ಮತ್ತೆ ಕೇಳಿಸಲಿದೆ ಗೋಲ್ಡನ್‌ ಚಾರಿಯಟ್‌ ಚುಕುಬುಕು ಸದ್ದು!, ಯಾವಾಗಿಂದ?

By Web DeskFirst Published Sep 21, 2019, 7:57 AM IST
Highlights

ಮತ್ತೆ ಕೇಳಿಸಲಿದೆ ಗೋಲ್ಡನ್‌ ಚಾರಿಯಟ್‌ ಚುಕುಬುಕು ಸದ್ದು!| 2018ರಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರ| ಮುಂಬರುವ ಜನವರಿಯಿಂದ ಮತ್ತೆ ಕಾರ್ಯಾಚರಣೆ

ಶಿವಾನಂದ ಗೊಂಬಿ

ಹುಬ್ಬಳ್ಳಿ[ಸೆ.21]: ರಾಜ್ಯದಲ್ಲಿ ಮತ್ತೆ ಗೋಲ್ಡನ್‌ ಚಾರಿಯಟ್‌ ರೈಲಿನ ಚುಕುಬುಕು ಸದ್ದು ಕೇಳಿ ಬರಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ 2020ರ ಜನವರಿಯಿಂದ ಸಂಚಾರ ಪುನಾರಂಭಗೊಳ್ಳಲಿದೆ. ಮೈಸೂರು ವರ್ಕ್ಶಾಪ್‌ನಲ್ಲಿ ಗೋಲ್ಡನ್‌ ಚಾರಿಯಟ್‌ ಸಿದ್ಧಗೊಳ್ಳುತ್ತಿದೆ.

‘ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ವಿದೇಶಿಗರನ್ನು ಕರ್ನಾಟಕದತ್ತ ಸೆಳೆಯಬೇಕು’ ಎಂಬ ಉದ್ದೇಶದಿಂದ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ 2008ರಲ್ಲಿ ಬಿಜೆಪಿ ಸರ್ಕಾರ ಗೋಲ್ಡನ್‌ ಚಾರಿಯಟ್‌ ರೈಲನ್ನು ಪರಿಚಯಿಸಿತ್ತು. ಕೆಎಸ್‌ಟಿಡಿಸಿ ಇದನ್ನು ನಿರ್ವಹಣೆ ಮಾಡುತ್ತಿತ್ತು. ಪ್ರತಿ ವರ್ಷ ಸೆಪ್ಟೆಂಬರ್‌ನಿಂದ ಮಾಚ್‌ರ್‍ವರೆಗೂ ಸಂಚರಿಸುತ್ತಿತ್ತು. ಹೀಗೆ ವರ್ಷದಲ್ಲಿ ಏಳು ತಿಂಗಳು ಸಂಚರಿಸುತ್ತಿದ್ದ ರೈಲು ಸಕಲ ಸೌಲಭ್ಯಗಳನ್ನು ಹೊಂದಿತ್ತು.

ಗುತ್ತಿಗೆ ಅವಧಿ ಪೂರ್ಣ:

ಗೋಲ್ಡರ್‌ ಚಾರಿಯಟ್‌ ರೈಲು ಪ್ರಾರಂಭವಾಗಿ ಹತ್ತು ವರ್ಷಗಳಾಗಿತ್ತು. ಹತ್ತು ವರ್ಷಗಳ ಬಳಿಕ ಕನಿಷ್ಠ 6 ತಿಂಗಳು ರೈಲ್ವೆ ಇಲಾಖೆ ನಿಯಮದಂತೆ ಸಮಗ್ರವಾಗಿ ಪರಿಶೀಲನೆ ಮಾಡಬೇಕಾಗುತ್ತದೆ. ಮತ್ತೆ ಓಡಿಸಲು ಸಮರ್ಪಕವಾಗಿದೆಯೇ ಹೇಗೆ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. ರೈಲಿನಲ್ಲಿದ್ದ ಹಿಂದಿನ ಕೆಲವು ಪರಿಕರಗಳನ್ನು ಬದಲಿಸಿ, ಸವೀರ್‍ಸ್‌ ಮಾಡಬೇಕಾಗುತ್ತದೆ. ಇದಕ್ಕೆ ಕನಿಷ್ಠ ಆರು ತಿಂಗಳಾದರೂ ಸಮಯ ಬೇಕು. ಇದರೊಂದಿಗೆ ರೈಲಿನಲ್ಲಿ ಸೇವಾಸೌಲಭ್ಯ ಕಲ್ಪಿಸುವ ಏಜನ್ಸಿಯ ಗುತ್ತಿಗೆ ಅವಧಿಯೂ 10 ವರ್ಷಕ್ಕೆ ಇತ್ತು. ಅದು ಕೂಡ 2018ರ ಮಾಚ್‌ರ್‍ನಲ್ಲಿ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತ್ತು.

