ಬ್ಯಾಂಕ್ ಗ್ರಾಹಕರೇ ಕಟ್ಟೆಚ್ಚರ ..!

First Published Jun 8, 2018, 7:18 AM IST
Highlights

ಕೆಲ ದಿನಗಳ ಹಿಂದೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ತಲ್ಲಣಗೊಳಿಸುವ ‘ಸರ್ಜಿಕಲ್ ಸ್ಟ್ರೈಕ್’ ಅನ್ನು ಅಂತಾರಾಷ್ಟ್ರೀಯ ಸೈಬರ್ ಕಳ್ಳರ ಜಾಲವು ನಡೆಸಿದ್ದು, ಈಗ ದಾಳಿಕೋರರ ಮೂಲ ಭೇದಿಸುವುದು ರಾಜ್ಯ ಸಿಐಡಿ ಸೈಬರ್ ಕ್ರೈಂ ಸೇರಿದಂತೆ  34 ದೇಶಗಳ ತನಿಖಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಿಸಿದೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು : ಕೆಲ ದಿನಗಳ ಹಿಂದೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ತಲ್ಲಣಗೊಳಿಸುವ ‘ಸರ್ಜಿಕಲ್ ಸ್ಟ್ರೈಕ್’ ಅನ್ನು ಅಂತಾರಾಷ್ಟ್ರೀಯ ಸೈಬರ್ ಕಳ್ಳರ ಜಾಲವು ನಡೆಸಿದ್ದು, ಈಗ ದಾಳಿಕೋರರ ಮೂಲ ಭೇದಿಸುವುದು ರಾಜ್ಯ ಸಿಐಡಿ ಸೈಬರ್ ಕ್ರೈಂ ಸೇರಿದಂತೆ  34 ದೇಶಗಳ ತನಿಖಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಿಸಿದೆ.

ಇದೇ ಮೊದಲ ಬಾರಿಗೆ ಭಾರತದ ಮಟ್ಟಿಗೆ ಬ್ಯಾಂಕ್‌ನ ಸರ್ವರ್‌ಗೇ ಕನ್ನ ಹಾಕಿ 37 ಕೋಟಿ ದೋಚಿದ್ದಾರೆ. ಈ ದಾಳಿಗೆ ತಮಿಳುನಾಡಿನ ಚೆನ್ನೈನ ಸಿಟಿ ಯೂನಿಯನ್ ಬ್ಯಾಂಕ್ (ಸಿಯುಬಿ) ತುತ್ತಾಗಿದ್ದು, ಆ ಬ್ಯಾಂಕ್‌ನ ಗ್ರಾಹಕರ ನಕಲಿ ಎಟಿಎಂ ಕಾರ್ಡ್ ಬಳಸಿ ಭಾರತ ಸೇರಿ 34 ದೇಶಗಳಲ್ಲಿ ಹಣ ದೋಚಲಾಗಿದೆ. ಭಾರತದಲ್ಲಿ ಬೆಂಗಳೂರು ಹಾಗೂ ಮುಂಬೈ ನಗರದಲ್ಲಿ ಸೈಬರ್ ಕಳ್ಳರ ಕಿಸೆಗೆ ತಲಾ 1 ಕೋಟಿ ಸೇರಿದೆ ಎಂದು ಸಿಐಡಿ ಮೂಲಗಳು ಹೇಳಿವೆ.

