ಪಿಒಪಿ ಗಣೇಶನನ್ನು ತಡೆಯಲು ಬಿಬಿಎಂಪಿ ಸಜ್ಜು!

By Web DeskFirst Published Jun 17, 2019, 9:13 AM IST
Highlights

ಗಣೇಶ ಚತುರ್ಥಿ ಹತ್ತಿರವಾದಾಗ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶಗಳ ನಿಯಂತ್ರಣಕ್ಕೆ ಮುಂದಾಗಿ ವಿಫಲವಾಗಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಈ ಬಾರಿ ಹಬ್ಬ ಇನ್ನೂ ಎರಡೂವರೆ ತಿಂಗಳು ಇರುವಾಗಲೇ ಎಚ್ಚೆತ್ತುಕೊಂಡಿದೆ.

ಬೆಂಗಳೂರು [ಜೂ.17] :  ಕಳೆದ ವರ್ಷ ಗಣೇಶ ಚತುರ್ಥಿ ಹತ್ತಿರವಾದಾಗ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶಗಳ ನಿಯಂತ್ರಣಕ್ಕೆ ಮುಂದಾಗಿ ವಿಫಲವಾಗಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಈ ಬಾರಿ ಹಬ್ಬ ಇನ್ನೂ ಎರಡೂವರೆ ತಿಂಗಳು ಇರುವಾಗಲೇ ಎಚ್ಚೆತ್ತುಕೊಂಡು ಪರಿಸರ ಮಾರಕವಾದ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ಶತಾಯಗತಾಯ ಶೂನ್ಯಕ್ಕಿಳಿಸಲು ಮುಂದಾಗಿದೆ.

