
ಶ್ರೀ ಡಿ.ಎಚ್.ಶಂಕರಮೂರ್ತಿಯವರು
ಮಾನ್ಯ ಸಭಾಪತಿಗಳು, ವಿಧಾನಪರಿಷತ್
ಶ್ರೀ ಕೆ.ಬಿ.ಕೋಳಿವಾಡರವರು
ಮಾನ್ಯ ಸ್ಪೀಕರ್, ವಿಧಾನಸಭೆ
ಮಾನ್ಯರೆ,
ವಿಧಾನಸೌಧ ಕಟ್ಟಡ ನಿರ್ಮಾಣದ ವಜ್ರಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಉದ್ದೇಶದಿಂದ ವಿಧಾನಸಭೆಯ ಸಭಾಧ್ಯಕ್ಷರು ಮತ್ತು ವಿಧಾನಪರಿಷತ್ತಿನ ಸಭಾಪತಿಗಳಾದ ತಾವು ಆಚರಣೆಗಾಗಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಮನೆಗೆ ಹೋಗಿ ಅವರ ಮುಂದೆ ಸಾಮಾನ್ಯರಂತೆ ಕುಳಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ರೀತಿಯಲ್ಲಿ ಚಿತ್ರಗಳು ಪತ್ರಿಕೆಗಳಲ್ಲಿ ಬಂದದ್ದನ್ನು ನೋಡಿ ನನ್ನ ಮನಸ್ಸಿಗೆ ತುಂಬಾ ನೋವಾಗಿದೆಯೆಂದು ಹೇಳಲು ಮುಜಗರವಾಗುತ್ತದೆ.
ಸಂವಿಧಾನದಿಂದ ರಚಿತವಾದ ಪೀಠಾಧ್ಯಕ್ಷರುಗಳಾದ ತಾವು ಮುಖ್ಯಮಂತ್ರಿಗಳನ್ನು ಅವರ ಕಚೇರಿಯಲ್ಲಿ ಭೇಟಿಯಾಗುವುದರ ಮೂಲಕ ಸಂವಿಧಾನಾತ್ಮಕ ಹುದ್ದೆಗಳ ಘನತೆ, ಗೌರವಗಳಿಗೆ ಚ್ಯುತಿ ಬಂದಂತಾಗಿದೆ ಎಂಬುದನ್ನು ಅತ್ಯಂತ ನೋವಿನಿಂದ ತಮ್ಮ ಗಮನಕ್ಕೆ ತರಬಯಸುವೆ.
26 ಕೋಟಿ ರುಪಾಯಿ ಹಣಕ್ಕಿಂತ ತಾವು ಕುಳಿತ ಪೀಠಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಸಾವಿರ ಕೋಟಿ ರುಪಾಯಿ ಇದ್ದರೂ ಅದು ಇದಕ್ಕೆ ಸಮಾನವಾದುದಲ್ಲ. ನೀವಿಬ್ಬರೂ ಸಾಂವಿಧಾನಿಕ ಹುದ್ದೆಯಲ್ಲಿ ಇರುವಿರೆಂಬುದನ್ನು ಮರೆತು ಈ ರೀತಿ ವರ್ತಿಸಬಾರದಾಗಿತ್ತು. ನಿಮ್ಮ ಅಧೀನ ಸಿಬ್ಬಂದಿಗಳು ನಿಮಗೆ ಸರಿಯಾಗಿ ಮಾಹಿತಿ ಯಾಕೆ ಕೊಡಲಿಲ್ಲ ಅಥವಾ ನಿಮಗೆ ಅದರ ಬಗ್ಗೆ ಕಲ್ಪನೆ ಯಾಕೆ ಬರಲಿಲ್ಲ ಅನ್ನುವುದು ನನ್ನ ನೋವು. ನಮ್ಮ ಸಂವಿಧಾನದ ಪ್ರಕಾರ ರಾಜ್ಯಪಾಲರು, ಸಭಾಪತಿಗಳು, ವಿಧಾನಸಭೆ ಸಭಾಧ್ಯಕ್ಷರು, ತದನಂತರ ಮುಖ್ಯಮಂತ್ರಿಗಳು, ನಂತರ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಅನ್ನುವುದು ತಮಗೆ ತಿಳಿದ ವಿಷಯ.
