುವುದು ಕಡ್ಡಾಯವಾಗಲಿದೆ.
ರಾಜಸ್ಥಾನ ಮಾದರಿ ದಂಡ: ಪ್ರಸ್ತುತ ಕೆಎಂಸಿ ಕಾಯ್ದೆ (ತಿದ್ದುಪಡಿ) ಷೆಡ್ಯೂಲ್-13, ಸೆಕ್ಷನ್ 43(ಎ) ಪ್ರಕಾರ ದಂಡ ವಿಧಿಸುತ್ತಿದ್ದು, ಇನ್ನು ಮುಂದೆ ರಾಜಸ್ಥಾನ ಮಾದರಿ ಅಳವಡಿಕೆಗೆ ಪಾಲಿಕೆ ಮುಂದಾಗಿದೆ. ಉಪ ಕರ ಹೆಚ್ಚಳವನ್ನು ವಸತಿ ಕಟ್ಟಡ ಹಾಗೂ ವಾಣಿಜ್ಯ ಕಟ್ಟಡಗಳೆರಡಕ್ಕೂ ಒಂದೇ ರೀತಿಯಲ್ಲಿ ಹೆಚ್ಚಳ ಮಾಡುತ್ತಿರುವುದರಿಂದ ಜನ ಸಾಮಾನ್ಯರಿಗೆ ಹೊರೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಉಪಕರ ಹೆಚ್ಚಳ ಅನಿವಾರ್ಯ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.