ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಶ್ರೀನಿವಾಸಪ್ರಸಾದ್

By Suvarna Web DeskFirst Published Dec 27, 2016, 6:21 AM IST
Highlights

ಸಿದ್ದರಾಮಯ್ಯ ದಲಿತರ ಚಿಂತನೆಗಳ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ. ಆದರೆ ಅದನ್ನು ಕಾರ್ಯಗತ ಮಾಡುವುದಿಲ್ಲವೆಂದು ವಿ.ಶ್ರೀನಿವಾಸಪ್ರಸಾದ್ ಹೇಳಿದ್ದಾರೆ.

ಮೈಸೂರು (ಡಿ.27):  ರಾಜ್ಯದಲ್ಲಿ ದಲಿತನೊಬ್ಬ ಮುಖ್ಯಮಂತ್ರಿ ಆಗುವುದನ್ನು  ಸಿಎಂ ಸಿದ್ದರಾಮಯ್ಯ ವ್ಯವಸ್ಥಿತವಾಗಿ ತಡೆದಿದ್ದಾರೆ  ಎಂದು ಮಾಜಿ ಸಚಿವ ವಿ.ಶ್ರೀನಿವಾಸ್​ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಒಬ್ಬರನ್ನು ಕೇಂದ್ರಕ್ಕೆ ಕಳುಹಿಸಿ 45 ಜನರನ್ನು ನಾಯಕರನ್ನಾಗಿ ಮಾಡಲಾಗಿದೆ. ಪರಮೇಶ್ವರ್ ಸೋಲಿಸಿ ಮೂಗ-ಕಿವುಡನನ್ನು ಶಾಲೆಗೆ ಮುಖ್ಯೋಪಾಧ್ಯಾಯರನ್ನಾಗಿ ಮಾಡಲಾಗಿದೆ. ನನ್ನನ್ನು ಕೂಡ ಇದೇ  ರೀತಿ ಮುಗಿಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದೇನೆ. ಜನರಿಗೆ ಗೌರವ ತಂದುಕೊಡುವ, ಹಗರಣ ಮುಕ್ತವಾಗಿ ರಾಜಕೀಯ ಮಾಡಿದ್ದೇನೆ. ಗೌರವಯುತ ನಿವೃತ್ತಿ ಬಯಸಿದ್ದೆ. ಆದರೆ ಸಿಎಂ ಸಿದ್ದರಾಮಯ್ಯ ಮಾಸದ ಗಾಯ ಮಾಡಿಬಿಟ್ಟರು. ಅವರನ್ನು ಕಷ್ಟ ಕಾಲದಲ್ಲಿ ಕೈಹಿಡಿದು ಧೈರ್ಯ ತುಂಬಿದವನು ನಾನು. ಆದರೆ ಉದ್ದೇಶಪೂರ್ವಕವಾಗಿಯೇ ನನ್ನನ್ನು ಸಂಪುಟದಿಂದ ಕೈಬಿಟ್ಟರು ಎಂದು ಗುಡುಗಿದರು.

ಸಿದ್ದರಾಮಯ್ಯ ದಲಿತರ ಚಿಂತನೆಗಳ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ. ಆದರೆ ಅದನ್ನು ಕಾರ್ಯಗತ ಮಾಡುವುದಿಲ್ಲವೆಂದು ವಿ.ಶ್ರೀನಿವಾಸಪ್ರಸಾದ್ ಹೇಳಿದ್ದಾರೆ. ಸಿದ್ದರಾಮಯ್ಯ ಬುದ್ಧ , ಬಸವ, ಅಂಬೇಡ್ಕರ್ ತತ್ವಗಳನ್ನ ಕೇವಲ ಸಮಾವೇಶದಲ್ಲಿ ಮಾತ್ರ ನೆನಪು ಮಾಡಿಕೊಳ್ಳುತ್ತಾರೆ. ಅದನ್ನ ಕಾರ್ಯಗತ ಮಾಡಲು ಅಥವಾ ಪಾಲನೆ ಮಾಡಲು ಅಲ್ಲಾ ಎಂದು ಶ್ರೀನಿವಾಸಪ್ರಸಾದ್ ಹೇಳಿದ್ದಾರೆ.

ಸಚಿವ ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ವಿ.ಶ್ರೀನಿವಾಸಪ್ರಸಾದ್ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ.

click me!