ಸದನದಲ್ಲಿ ತಾವು ಬಂದಾಗ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸುವದು ತಮಗೆ ಗೊತ್ತು. ಹಾಗಿದ್ದಾಗ ತಾವು ಮುಖ್ಯಮಂತ್ರಿಗಳ ಹತ್ತಿರ ಯಾಕಾದರೂ ಹೋಗಿದ್ದಿರಿ ಅನ್ನುವುದು ನನಗೆ ಇನ್ನೂ ಅರ್ಥವಾಗಲೊಲ್ಲದು. ತಮಗೆ ಮುಖ್ಯಮಂತ್ರಿಗಳನ್ನು ಕರೆಸಿಕೊಳ್ಳುವ ಎಲ್ಲ ಅಧಿಕಾರವು ಇರುವುದು ಸಂವಿಧಾನದಲ್ಲಿಯೇ ಇದೆ. ಒಂದು ವೇಳೆ ಮುಖ್ಯಮಂತ್ರಿಗಳು ತಮ್ಮ ಮಾತಿಗೆ ಮನ್ನಣೆ ಕೊಡದಿದ್ದರೆ, ಅವರ ಮೇಲೆ ಹಕ್ಕುಚ್ಯುತಿ ಮಂಡನೆ ಮಾಡುವ ಅಧಿಕಾರವೂ ತಮ್ಮಲ್ಲಿಯೇ ಇದೆ. ಮಾಧ್ಯಮಗಳಲ್ಲಿ, ಸಾರ್ವಜನಿಕರಲ್ಲಿ ನಗೆಪಾಟಲಿಗೆ ಕಾರಣವಾದ ಈ ಕೆಲಸ ನಿಜವಾಗಿಯೂ ಬಹಳ ವಿಷಾದದ ಸಂಗತಿ.
ಮುಖ್ಯಮಂತ್ರಿಗಳ ಮನೆಗೆ ಹೋಗುವುದು, ಏನಾದರೂ ನಿಮ್ಮ ಮನೆಗಳ ಸಮಾರಂಭಕ್ಕೆ, ಮಕ್ಕಳ ಮದುವೆಗೆ, ಪೂಜೆ ಪುನಸ್ಕಾರಕ್ಕೆ ಆಮಂತ್ರಣ ಕೊಡಲು ಹೋಗಬಹುದು. ಆದರೆ ಸರಕಾರಿ ಕೆಲಸಕ್ಕೆ ಹೋಗುವದು ಖಂಡಿತ ಸರಿ ಅಲ್ಲ ಎನ್ನುವದು ನನ್ನ ಸ್ಪಷ್ಟ ಅಭಿಪ್ರಾಯ. ಈ ವಿಷಯವನ್ನು ನಾಡಿನ ಜನತೆಗೆ ಯಾವ ರೀತಿಯಿಂದ ಮನವರಿಕೆ ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ.
ಎರಡನೆಯದಾಗಿ ನೀವು ಮಾಧ್ಯಮದವರಿಗೆ ಹೇಳಿದ್ದಿರೋ, ಬಿಟ್ಟಿದ್ದಿರೋ ಗೊತ್ತಿಲ್ಲ. ಆದರೆ ಶಾಸಕರಿಗೆ ಬಂಗಾರದ ನಾಣ್ಯ, ಅಧಿಕಾರಿಗಳಿಗೆ ಬೆಳ್ಳಿಯ ತಟ್ಟೆ ಹಾಗೂ ಊಟೋಪಚಾರಕ್ಕೂ ಇಷ್ಟು ಕೋಟಿ, ಇದಕ್ಕೆ ಇಷ್ಟು ಕೋಟಿ ಎಂಬುದು ಮಾಧ್ಯಮಗಳಲ್ಲಿ ಹೇಗೆ ಬರುತ್ತದೆ? ವಿಧಾನಮಂಡಲದ ಅಧಿಕಾರಿಗಳಿಗೆ ಈ ರೀತಿ ಲೆಕ್ಕ ಹಾಕಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಿರುವದು ಈ ಎಲ್ಲ ಆವಾಂತರಕ್ಕೆ ಕಾರಣವಾಗಿದೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ತಾವು ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಬಹುದಿತ್ತು.
