
ಮುಂಬೈ: ಒಂದೆಡೆ, ಬರ ಪರಿಸ್ಥಿತಿ, ಬೆಳೆ ನಷ್ಟದಿಂದಾಗಿ ದೇಶದ ರೈತಾಪಿ ವರ್ಗ ಸಂಕಷ್ಟದಲ್ಲಿದ್ದರೂ, ಅವರ ವಾಣಿಜ್ಯ ಬಾಂಕ್'ಗಳಲ್ಲಿನ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಖಡಾಖಂಡಿತವಾಗಿ ಹೇಳಿದೆ. ಆದರೆ, ಅದೇ ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಾಣಿಜ್ಯ ಬ್ಯಾಂಕುಗಳು ಶ್ರೀಮಂತ ಉದ್ಯಮಿಗಳ ಲಕ್ಷ ಕೋಟಿಗಟ್ಟಲೆ ಸಾಲವನ್ನು ಮನ್ನಾ ಮಾಡುವ ಸಾಧ್ಯತೆ ಇದೆ!
ಹೀಗೊಂದು ಸಾಧ್ಯತೆ ಕಂಡುಬಂದಿರುವುದು ವಿಶ್ವಖ್ಯಾತ ಹಣಕಾಸು ವಿಶ್ಲೇಷಣಾ ಸಂಸ್ಥೆ ಕ್ರಿಸಿಲ್(CRISIL) ಪ್ರಕಟಿಸಿದ ವರದಿಯಿಂದ. ಕ್ರಿಸಿಲ್ ಬುಧವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ದೇಶದ ವಾಣಿಜ್ಯ ಬ್ಯಾಂಕ್'ಗಳಲ್ಲಿ ಒಟ್ಟಾರೆ 8 ಲಕ್ಷ ಕೋಟಿ ರು. ಅನುತ್ಪಾದಕ ಆಸ್ತಿ(NPA) ಇದೆ. ಈ ಪೈಕಿ ಲೋಹ, ನಿರ್ಮಾಣ ಮತ್ತು ವಿದ್ಯುತ್ ಕ್ಷೇತ್ರದ 50 ಕಂಪನಿಗಳ ಅನುತ್ಪಾದಕ ಆಸ್ತಿಯೇ 4 ಲಕ್ಷ ಕೋಟಿ ರುಪಾಯಿ. ಇದನ್ನು ಇತ್ಯರ್ಥಗೊಳಿಸಲು ಸೂಕ್ತ ಮಾರ್ಗ ಹುಡುಕುವಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್'ಗಳಿಗೆ ಸೂಚಿಸಿದೆ. ಹಾಗಾಗಿ, ಅನುತ್ಪಾದಕ ಆಸ್ತಿಯ ಹೊರೆಯನ್ನು ಚುಕ್ತಾಗೊಳಿಸುವ ನಿಟ್ಟಿನಲ್ಲಿ ಬಾಕಿಯ ಶೇ.60ರಷ್ಟನ್ನು ಸರ್ಕಾರಿ ಬ್ಯಾಂಕುಗಳೇ ಹೊರುವ ಸಾಧ್ಯತೆ ಇದೆ. ಅಂದರೆ, ಸುಮಾರು 2.4 ಲಕ್ಷ ಕೋಟಿ ರು.ಗಳಷ್ಟು ಭಾರೀ ದೊಡ್ಡ ಮೊತ್ತದ ಸಾಲವನ್ನು ಬ್ಯಾಂಕುಗಳು ಮನ್ನಾ ಮಾಡಬೇಕಾಗುತ್ತದೆ ಎಂದು ಕ್ರಿಸಿಲ್ ವಿಶ್ಲೇಷಿಸಿದೆ.
ಹೀಗೆ ಸಾಲ ಮನ್ನಾ ಆಗುವ ಕಂಪನಿಗಳ ಪೈಕಿ ಕೆಲ ಕಂಪನಿಗಳು ಮತ್ತೆ ಸುಧಾರಣೆ ಹಾದಿಯಲ್ಲಿ ಸಾಗುವ ಶಕ್ತಿಯನ್ನು ಕಳೆದುಕೊಂಡಿರುವಂಥದ್ದಾದರೆ, ಇನ್ನು ಕೆಲವು ಕಂಪನಿಗಳು ಸಾಲ ಮನ್ನಾ ಬಳಿಕ ಚೇತರಿಕೆಯ ಸಾಧ್ಯತೆಯನ್ನು ಹೊಂದಿವೆ. ಹೀಗಾಗಿ ಕಂಪನಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇಂಥದ್ದೊಂದು ನಿರ್ಧಾರಕ್ಕೆ ಸರ್ಕಾರ ಬಂದಿದೆ ಎಂದು ಕ್ರಿಸಿಲ್ ತನ್ನ ವರದಿಯಲ್ಲಿ ವಿಶ್ಲೇಷಿಸಿದೆ.
ಆದರೆ ಈಗಾಗಲೇ ಉದ್ಯಮಿಗಳ ಪರ ಎಂದು ವಿಪಕ್ಷಗಳಿಂದ ಟೀಕಿಸಲ್ಪಡುತ್ತಿರುವ ಕೇಂದ್ರ ಸರ್ಕಾರ, ಒಂದು ವೇಳೆ ಬ್ಯಾಂಕ್‌ಗಳ ಮೂಲಕ ದೊಡ್ಡ ಉದ್ಯಮಗಳ ಸಾಲ ಮನ್ನಾ ಮಾಡಲು ಮುಂದಾಗಿದ್ದೇ ಆದಲ್ಲಿ ಭಾರೀ ಪ್ರತಿಭಟನೆ ಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಉದ್ಯಮಗಳ ಸಾಲ ಮನ್ನಾ ಆಗಿದ್ದೇ ಆದಲ್ಲಿ, 2019ರ ಲೋಕಸಭಾ ಚುನಾವಣೆ ಎದುರಿಸಲು ನಾನಾ ಸಿದ್ಧತೆ ನಡೆಸುತ್ತಿರುವ ಕೇಂದ್ರ ಸರ್ಕಾರಕ್ಕೆ ಭಾರೀ ಹೊಡೆತ ಬೀಳುವುದು ಖಚಿತ ಎನ್ನಲಾಗಿದೆ.
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.