ತಾಂತ್ರಿಕ ಕೌಶಲ್ಯವುಳ್ಳವರೇ ಈ ಜಾಲದಲ್ಲಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಈ ಜಾಲದ ಪತ್ತೆ ಕಾರ್ಯವು ಸವಾಲಿನ ಕೆಲಸವಾಗಿದೆ ಎಂದು ಸೈಬರ್ ಕ್ರೈಂ ವಿಭಾಗದ ಹಿರಿಯ ಅಧಿಕಾರಿ ಯೊಬ್ಬರು ‘ಕನ್ನಡಪ್ರಭ’ಕ್ಕೆ ಹೇಳಿದ್ದಾರೆ. ಬ್ಯಾಂಕ್‌ನ ಎಟಿಎಂ ಘಟಕಗಳಿಗೆ ತುಂಬಲಾಗಿದ್ದ ಹಣವನ್ನು ಆರೋಪಿಗಳು ದೋಚಿದ್ದಾರೆ. ಹಾಗಾಗಿ ಗ್ರಾಹಕರಿಗೆ ಇದರ ಬಿಸಿ ತಾಕದ ಕಾರಣ ಕೃತ್ಯವು ಬೆಳಕಿಗೆ ಬಂದಿಲ್ಲ. ವೀಸಾ ವಿಭಾಗದ ಅಧಿಕಾರಿಗಳು, ವಿದೇಶಗಳಲ್ಲಿ ಹಣ ವರ್ಗಾವಣೆ ಬಗ್ಗೆ ಅನುಮಾನಗೊಂಡು ಸಿಟಿ ಯೂನಿಯನ್ ಬ್ಯಾಂಕ್‌ಗೆ ಎಚ್ಚರಿಸಿದಾಗಲೇ ಕೃತ್ಯ ಗೊತ್ತಾಗಿದೆ. 

ಕೂಡಲೇ ಬ್ಯಾಂಕ್ ಅಧಿಕಾರಿಗಳು, ಸರ್ವರ್ ಸಂಪರ್ಕ ಸ್ಥಗಿತಗೊಳಿಸಿ ಗ್ರಾಹಕರ ಹಣದ ಸುರಕ್ಷತೆಗೆ ಕ್ರಮ ತೆಗೆದುಕೊಂಡಿದ್ದಾರೆ  ಎಂದು ಪೊಲೀಸರು ವಿವರಿಸಿದ್ದಾರೆ. ಈ ಕೃತ್ಯವನ್ನು ಒಂದೇ ತಂಡವು ಎಸಗಿ ರುವ ಬಗ್ಗೆ ಅನುಮಾನವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರೋಪಿಗಳು ಸಂಪರ್ಕ ಜಾಲ ಹೊಂದಿದ್ದು, ಬೆಂಗಳೂರು ಮತ್ತು ಮುಂಬೈ ಸೇರಿ ಪ್ರಮುಖ ನಗರಗಳಲ್ಲಿ ಆ ಜಾಲವು ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಳಗ್ಗೆ 5ರಿಂದ 11.30  ವರೆಗೆ ಹಣ ಡ್ರಾ: ಬೆಂಗಳೂರಿನ ಕಾವೇರಿ ಭವನ, ಇನ್ಫೆಂಟ್ರಿ ರಸ್ತೆಯ ಸಫೀನಾ ಪ್ಲಾಜಾ, ಆಯುಕ್ತರ ಕಚೇರಿ, ಎಂ.ಜಿ.ರಸ್ತೆ, ಕೆ.ಜಿ.ರಸ್ತೆ ಹಾಗೂ ಮಲ್ಲೇಶ್ವರ ಸೇರಿದಂತೆ 20 ಎಟಿಎಂಗಳಲ್ಲಿ ಸಿಟಿ ಯೂನಿಯನ್ ಬ್ಯಾಂಕ್ ಕಾರ್ಡನ್ನು ಬಳಸಿ ಐವರು ಹಣ ದೋಚಿದ್ದಾರೆ. ಬೆಳಗ್ಗೆ 5 ರಿಂದ 11.30ರವರೆಗೆ ಕಳ್ಳರ ಕಾರ‌್ಯಾಚರಣೆ ನಡೆದಿದ್ದು, ಒಮ್ಮೆಗೆ 40 ಸಾವಿರ ಡ್ರಾ ಮಾಡಿದ್ದಾರೆ. ಈ ಐವರು ತಲಾ20 ರಿಂದ 30 ಕಾರ್ಡ್ ಬಳಸಿದ್ದು, ಒಂದು ಬಾರಿ ಹಣ ಪಡೆದ ಬಳಿಕ ಆ ಕಾರ್ಡನ್ನು ಮತ್ತೆ ಬಳಸಿಲ್ಲ. ಹೀಗೆ ಕೆಲವೇ ಗಂಟೆಗಳಲ್ಲಿ 1 ಕೋಟಿ ದೋಚಿದ್ದಾರೆ.