ಅದನ್ನು ಬಿಟ್ಟು ಹಿಂದಿನ ಸರ್ಕಾರದಲ್ಲಿ ಕಂಪ್ಯೂಟರ್ ಕೊಟ್ಟಿಲ್ಲವೆ ಎಂದು ತಾವು ಮಾಡಲು ಉದ್ದೇಶಿಸಿದ್ದ ದುಂದು ವೆಚ್ಚವನ್ನು ಸಮರ್ಥಿಸಿಕೊಂಡಿದ್ದೀರಿ. ದಿನಾಂಕ: 30-11-2011 ರಲ್ಲಿ ಅಲೈಯನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಶಿಕ್ಷಣ ಶಿಬಿರ ಏರ್ಪಡಿಸಿದಾಗ 45,493 ರು. ಮೊತ್ತದ ಐಪ್ಯಾಡ್ ಗಳನ್ನು ಕೊಡಲಾಗಿತ್ತು. ಅಂದು ಕಂಪ್ಯೂಟರ್ ಯುಗ ಪ್ರಾರಂಭವಾಗಿತ್ತು, ಎಲ್ಲ ಶಾಸಕರು ಕಡ್ಡಾಯವಾಗಿ ಕಂಪ್ಯೂಟರ್ ಕಲಿಯಬೇಕೆಂದು ಮತ್ತು ಆ ಕಂಪ್ಯೂಟರ್ ಉಪಯೋಗಿಸುವುದಕ್ಕೆ ಲ್ಯಾಪ್‌ಟಾಪ್ ಕೊಟ್ಟಿದ್ದರ ಹಿಂದಿನ ಉದ್ದೇಶ ಏನು ಅನ್ನುವುದನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಲ್ಯಾಪ್‌ಟಾಪ್‌ಗಳನ್ನು ಶಾಸಕರೆಲ್ಲರೂ ಉಪಯೋಗಿಸುತ್ತಿದ್ದಾರೆ. ಇನ್ನೂ ಮುಂದೆ ಹೋಗಿ ಕಾಗದ ರಹಿತ ಆಡಳಿತವನ್ನು ತರಲು ತಾವು ಹಾಗೂ ಸರ್ಕಾರ ಯೋಚನೆ ಮಾಡುತ್ತಿದ್ದು, ಅದಕ್ಕೂ ಇದಕ್ಕೂ ಹೋಲಿಕೆ ಮಾಡುವುದು ಸರಿಯಾದುದಲ್ಲ. ಎಲ್ಲ ಶಾಸಕರೂ ಈಗ ಕಂಪ್ಯೂಟರ್ ಸಾಕ್ಷರರಾಗಿರುವುದು ತಮಗೆ ಗೊತ್ತಿರಲಿಕ್ಕೆ ಸಾಕು.
ಈಗ ಮತ್ತೇ 18 ಕೋಟಿ ರು. ಹಣ ಖರ್ಚು ಮಾಡಿ ಸಿ.ಸಿ.ಕ್ಯಾಮರಾ ಅಳವಡಿಸುವುದು ಹಾಗೂ ಗೇಟುಗಳಲ್ಲಿ ಬೇರೆ ಬೇರೆ ರೀತಿಯ ಭದ್ರತಾ ವ್ಯವಸ್ಥೆಗೆ ಪ್ರಸ್ತಾವನೆ ರೂಪಿಸಲಾಗಿದೆಯೆಂದು ಮಾಧ್ಯಮಗಳ ಮುಖಾಂತರ ತಿಳಿದು ಬಂದಿದೆ. ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಒಬ್ಬರಿಂದಲೇ 14.50 ಕೋಟಿ, 15.50 ಕೋಟಿ, 16.50 ಕೋಟಿ ಹಾಗೂ 17.50 ಕೋಟಿ ರು.ಗಳ ಕೋಟೇಶನ್ ಪಡೆಯಲಾಗಿದೆ ಎಂಬ ವದಂತಿ ಹಬ್ಬಿದೆ. ಈ ಹಿಂದೆ ವ್ಯವಸ್ಥೆ ಮಾಡಲು ಯೋಚಿಸಿದಾಗ 2.8 ಕೋಟಿ ರು. ಅಂದಾಜು ವೆಚ್ಚವಾಗುತ್ತದೆ ಎಂದು ವರದಿ ಕೊಟ್ಟಿದ್ದಾರೆ.
