ಹಾಂಕಾಂಗ್‌ಗೆ ಸರ್ಕಾರ ಬೀಳಿಸುವ ’ಕಿಂಗ್‌ಪಿನ್’ !

By Web DeskFirst Published Oct 2, 2018, 7:36 AM IST
Highlights

ಸರ್ಕಾರ ಬೀಳಿಸಲು ‘ಸುಪಾರಿ’ ಪಡೆದಿದ್ದ ಉದಯ್‌ ಲಂಕೆಯಿಂದ ಪಲಾಯನ | ಲುಕೌಟ್‌ ನೋಟಿಸ್‌ ನೀಡಿದ್ದೇವೆ, ಶೀಘ್ರದಲ್ಲೇ ಬಂಧನ: ಪೊಲೀಸ್‌ ಇಲಾಖೆ

ಬೆಂಗಳೂರು (ಅ. 02): ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ‘ಆಪರೇಷನ್‌ ಕಮಲ’ಕ್ಕೆ ಮುಂದಾಗಿದ್ದರು ಎಂಬ ಆರೋಪ ಎದುರಿಸುತ್ತಿರುವ ಕಿಂಗ್‌ಪಿನ್‌ ಎನ್ನಲಾದ ಬಿಬಿಎಂಪಿ ಗುತ್ತಿಗೆದಾರ ಉದಯ್‌ಗೌಡ ಶ್ರೀಲಂಕಾದಿಂದ ಹಾಂಕಾಂಗ್‌ಗೆ ತನ್ನ ನೆಲೆ ಬದಲಿಸಿದ್ದಾನೆ.

ಆತ ಹಾಂಕಾಂಗ್‌ಗೆ ಸ್ಥಳ ಬದಲಾವಣೆ ಮಾಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಈಗಾಗಲೇ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಲಾಗಿದೆ. ಉದಯ್‌ನ ವೀಸಾ ಹಾಗೂ ಪಾಸ್‌ಪೋರ್ಟ್‌ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು, ಎಲ್ಲಾ ವಿಮಾನ ನಿಲ್ದಾಣಗಳಿಗೂ ಮಾಹಿತಿ ತಲುಪಿದೆ. ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಪ್ರಕರಣ ಕೆದಕಿದ್ದ ಕೇಂದ್ರ ವಿಭಾಗದ ಕಬ್ಬನ್‌ಪಾರ್ಕ್ ಪೊಲೀಸರು ಸೆ.18ರಂದು ಮಲ್ಲೇಶ್ವರದಲ್ಲಿರುವ ಆರೋಪಿ ಉದಯ್‌ಗೌಡ ಹಾಗೂ ಆತನ ಸ್ನೇಹಿತನ ಡಾಲ​ರ್‍ಸ್ ಕಾಲೋನಿಯಲ್ಲಿರುವ ನಾಯ್ಡು ಮನೆ ಮೇಲೆ ದಾಳಿ ನಡೆಸಿದ್ದರು.

ತನ್ನ ಮನೆ ಮೇಲೆ ದಾಳಿ ನಡೆಯುತ್ತಿದ್ದಂತೆ ಉದಯ್‌ ರಾತ್ರೋರಾತ್ರಿ ಶ್ರೀಲಂಕಾಗೆ ತೆರಳಿ ತಲೆಮರೆಸಿಕೊಂಡಿದ್ದ. ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಹೆದರಿರುವ ಆರೋಪಿ ಶ್ರೀಲಂಕಾದಿಂದ ಹಾಂಕಾಂಗ್‌ಗೆ ತನ್ನ ನೆಲೆ ಬದಲಾವಣೆ ಮಾಡಿದ್ದಾನೆ.

ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲ ಕಿಂಗ್‌ಪಿನ್‌ಗಳು ಬಿಜೆಪಿ ಪರ ಹಣ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ. 2009-10ರ ಅವಧಿಯಲ್ಲಿ ಬಿಬಿಎಂಪಿ ಕಡತ ಕಚೇರಿಗೆ ಬೆಂಕಿ ಇಟ್ಟಕಿಂಗ್‌ಪಿನ್‌, ಇಸ್ಪೀಟ್‌ ಅಕ್ರಮ ದಂಧೆಯಲ್ಲಿ ಕೋಟ್ಯಂತರ ರು ಸಂಗ್ರಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉದಯ್‌ಗೌಡ ಹೆಸರು ಹೇಳದೆ ಆರೋಪ ಮಾಡಿದ್ದರು.

ಪ್ರಕರಣದಲ್ಲಿ ಕಿಂಗ್‌ಪಿನ್‌ಗಳು ಎನ್ನಲಾದ ಬಿಜೆಪಿ ಮುಖಂಡ ನಾರ್ವೆ ಸೋಮ ಅಲಿಯಾಸ್‌ ಸೋಮಶೇಖರ್‌, ಚಲನಚಿತ್ರ ನಿರ್ಮಾಪಕ ಕಮ್‌ ಗುತ್ತಿಗೆದಾರ ವಿಜಯ್‌ ಕಿರಂಗದೂರು ಹಾಗೂ ಮಲ್ಲಿಕಾರ್ಜುನ ಅಲಿಯಾಸ್‌ ಫೈಟರ್‌ ರವಿ ಹೆಸರು ಕೇಳಿಬಂದಿತ್ತು.

ಏನಿದು ಪ್ರಕರಣ?

ನೀಲಗಿರೀಸ್‌ ಪ್ರಾಪರ್ಟೀಸ್‌ಗೆ ಉದಯ್‌ಗೌಡ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರುಪಾಯಿ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ಹೇಗಸ್‌ ಎಂಬುವರು ಕಳೆದ 2017ರಲ್ಲಿ ಕಬ್ಬನ್‌ಪಾರ್ಕ್ ಠಾಣೆಗೆ ದೂರು ನೀಡಿದ್ದರು. ಕಬ್ಬನ್‌ಪಾರ್ಕ್ ಪೊಲೀಸರು ನ್ಯಾಯಾಲಯದಿಂದ ಶೋಧನಾ ವಾರೆಂಟ್‌ ಪಡೆದು ಕೇಂದ್ರ ವಿಭಾಗದ ಪೊಲೀಸರು ಉದಯ್‌ಗೌಡ ಮನೆ ದಾಳಿ ನಡೆಸಿದ್ದರು. ಈ ವೇಳೆ ಆರೋಪಿ ದೇಶಬಿಟ್ಟು ತಲೆಮರೆಸಿಕೊಂಡಿದ್ದ. ಆಪರೇಷನ್‌ ಕಮಲಕ್ಕೆ ಉದಯ್‌ ಕೂಡ ಯತ್ನಿಸಿದ್ದಾನೆ ಎಂದು ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಈ ದಾಳಿ ನಡೆದಿತ್ತು.

click me!