ಕಳೆದ ಬಾರಿ ಬಿಬಿಎಂಪಿ ಎಷ್ಟೇ ಪ್ರಯತ್ನ ಪಟ್ಟರೂ ವಿಸರ್ಜನೆಯಾಗಿದ್ದ 3.5 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಪೈಕಿ ಸುಮಾರು 20 ಸಾವಿರಕ್ಕೂ ಹೆಚ್ಚು ಪಿಒಪಿ ಗಣೇಶಗಳೂ ಇದ್ದವು. ಹಾಗಾಗಿ ಈ ಬಾರಿ ಅವುಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸಲು, ನಗರದಲ್ಲಿ ಪಿಒಪಿ ಗಣೇಶಗಳನ್ನು ತಯಾರಿಸುವುದಾಗಲಿ, ಬೇರೆ ಕಡೆಯಿಂದ ತಂದು ಮಾರಾಟ ಮಾಡುವುದನ್ನು ಸಂಪೂರ್ಣ ನಿಯಂತ್ರಿಸಲು ಈಗಲೇ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ರಾಜ್ಯದಲ್ಲಿ ಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ ರಾಜ್ಯಾದ್ಯಂತ ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ಸರ್ಕಾರ ನಿಷೇಧ ಮಾಡಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಪಿಒಪಿ ಗಣೇಶಗಳನ್ನು ಯಾವುದೇ ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಆದೇಶ ಮತ್ತು ಕೆಎಸ್‌ಪಿಸಿಬಿಯ ಅಧಿಸೂಚನೆ ಜಾರಿಗಾಗಿ ಈಗಾಗಲೇ ವರ್ಷಗಳೇ ಕಳೆದರೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಒಪಿ ಮೂರ್ತಿಗಳ ತಯಾರಿ ಮತ್ತು ಮಾರಾಟ ಸಂಪೂರ್ಣ ನಿಂತಿಲ್ಲ. ಈ ಬಾರಿಯಾದರೂ ಇದರ ಸಂಪೂರ್ಣ ಅನುಷ್ಠಾನವಾಗಬೇಕು. ಪಿಒಪಿ ಗಣೇಶಗಳ ತಯಾರಿ, ಮಾರಾಟವನ್ನು ಶೂನ್ಯಕ್ಕೆ ಇಳಿಸಬೇಕು. ಹಾಗಾಗಿ ಹಬ್ಬ ಹತ್ತಿರವಾಗುವವರೆಗೆ ಕಾಯುವ ಬದಲು ಈಗಲೇ ನಗರದ ಯಾವುದೇ ಭಾಗದಲ್ಲಿ ಪಿಒಪಿ ಗಣೇಶಗಳ ತಯಾರಿಯಾಗುವುದು ಅಥವಾ ಹೊರಗಡೆಯಿಂದ ನಗರಕ್ಕೆ ಪರಿಸರ ಮಾರಕ ಮೂರ್ತಿಗಳನ್ನು ತರುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮೇಯರ್‌ ಗಂಗಾಂಬಿಕೆ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಸಂಬಂಧ ಇತ್ತೀಚೆಗೆ ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ವಿಶೇಷ ಆಯುಕ್ತರು ಮತ್ತು ಎಲ್ಲಾ ವಲಯ ಜಂಟಿ ಆಯುಕ್ತರ ಸಭೆ ನಡೆಸಿರುವ ಮೇಯರ್‌, ಗಣೇಶ ಹಬ್ಬ ಹತ್ತಿರ ಬಂದ ನಂತರ ಪಿಒಪಿ ಗಣೇಶಗಳ ನಿಯಂತ್ರಿಸಲು ಎಚ್ಚೆತ್ತುಕೊಳ್ಳುವುದಲ್ಲ, ಈಗಲೇ ನಗರದ ಎಲ್ಲಾ ಗಣೇಶ ಮೂರ್ತಿ ತಯಾರಿಕಾ ಮತ್ತು ಮಾರಾಟಗಾರರೊಂದಿಗೆ ಚರ್ಚೆ ನಡೆಸಿ ಯಾವುದೇ ಕಾರಣಕ್ಕೂ ನಗರದಲ್ಲಿ ಪಿಒಪಿ ಗಣೇಶಗಳ ತಯಾರಿಸುವುದಾಗಲಿ, ಹೊರಗಡೆಯಿಂದ ಪಿಒಪಿ ಗಣೇಶ ಮೂರ್ತಿಗಳನ್ನು ತಂದು ನಗರದಲ್ಲಿ ಮಾರುವುದಾಗಲಿ ಮಾಡಕೂಡದು. ಇದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇದನ್ನು ಮೀರಿ ಈ ಬಾರಿಯೂ ಪಿಒಪಿ ಗಣೇಶಗಳ ತಯಾರಿಸಲು ಅಥವಾ ಬೇರೆ ಕಡೆಯಿಂತ ತಂದು ಮಾರಾಟ ಮಾಡುವುದು ಕಂಡುಬಂದರೆ ಮುಲಾಜಿಲ್ಲದೆ ಅಂತಹ ಪಿಒಪಿ ಗಣೇಶಗಳನ್ನು ವಶಪಡಿಸಿಕೊಂಡು, ಮಾರಾಟ ಮಳಿಗೆಗಳಿಗೆ ಬೀಗ ಜಡಿದು ದಂಡ ವಿಧಿಸಲಾಗುವುದು. ಜೊತೆಗೆ ಮಾರಾಟಗಾರರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡುವಂತೆ ಸೂಚಿಸಿದ್ದಾರೆ.

