
ಬೆಂಗಳೂರು(ಜೂನ್ 05): ರೆಸಿಡೆನ್ಸಿಯಲ್ ಏರಿಯಾದಲ್ಲಿ ವಾಣಿಜ್ಯ ಚಟುವಟಿಕೆ ನಿಲ್ಲಿಸುವಂತೆ ನೋಟಿಸ್ ನೀಡುತ್ತಿರುವ ಬಿಬಿಎಂಪಿ ವಿಶೇಷ ಆಯುಕ್ತ ಸರ್ಫರಾಜ್ ಖಾನ್ ಅವರಿಗೆ ಹಲಸೂರು ಬಿಜೆಪಿ ಘಟಕದ ಹೆಸರಿನಲ್ಲಿ ಬೆದರಿಕೆ ಪತ್ರವೊಂದು ಬಂದಿದೆ. ಸರ್ಫರಾಜ್ ಖಾನ್ ಹೆಸರಿಗೆ ಅಂಚೆ ಮೂಲಕ ಈ ಪತ್ರ ಬಂದಿದೆ. ವಾಸಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಿಲ್ಲಿಸುವಂತೆ ಹೇಳಿ ನೋಟಿಸ್ ನೀಡುವ ಕೆಲಸವನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ಕೊಲೆ ಮಾಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಲಾಗಿದೆ. ಜೊತೆಗೆ ಪಾಕಿಸ್ತಾನಕ್ಕೆ ಕಳುಹಿಸುವ ಬೆದರಿಕೆಯನ್ನೂ ಒಡ್ಡಿದ್ದಾರೆ.
ರೆಸಿಡೆನ್ಸಿಯಲ್ ಏರಿಯಾದಲ್ಲಿ ವಾಣಿಜ್ಯ ಚಟುವಟಿಕೆ ನಿಲ್ಲಿಸುವಂತೆ ಬಿಬಿಎಂಪಿಯಿಂದ ನೋಟಿಸ್ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಪಾಲಿಕೆಯಿಂದ ನೋಟೀಸ್ ನೀಡುವ ಹೊಣೆಯನ್ನು ಸರ್ಫರಾಜ್ ಖಾನ್ ಹೊತ್ತಿದ್ದಾರೆ. ವಾಸಪ್ರದೇಶಗಳಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಹೋಟೆಲ್'ಗಳನ್ನು ಮುಚ್ಚಿಸುವುದು; ಪ್ಲಾಸ್ಟಿಕ್ ನಿಷೇಧ ಮೊದಲಾದ ಕ್ರಮಗಳನ್ನು ಆಯುಕ್ತರು ಜಾರಿಗೊಳಿಸುತ್ತಿದ್ದಾರೆ.
ಸರ್ಫರಾಜ್ ಖಾನ್ ಅವರಿಗೆ ಕೆಲ ದಿನಗಳ ಹಿಂದೆ ಈ ಪತ್ರ ಬಂದಿದೆ. ಬಿಬಿಎಂಪಿ ಅಧಿಕಾರಿಯು ಈ ವಿಚಾರವನ್ನು ಜೂನ್ 2ರಂದು ತಮ್ಮ ಫೇಸ್ಬುಕ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿಸುವ ಸಲುವಾಗಿ ದುಷ್ಕರ್ಮಿಗಳು ರಾಜಕೀಯ ಪಕ್ಷವೊಂದರ ಹೆಸರನ್ನು ದುರುಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿರುವ ಸರ್ಫರಾಜ್ ಖಾನ್, ತಾನು ಸರಕಾರದ ಆದೇಶವನ್ನ ಪಾಲಸದೇ ಇರುವುದಿಲ್ಲ ಎಂದು ಪಣತೊಟ್ಟಿದ್ದಾರೆ.
ಬೆದರಿಕೆ ಪತ್ರದಲ್ಲೇನಿದೆ?
"ಆಗಾ ಅಬ್ಬಾಸ್ ಅಲಿ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಎಲ್ಲಾ ವಾಣಿಜ್ಯ ಕಚೇರಿಗಳಿಗೆ ನೀವು ನೋಟೀಸ್ ಕೊಟ್ಟಿದ್ದೀರಿ. ಇವರನ್ನು ಇವರ ಪಾಡಿಗೆ ಇರಲು ಬಿಡದೇ ಸುಮ್ಮನೆ ಕಿರುಕುಳ ನೀಡಬೇಡಿ, ಶಕ್ತಿಪ್ರದರ್ಶನ ತೋರಬೇಡಿ. ಇಲ್ಲದಿದ್ದರೆ ನಿಮ್ಮ ಕಥೆ ಮುಗಿದಂತೆ(ಸಾವು). ಸಾರ್ವಜನಿಕರಿಂದ ನಮಗೆ ದೂರುಗಳು ಬರುತ್ತಿವೆ. ನಿಮಗೆ ಸುಮ್ಮನಿರಲು ಆಗದಿದ್ರೆ ಪಾಕಿಸ್ತಾನಕ್ಕೆ ಹೋಗಿ" ಎಂದು ಇಂಗ್ಲೀಷ್'ನಲ್ಲಿ ಪತ್ರ ಬರೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.