ದೊಡ್ಡಬೊಮ್ಮಸಂದ್ರ ಮುಖ್ಯರಸ್ತೆಗೆ ನಿರಂಜನ್‌ ಹೆಸರು: ಪಾಲಿಕೆ ಉಲ್ಟಾ

By Suvarna Web DeskFirst Published May 23, 2017, 10:52 AM IST
Highlights

ಜನವರಿ ಮೊದಲ ವಾರದಲ್ಲಿ ಉಗ್ರರರ ದಾಳಿಗೆ ಹುತಾತ್ಮರಾದ ಲೆಫ್ಟಿನೆಂಟ್‌ ಕರ್ನಲ್‌ ನಿರಂಜನ್‌ಕುಮಾರ್‌ ಅವರ ಹೆಸರನ್ನು ವಿದ್ಯಾ​ರಣ್ಯಪುರದವರೆಗಿನ ದೊಡ್ಡ ಬೊಮ್ಮಸಂದ್ರ ಮುಖ್ಯ ರಸ್ತೆಗೆ ನಾಮಕರಣ ಮಾಡಲು ಬಿಬಿಎಂಪಿಯು ಕಳೆದ ತಿಂಗಳು ಸ್ವಯಂ ಪ್ರೇರಿತವಾಗಿ ನಿರ್ಧಾರ ಮಾಡಿತ್ತು. ಈ ನಡುವೆ ನಿರಂಜನ್‌ಕುಮಾರ್‌ ಹೆಸರಿಡಲು ಮುಂದಾಗಿ​ರುವ ರಸ್ತೆಗೆ ಈ ಮೊದಲೇ ‘ಪೇಟೆ ಸಿದ್ದಪ್ಪ ತಿರುವು' ಎಂಬ ಹೆಸರು ಇರುವುದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು (ಮೇ.23): ದೊಡ್ಡಬೊಮ್ಮಸಂದ್ರ ಮುಖ್ಯರಸ್ತೆಗೆ ಪಠಾಣ್‌ಕೋಟ್‌ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಲೆಫ್ಟಿನೆಂಟ್‌ ಕರ್ನಲ್‌ ನಿರಂಜನ್‌ಕುಮಾರ್‌ ಹೆಸರು ನಾಮಕರಣ ಮಾಡುವುದಾಗಿ ಹೇಳಿದ್ದ ಬಿಬಿಎಂಪಿ ಇದೀಗ ಉಲ್ಟಾಹೊಡೆದಿದ್ದು ಬೇರೆ ಅಂಡ​ರ್‌ಪಾಸ್‌ಗೆ ಅವರ ಹೆಸರು ನಾಮಕರಣ ಮಾಡುವು​ದಾ​ಗಿ ಹೇಳಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.

ಜನವರಿ ಮೊದಲ ವಾರದಲ್ಲಿ ಉಗ್ರರರ ದಾಳಿಗೆ ಹುತಾತ್ಮರಾದ ಲೆಫ್ಟಿನೆಂಟ್‌ ಕರ್ನಲ್‌ ನಿರಂಜನ್‌ಕುಮಾರ್‌ ಅವರ ಹೆಸರನ್ನು ವಿದ್ಯಾ​ರಣ್ಯಪುರದವರೆಗಿನ ದೊಡ್ಡ ಬೊಮ್ಮಸಂದ್ರ ಮುಖ್ಯ ರಸ್ತೆಗೆ ನಾಮಕರಣ ಮಾಡಲು ಬಿಬಿಎಂಪಿಯು ಕಳೆದ ತಿಂಗಳು ಸ್ವಯಂ ಪ್ರೇರಿತವಾಗಿ ನಿರ್ಧಾರ ಮಾಡಿತ್ತು. ಈ ನಡುವೆ ನಿರಂಜನ್‌ಕುಮಾರ್‌ ಹೆಸರಿಡಲು ಮುಂದಾಗಿ​ರುವ ರಸ್ತೆಗೆ ಈ ಮೊದಲೇ ‘ಪೇಟೆ ಸಿದ್ದಪ್ಪ ತಿರುವು' ಎಂಬ ಹೆಸರು ಇರುವುದು ತಡವಾಗಿ ಬೆಳಕಿಗೆ ಬಂದಿದೆ. ಸ್ವಾತಂತ್ರ್ಯ ಹೋರಾಟ​ಗಾರರೂ ಹಾಗೂ ಆ ರಸ್ತೆಗಾಗಿ ಉಚಿತವಾಗಿ ಭೂಮಿ ದಾನ ಮಾಡಿದ ಪೇಟೆ ಸಿದ್ದಪ್ಪ ಅವರ ಹೆಸರಿಗೆ ಬದಲಿಗೆ ನಿರಂಜನ್‌ ಅವರ ಹೆಸರಿಡುತ್ತಿ​ರುವುದನ್ನು ಸಿದ್ದಪ್ಪ ಪುತ್ರ ಖಂಡಿಸಿದ್ದಾರೆ.

ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪತ್ರ ಬರೆದಿರುವ ಸಿದ್ದಪ್ಪ ಪುತ್ರ ನಾಗರಾಜ್‌, ಸ್ವಾತಂತ್ರ್ಯ ಹೋರಾಟಗಾರರ ಹೆಸರು ಬದಲಿಸುವುದನ್ನು ವಿರೋಧಿಸಿದ್ದಾರೆ. ಈ ಮನವಿ ಪತ್ರದ ಆಧಾರದ ಮೇಲೆ ಕೃಷ್ಣ ಬೈರೇಗೌಡರು ಮೇಯರ್‌ ಜಿ. ಪದ್ಮಾವತಿಗೆ ಪತ್ರ ಬರೆದಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಯರ್‌ ಜಿ. ಪದ್ಮಾವತಿ ಅವರು, ಲೆಫ್ಟೆನೆಂಟ್‌ ಕರ್ನಲ್‌ ನಿರಂಜನ್‌ಕುಮಾರ್‌ ಅವರ ಹೆಸರನ್ನು ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಅಂಡರ್‌ಪಾಸ್‌ ಹಾಗೂ ಹೆಬ್ಬಾಳ ಕೆಂಪಾಪುರದ ಪಾದಚಾರಿ ಮೇಲ್ಸೇತುವೆಗೆ ನಾಮಕರಣ ಮಾಡುವುದಾಗಿ ಹೇಳಿದ್ದಾರೆ.

ಬಿಬಿಎಂಪಿ ಆಡಳಿತವೇ ಸ್ವತಃ ಮುಂದೆ ಬಂದು ನಿರಂಜನ್‌ಕುಮಾರ್‌ ಹೆಸರು ಇಡುವು​ದಾಗಿ ಪ್ರಕಟಿಸಿತ್ತು. ಇದೀಗ ಬಿಬಿಎಂಪಿಯೇ ಬೇರೆ ಅಂಡರ್‌ಪಾಸ್‌ಗೆ ಹೆಸರು ಇಡುವುದಾಗಿ ಹೇಳಿ ನಿರಂಜನ್‌ಕುಮಾರ್‌ಗೆ ಅವಮಾನ ಮಾಡಿ​ದೆ ಎಂದು ಅವರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ಅಧಿಕಾರಿಗಳ ಎಡವಟ್ಟು: ಮೇಯರ್‌

 ಈಗಾಗಲೇ ರಸ್ತೆಗೆ ಪೇಟೆ ಸಿದ್ಧಪ್ಪ ಅವರ ಹೆಸರಿದ್ದರೂ ಅಧಿಕಾರಿಗಳು ಎಡವಟ್ಟು ಮಾಡಿ ರಸ್ತೆಯನ್ನು ನಿರಂಜನ್‌ಕುಮಾರ್‌ ಅವರ ಹೆಸರಿಡಲು ಪ್ರಸ್ತಾಪಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ಸಿದ್ಧಪ್ಪ ಅವರು ಪ್ರಸ್ತುತ ಮಾರುಕಟ್ಟೆಬೆಲೆಯಲ್ಲಿ 200 ಕೋಟಿ ಬೆಲೆ ಬಾಳುವ ಜಾಗ ನೀಡಿದ್ದಾರೆ. ಹಾಗೂ ಸ್ವಾತಂತ್ರ್ಯ ಹೋರಾಟ​ಗಾರರೂ ಆಗಿದ್ದಾರೆ. ಅಂತಹವರ ಹೆಸರು ತೆಗೆಯುವುದು ತಪ್ಪು. ಹೀಗಾಗಿ ನಿರಂಜನ್‌ಕುಮಾರ್‌ ಅವರ ಹೆಸರನ್ನು ಡಾ.ರಾಜ್‌ಕುಮಾರ್‌ ರಸ್ತೆಯ​ಲ್ಲಿನ ನೂತನ ಅಂಡರ್‌ಪಾಸ್‌ಗೆ ಇಡಲು ಬರುವ ಕೌನ್ಸಿಲ್‌ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಜತೆಗೆ ಕೆಂಪಾಪುರ ಎಸ್ಟೀಮ್‌ ಮಾಲ್‌ ಸ್ಕೈವಾಕ್‌ಗೂ ಅವರ ಹೆಸರನ್ನೇ ಇಡಲಾಗುವುದು. ಇದರ ಜತೆಗೆ ನಗ್ರೋಟಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಗಿರೀಶ್‌ ಅಕ್ಷಯ್‌ ಕುಮಾರ್‌ ಅವರ ಹೆಸರನ್ನು ಹೌಸಿಂ ಗ್‌ಬೋರ್ಡ್‌ ಬಳಿ ನೂತನವಾಗಿ ನಿರ್ಮಿಸುತ್ತಿರುವ ಕೆಳಸೇತುವೆಗೆ ಇಡಲಾಗುವುದು. ಹೀಗಾಗಿ ವಿನಾಕಾರಣ ಈ ವಿಷಯದಲ್ಲಿ ವಿವಾದ ಸೃಷ್ಟಿಸದಂತೆ ಮೇಯರ್‌ ಜಿ. ಪದ್ಮಾವತಿ ಮನವಿ ಮಾಡಿದ್ದಾರೆ.

click me!