ಕಳೆದ ಬಾರಿ ಉಲ್ಟಾಹೊಡೆದಿದ್ದ ಬಿಬಿಎಂಪಿ

ಕಳೆದ ವರ್ಷ ನಗರದಲ್ಲಿ ಪಿಒಪಿ ಗಣೇಶಗಳಿಗೆ ಸಂಪೂರ್ಣ ನಿಷೇಧ ಹೇರುವ ಸಲುವಾಗಿ ಪಿಒಪಿ ಗಣೇಶಗಳನ್ನು ಕೂರಿಸಲು ಅನುಮತಿಯನ್ನೇ ನೀಡದಿರಲು ಆಲೋಚಿಸಿದ್ದ ಬಿಬಿಎಂಪಿ ನಂತರ ಹಿಂದೆ ಸರಿದಿತ್ತು. ಧರ್ಮ, ದೇವರ ವಿಚಾರಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಯಾವ ಮೂರ್ತಿ ಪ್ರತಿಷ್ಠಾಪಿಸಬೇಕೆಂಬುದು ಜನರಿಗೆ ಬಿಟ್ಟವಿಚಾರ. ಜಾಗೃತಿ ಮೂಡಿಸುವುದಷ್ಟೇ ನಮ್ಮ ಕೆಲಸ ಎಂದು ಹೇಳಿತ್ತು. ಆದರೆ, ಈ ಬಾರಿ ಪಿಒಪಿ ಗಣೇಶ ತಯಾರಕರು ಮತ್ತು ಮಾರಾಟಗಾರರ ವಿರುದ್ಧವೇ ಸಮರ ಸಾರಿ ಪಿಒಪಿ ಗಣೇಶ ಶೂನ್ಯಕ್ಕಿಳಿಸಲು ಮುಂದಾಗಿದೆ.

ಪಿಒಪಿ ತಯಾರಿಸಿ ದಮ್ಮಯ್ಯ ಅನ್ನೋದ್ಯಾಕೆ?

ಪಿಒಪಿ ಗಣೇಶಗಳನ್ನು ತಯಾರಿಸಿ ಆ ಮೇಲೆ ಅವುಗಳನ್ನು ಮಾರಾಟ ಮಾಡಲು ಅಧಿಕಾರಿಗಳ ಕಾಲಿಗೆ ಬೀಳಬೇಕು. ದಮ್ಮಯ್ಯ ಎನ್ನಬೇಕು. ಅದರ ಸಹವಾಸವೇ ಬೇಡ ಎಂದು ಈ ಬಾರಿ ಪಿಒಪಿ ಗಣೇಶಗಳ ತಯಾರಿಕೆಯನ್ನೇ ಸಂಪೂರ್ಣ ಕೈಬಿಟ್ಟಿದ್ದೇವೆ ಎನ್ನುತ್ತಾರೆ ಆರ್‌.ವಿ.ರಸ್ತೆಯ ವಿನಾಯಕ ಎಂಟರ್‌ಪ್ರೈಸಸ್‌ನ ಮಾಲೀಕ ಎಂ. ತೀರ್ಥಗಿರಿ.

ನಗರದ ಸಾಕಷ್ಟುಗಣೇಶ ತಯಾರಿಕರು, ಮಾರಾಟಗಾರರು ಈ ಬಾರಿ ಕೇವಲ ಮಣ್ಣಿನ ಗಣಪತಿಗಳನ್ನು ತಯಾರಿಸುತ್ತಿದ್ದಾರೆ. ಯಾವ ಕೆರೆಯಲ್ಲೂ ಮಣ್ಣು ಸಿಗುವುದಿಲ್ಲ. ದುಬಾರಿ ಆದರೂ ಪರಿಸರ ಮೂರ್ತಿಗಳನ್ನೇ ತಯಾರಿಸುತ್ತಿದ್ದೇವೆ. ಕಳೆದ ಬಾರಿ ತಯಾರಿಸಿರುವ ಇನ್ನೂ ನೂರಾರು ಪಿಒಪಿ ಗಣೇಶಗಳು ನಮ್ಮ ಮಳಿಗೆಯಲ್ಲಿವೆ. ಅವುಗಳನ್ನೂ ಮಾರಾಟ ಮಾಡಲು ಹೋಗುವುದಿಲ್ಲ. ಹೊರಗೆ ಎಲ್ಲಿಗಾದರೂ ಕಳಿಸಿಬಿಡುತ್ತೇವೆ. ಅವುಗಳನ್ನು ಮಾರಿ ದಂಡ ಕಟ್ಟೋದು ಬೇಡ, ಅಂಗಡಿಗೆ ಬೀಗ ಹಾಸಿಕೊಂಡು ದಮ್ಮಯ್ಯ ಅನ್ನೋದೂ ಬೇಡ ಎಂದು ಅವರು ಹೇಳುತ್ತಾರೆ.