ಈಗಾಗಲೇ ವಿಧಾನಪರಿಷತ್ತಿನಲ್ಲಿ ಹಾಗೂ ಶಾಸಕರ ಭವನದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದ್ದು, ಅದಕ್ಕೆ ಈಗಾಗಲೇ 84 ಲಕ್ಷ ರು. ಹಣ ಖರ್ಚಾಗಿದೆ. ಈಗ ಸದ್ಯ ಇರುವ ಭದ್ರತಾ ವ್ಯವಸ್ಥೆ ಉತ್ತಮವಾಗಿದ್ದು, ತಾವು ಅಳವಡಿಸಲು ಉದ್ದೇಶಿಸಿರುವ ಭದ್ರತಾ ವ್ಯವಸ್ಥೆಯಿಂದ ಸಾರ್ವಜನಿಕರು ವಿಧಾನಸೌಧ ಹಾಗೂ ಶಾಸಕರ ಭವನಕ್ಕೆ ಭೇಟಿ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣ ಮಾಡುವುದರೊಂದಿಗೆ ಜೈಲಿನಲ್ಲಿರುವ ಕೈದಿಗಳನ್ನು ಭೇಟಿಯಾಗಲು ರೂಪಿಸಿರುವ ವ್ಯವಸ್ಥೆಯನ್ನು ಇಲ್ಲಿಯೂ ತರುವ ಹುನ್ನಾರ ನಡೆದಿದೆಯೆಂದು ಸಾರ್ವಜನಿಕರು ಅಂದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ತಾವು ಪರಿಗಣಿಸಬೇಕು. ಮೊದಲು ತಜ್ಞರೊಂದಿಗೆ ಹಾಗೂ ನಮ್ಮಂಥವರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವದು ಸೂಕ್ತವೆಂಬುದು ನನ್ನ ಭಾವನೆ.
ನಾನು ಈ ಪತ್ರವನ್ನು ಯಾವ ರಾಗದ್ವೇಷಗಳಿಲ್ಲದೇ ಸದುದ್ದೇಶದಿಂದ ಬರೆಯುತ್ತಿದ್ದೇನೆ. ಕಳೆದ 38 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಸಭಾಪತಿಗಳ ಹಾಗೂ ಸಭಾಧ್ಯಕ್ಷರ ಪೀಠದ ಘನತೆ, ಗೌರವಗಳು ಸಾರ್ವಜನಿಕರ ಎದುರು ಚರ್ಚೆಗೆ ಒಳಗಾಗುವಂತೆ ಮಾಡಿರುವುದು ತುಂಬಾ ಬೇಸರದ ಸಂಗತಿಯಾಗಿದೆ. ಸಭಾಪತಿಗಳ ಹಾಗೂ ಸಭಾಧ್ಯಕ್ಷರ ಪೀಠಗಳ ಮೇಲಿನ ಅಪಾರ ಗೌರವದಿಂದ ಬರೆದ ಈ ಪತ್ರವನ್ನು ಸಕಾರಾತ್ಮವಾಗಿ ಅಧ್ಯಯನ ಮಾಡಿ ಇನ್ನು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಿರಾಗಿ ನಂಬಿರುವೆ. ಇದಕ್ಕೆ ನಮ್ಮೆಲ್ಲ ರ ಬೆಂಬಲವಿದೆ.
ಗೌರವಗಳೊಂದಿಗೆ,
ಬಸವರಾಜ ಹೊರಟ್ಟಿ,
ವಿಧಾನಪರಿಷತ್ ಸದಸ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.