ರುದ್ರೇಶ್ ಕೊಲೆ: ಶಿವಾಜಿನಗರ ಬಂದ್; ಆರೆಸ್ಸೆಸ್, ಬಿಜೆಪಿಯಿಂದ ಪ್ರತಿಭಟನೆ

By Web DeskFirst Published Oct 16, 2016, 4:11 PM IST
Highlights

ಶಿವಾಜಿನಗರದಲ್ಲಿ ಪಥ ಸಂಚಲನ ಮುಗಿಸಿ ವಾಪಸ್ ಆಗುತ್ತಿದ್ದ ರುದ್ರೇಶ್ ಮೇಲೆ ಮಂಕಿ ಕ್ಯಾಪ್ ಹಾಕಿದ್ದ ಇಬ್ಬರು , ಪಲ್ಸರ್ ಬೈಕ್ ನಲ್ಲಿ ಬಂದು ಹತ್ಯೆ ಮಾಡಿದ್ದರು

ಬೆಂಗಳೂರು (ಅ.17):  ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆಯನ್ನು ಖಂಡಿಸಿ ಇಂದು ಶಿವಾಜಿನಗರದಲ್ಲಿ ಬಂದ್ ಆಚರಿಸಲಾಗುತ್ತಿದೆ. ರುದ್ರೇಶ್​ ಹತ್ಯೆ ಖಂಡಿಸಿ ಆರೆಸ್ಸೆಸ್​ ಹಾಗೂ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರುದ್ರೇಶ್​ ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಈ ವೇಳೆ  ಪ್ರತಿಭಟನಾ ರ್ಯಾಲಿ ತಡೆದ ಪೊಲೀಸರ ಜೊತೆ ವಾಗ್ವಾದ ಕೂಡಾ ನಡೆದಿದೆ.

ನಿನ್ನೆ ಜನನಿಬಿಡ ಪ್ರದೇಶ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆಯಾಗಿತ್ತು. ಶಿವಾಜಿನಗರದಲ್ಲಿ ಪಥ ಸಂಚಲನ ಮುಗಿಸಿ ವಾಪಸ್ ಆಗುತ್ತಿದ್ದ ರುದ್ರೇಶ್ ಮೇಲೆ ಮಂಕಿ ಕ್ಯಾಪ್ ಹಾಕಿದ್ದ ಇಬ್ಬರು , ಪಲ್ಸರ್ ಬೈಕ್ ನಲ್ಲಿ ಬಂದು ಹತ್ಯೆ ಮಾಡಿದ್ದಾರೆ.

Latest Videos

ರಿಯಲ್ ಎಸ್ಟೇಟ್ ಹಾಗೂ ಹಣಕಾಸು ವ್ಯವಹಾರಗಳನ್ನು ಹೊಂದಿದ್ದ ರುದ್ರೇಶ್ ಕೊಲೆಯು ಮೆಲ್ನೋಟಕ್ಕೆ ವೈಯಕ್ತಿಕ ಕಾರಣಗಳಿಂದಾಗಿದೆ ಎಂದು ಶಂಕಿಸಲಾಗಿದೆ. 

ಪೊಲೀಸರು ಆರೋಪಿಗಳ ಬಂಧನಕ್ಕೆ ವಿಶೇಷ ಐದು ತಂಡಗಳನ್ನು ರಚಿಸಿದ್ದಾರೆ. ಶಿವಾಜಿನಗರದ ಸುತ್ತಮುತ್ತಲಿನ ಪ್ರದೇಶ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ಕಮರ್ಷಿಯಲ್ ಸ್ಟ್ರೀಟ್, ಶಿವಾಜಿ ನಗರ, ಫ್ರೇಜರ್ ಟೌನ್, ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ  ಹೇರಲಾಗಿದೆ.

ರುದ್ರೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. 10 ಗಂಟೆಯ ಮರಣೋತ್ತರ ಪರೀಕ್ಷೆ  ನಡೆಯಲಿದೆ. ಆಸ್ಪತ್ರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 

ಘಟನೆ ವಿರೋಧಿಸಿ ಇಂದು ಆರೆಸ್ಸೆಸ್ ಪ್ರತಿಭಟನೆ ಹಮ್ಮಿಕೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ನೇತೃತ್ವದಲ್ಲಿ ನಾಲ್ಕೂ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಘಟನೆ ನಡೆದಿರುವುದರಿಂದ ಪೊಲೀಸರಿಂದ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಸ್ಥಳದಲ್ಲಿ ಕೆ ಎಸ್ ಆರ್ ಪಿ ತುಕಡಿ, ಕ್ಷಿಪ್ರ ಕಾರ್ಯಪಡೆಗಳನ್ನು ನಿಯೋಜಿಸಲಾಗಿದೆ.

click me!