ಇದೀಗ ರೈಲಿನ ಸರ್ವೀಸ್ ಕೆಲಸವೆಲ್ಲ ಮುಗಿದಿದೆ. ಬೋಗಿಗಳಿಗೆ ವಿನೈಲ್‌ ರಾರ‍ಯಪಿಂಗ್‌ ಅಂದರೆ ಸ್ಟಿಕರಿಂಗ್‌ ಮಾಡಲಾಗುತ್ತಿದೆ. ಈ ಎಲ್ಲ ಕಾರ್ಯಗಳು ಮೈಸೂರಿನ ವರ್ಕ್ಶಾಪ್‌ನಲ್ಲಿ ನಡೆಯುತ್ತಿದೆ. ಈ ಕಾರ್ಯ ಮುಗಿಯಬೇಕೆಂದರೆ ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಬಳಿಕ ಗೋಲ್ಡನ್‌ ಚಾರಿಯಟ್‌ ಬಗ್ಗೆ ಮತ್ತೆ ಪ್ರಚಾರ ಕೈಗೊಂಡು, ಬುಕ್ಕಿಂಗ್‌ ಶುರು ಮಾಡಲಾಗುವುದು. ಈ ಎಲ್ಲ ಕಾರ್ಯ ಡಿಸೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದ್ದು, ಜನವರಿಯಿಂದ ಮತ್ತೆ ಸಂಚರಿಸಲಿದೆ ಎಂದು ಕೆಎಸ್‌ಟಿಡಿಸಿ ಯೋಜನಾ ವಿಭಾಗ ತಿಳಿಸುತ್ತದೆ.

ಏನೇನು ಸೌಲಭ್ಯ?:

18 ಬೋಗಿಗಳ ಈ ರೈಲಿನಲ್ಲಿ 11 ಬೋಗಿಗಳಲ್ಲಿ ಪ್ರಯಾಣಿಕರಿದ್ದರೆ, 1 ಬೋಗಿಯಲ್ಲಿ 4 ಅತಿಥಿ ಕ್ಯಾಬಿನ್‌ಗಳಿರುತ್ತವೆ. ಇನ್ನುಳಿದ 7 ಬೋಗಿಗಳಲ್ಲಿ ಪ್ರಯಾಣಿಕರಿಗಾಗಿ ಸೌಲಭ್ಯಗಳು ಇರುತ್ತವೆ. ಎರಡು ರೆಸ್ಟೋರೆಂಟ್‌, ಎರಡು ಅಡುಗೆ ಕೋಣೆ, ಜಿಮ್‌, ಬಾರ್‌ ಕೌಂಟರ್‌, ಮಿಟಿಂಗ್‌ ಹಾಲ್‌, ಟಿವಿ ವ್ಯವಸ್ಥೆ, ಬಿಜಿನೆಸ್‌ ಕ್ಯಾಬಿನ್‌ ಹೀಗೆ ಸಕಲ ಸೌಲಭ್ಯಗಳು ಇಲ್ಲಿರುತ್ತವೆ. ಯಾವುದೇ ಫೈವ್‌ ಸ್ಟಾರ್‌ ಹೋಟೆಲ್‌ಗಿಂತ ಕಡಿಮೆ ಇಲ್ಲದಂತೆ ರೈಲನ್ನು ಸಜ್ಜುಗೊಳಿಸಲಾಗಿರುತ್ತದೆ. ಹೈಟೆಕ್‌ ಸೌಲಭ್ಯಗಳುಳ್ಳ ಐಷಾರಾಮಿ ಟ್ರೈನ್‌ ಇದಾಗಿರುತ್ತದೆ. ಪ್ರತಿ ಬೋಗಿಗೂ ಕರ್ನಾಟಕದ ಇತಿಹಾಸ ಪ್ರತಿಬಿಂಬಿಸುವ ಕದಂಬ, ಹೊಯ್ಸಳ, ಚಾಲುಕ್ಯ, ವಿಜಯನಗರ, ರಾಷ್ಟ್ರಕೂಟ, ಗಂಗಾ, ಸಂಗಮ, ಆದಿಲ್‌ಶಾಹಿ ಹೆಸರನ್ನು ಇರಿಸಲಾಗಿದೆ.