ಸಿಸಿಟಿವಿಯಿಂದ ಸುಳಿವು ಸಿಕ್ಕಿಲ್ಲ: ಡಿಸೆಂಬರ್‌ನಲ್ಲಿ ಕೃತ್ಯ ನಡೆದರೂ ಚೆನ್ನೈ ಸಿಸಿಬಿ ಪೊಲೀಸ್ ತಂಡವು ಈ ಪ್ರಕರಣದ ತನಿಖೆಗಾಗಿ ಜನವರಿ 23ರಂದು ಸಿಐಡಿ ಸೈಬರ್ ಕ್ರೈಂ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಚೆನ್ನೈ ಪೊಲೀಸರಿಂದ ಮಾಹಿತಿ ಪಡೆದು ತನಿಖೆಗಿಳಿದ ಸಿಐಡಿ ಸೈಬರ್ ಕ್ರೈಂ ಅಧಿಕಾರಿಗಳು, ಹಣ ಡ್ರಾ ಮಾಡಲಾಗಿದ್ದ ಎಟಿಎಂಗಳಲ್ಲಿ ಪರಿಶೀಲಿಸಿದ್ದರು. ಆ ಎಟಿಎಂಗಳು ಹಾಗೂ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಅಲ್ಲದೆ ಆ ವಲಯದ ಮೊಬೈಲ್‌ಗಳ ಟವರ್ ಪರಿಶೀಲಿಸಿ ಅಂದು ಸಂಪರ್ಕ ಹೊಂದಿದ್ದ ಸಾವಿರಾರು ಮೊಬೈಲ್ ಸಂಖ್ಯೆಗಳನ್ನು ತಪಾಸಣೆ ನಡೆಸಿದ್ದೇವೆ. ಆದರೆ ಆರೋಪಿಗಳ ಮಾಹಿತಿ ಸಿಗಲಿಲ್ಲ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ವಿದೇಶದಲ್ಲಿ ಇಬ್ಬರು ಸೆರೆ?: ಇದೊಂದು ವ್ಯವಸ್ಥಿತ ಅಂತಾರಾಷ್ಟ್ರೀಯ ಮಟ್ಟದ ಜಾಲವಾಗಿದ್ದು, ಬೆಂಗಳೂರು ಹಾಗೂ ಮುಂಬೈನಲ್ಲಿ ಸಂಪರ್ಕ ಹೊಂದಿದೆ. ಬೆಂಗಳೂರಿಗೆ ಐವರು ಬಂದಿರುವ ಮಾಹಿತಿ ಖಚಿತವಾಗಿದ್ದು, ಈ ಬಗ್ಗೆ ಮುಂಬೈ ಪೊಲೀಸರಿಂದ ಸಹ ವಿವರ ಪಡೆದಿದ್ದೇವೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. ಈ ಸರ್ವರ್ ಹ್ಯಾಕ್ ಪ್ರಕರಣದ ಸಂಬಂಧ ಇಥಿಯೋಪಿಯಾ ಮತ್ತು ಚೆಕೋ ಸ್ಲೋವಾಕಿಯಾದಲ್ಲಿ ಇಬ್ಬರನ್ನು ಸ್ಥಳೀಯ ಪೊಲೀಸರು ಬಂಧಿಸಿರುವ ಮಾಹಿತಿ ಗೊತ್ತಾಗಿದೆ. ಅವರನ್ನು ವಿಚಾರಣೆ ನಡೆಸಿದರೆ ಹೆಚ್ಚಿನ ವಿವರಗಳು ಲಭ್ಯವಾಗಬಹುದು. ಈ ಬಗ್ಗೆ ಚೆನ್ನೈ ಪೊಲೀಸರು ತನಿಖೆ ಮುಂದುವರೆಸಿದ್ದು, ಅವರಿಗೆ ಅಗತ್ಯ ನೆರವು ನಾವು ನೀಡಿದ್ದೇವೆ ಎಂದಿದ್ದಾರೆ.

click me!