ಪಿಒಪಿ ವಿಷಕಾರಿ

ಪಿಒಪಿಯಲ್ಲಿ ಅಪಾಯಕಾರಿ ಕ್ಯಾಲ್ಸಿಯಂ ಸಲ್ಫೇಟ್‌, ಪಾದರಸ, ಕ್ರೋಮಿಯಂ, ಸೀಸ, ಮೆಗ್ನೀಷಿಯಂನಂತಹ ಭಾರಲೋಹದ ಅಂಶಗಳಿರುತ್ತವೆ. ಪಿಒಪಿ ಮೂರ್ತಿಗಳು ನೀರಿನಲ್ಲಿ ಬೇಗ ಕರಗುವುದಿಲ್ಲ. ನಿಧಾನವಾಗಿ ಕರಗಿ ನೀರಿನ ತಳ ಸೇರಿ ತಿಂಗಳುಗಟ್ಟಲೆ ಹಾಗೇ ಉಳಿಯುತ್ತವೆ. ನಂತರ ನಿಧಾನವಾಗಿ ನೀರಿನಲ್ಲಿ ಕರಗಿ ವಿಷಕಾರಿಯಾಗಿ ಜಲಚರಗಳಿಗೆ ಸಮಸ್ಯೆಯಾಗುತ್ತದೆ. ನೀರಿನಲ್ಲಿ ಕಬ್ಬಿಣದ ಅಂಶ 10 ಪಟ್ಟು ಹಾಗೂ ತಾಮ್ರದ ಅಂಶ 200 ಪಟ್ಟು ಹೆಚ್ಚಾಗುತ್ತದೆ. ಈ ನೀರಿನಲ್ಲಿ ಮೀನು, ಬೆಳೆದ ಹಣ್ಣು, ತರಕಾರಿ ಮತ್ತಿತರ ಆಹಾರ ಪದಾರ್ಥಗಳನ್ನು ಸೇವನೆಯಿಂದ ಪರೋಕ್ಷವಾಗಿ ಭಾರಲೋಹಗಳು ಮನುಷ್ಯನ ದೇಹ ಸೇರಿದರೂ ಅಪಾಯ ಎದುರಾಗುತ್ತದೆ. ಸೀಸವು ನರವ್ಯೂಹಕ್ಕೆ ಹಾನಿ ಉಂಟುಮಾಡಬಲ್ಲದು. ಕ್ರೋಮಿಯಂ ಪಿತ್ತಕೋಶ, ಮೂತ್ರಪಿಂಡಗಳ ಸಮಸ್ಯೆ ತಂದೊಡ್ಡುತ್ತದೆ. ಮೆಗ್ನೀಷಿಯಂ ದೇಹದ ಸಂವೇದನಾ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಬಲ್ಲದು. ನಿಕ್ಕಲ್‌ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.

ನಗರದ ಗಣೇಶ ಮೂರ್ತಿ ತಯಾರಕರು, ಮಾರಾಟಗಾರರು ಪಿಒಪಿ ಗಣೇಶಗಳನ್ನು ತಯಾರಿಸಿದ ಮೇಲೆ ಅಥವಾ ಹೊರಗಿನಿಂದ ನಗರಕ್ಕೆ ತಂದ ಮೇಲೆ ಅವುಗಳ ನಿಷೇಧಕ್ಕೆ ಕ್ರಮ ಕೈಗೊಳ್ಳುವ ಬದಲು, ಈಗಲೇ ಕಾರ್ಯಪ್ರವೃತ್ತರಾಗಿ ಪಿಒಪಿ ಗಣೇಶಗಳನ್ನು ತಯಾರಿಸದಂತೆ, ಹೊರಗಿನಿಂದಲೂ ತರದಂತೆ ಅಧಿಕಾರಿಗಳಿಗೆ ಸಂಬಂಧಿಸಿದ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇದನ್ನು ಮೀರಿ ನಡೆಯುವವರ ಅಂಗಡಿಗಳಿಗೆ ಬೀಗ ಹಾಕಿ, ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

-ಗಂಗಾಂಬಿಕೆ ಮಲ್ಲಿಕಾರ್ಜುನ್‌, ಬಿಬಿಎಂಪಿ ಮೇಯರ್‌.

ವರದಿ :  ಲಿಂಗರಾಜು ಕೋರಾ

click me!