ಬೆಂಗಳೂರು ಟು ಗೋವಾ

7 ರಾತ್ರಿ 8 ಹಗಲು ಪ್ಯಾಕೇಜ್‌ನಡಿ ಗೋಲ್ಡನ್‌ ಚಾರಿಯಟ್‌ನಲ್ಲಿ ಸಂಚರಿಸಬಹುದಾಗಿದೆ. ಬೆಂಗಳೂರಿನಿಂದ ಪ್ರಾರಂಭವಾಗುವ ಪ್ರಯಾಣ ಮೈಸೂರು, ನಾಗರಹೊಳೆ ನ್ಯಾಷನಲ್‌ ಪಾರ್ಕ್, ಹಾಸನ, ಬೇಲೂರು, ಹಳೇಬೀಡು, ಹೊಸಪೇಟೆ, ಹಂಪಿ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಗೋವಾ ತಲುಪಲಿದೆ. ಅಲ್ಲಿಂದ ಮರಳಿ ಬೆಂಗಳೂರಿಗೆ ಆಗಮಿಸಲಿದೆ. ಈ ಹಿಂದೆ .1.75 ಲಕ್ಷಕ್ಕೆ ಒಬ್ಬರಿಗೆ ದರ ನಿಗದಿ ಮಾಡಲಾಗಿತ್ತು. ಆದರೆ, ಈ ಬಾರಿ ಎಷ್ಟುದರ ನಿಗದಿ ಮಾಡಬೇಕೆಂಬುದು ನಿರ್ಧರಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಒಂದು ಟ್ರಿಪ್‌ನಲ್ಲಿ 80 ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, ಹಿಂದೆ ಯಾವ ಟ್ರಿಪ್‌ ಸಂಪೂರ್ಣವಾಗಿ ಭರ್ತಿಯಾಗಿರಲಿಲ್ಲ. ಗರಿಷ್ಠವೆಂದರೆ 45 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಇದರಿಂದ ಕೆಎಸ್‌ಟಿಡಿಸಿಗೆ ಹೆಚ್ಚಿನ ಲಾಭವಾಗಿಲ್ಲ. ಆದರೆ, ಈ ಬಾರಿ ಕೆಎಸ್‌ಟಿಡಿಸಿಗೆ ವರ್ಷಕ್ಕೆ .1 ಕೋಟಿ ಲಾಭ ಇದರಿಂದ ಆಗುವಂತೆ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

ಗೋಲ್ಡನ್‌ ಚಾರಿಯಟ್‌ ರೈಲನ್ನು ಮತ್ತೆ ಪ್ರಾರಂಭಿಸುವಂತೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಶೀಘ್ರದಲ್ಲೇ ಮತ್ತೆ ರಾಜ್ಯದಲ್ಲಿ ಗೋಲ್ಡನ್‌ ಚಾರಿಯಟ್‌ ರೈಲು ಪ್ರಾರಂಭವಾಗಲಿದೆ.

- ಸುರೇಶ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

click me!