ಗಣರಾಜ್ಯೋತ್ಸವ ದಿನ ಪೂಜಾರಿ ಆತ್ಮಕತೆ ಬಿಡುಗಡೆ

By Suvarna Web DeskFirst Published Jan 5, 2018, 12:17 PM IST
Highlights

ರಾಷ್ಟ್ರಾದ್ಯಂತ ನಡೆದ ಅವರ ಕನಸಿನ ‘ಸಾಲ ಮೇಳ’ಗಳು, ಕಷ್ಟದ ಬಾಲ್ಯ, ವಕೀಲನಾಗಿ ಭೂಸುಧಾರಣೆ ಸಂದರ್ಭ ಬಡವರಿಗೆ ಸಹಾಯ ಮಾಡಿದ್ದು, ನೆಹರೂ ಕುಟುಂಬದೊಂದಿಗಿನ ಆತ್ಮೀಯ ಒಡನಾಟ, ರಾಜಕೀಯ ಏಳು-ಬೀಳು, ಇನ್ನೂ ನಿಗೂಢವಾಗಿದ್ದ ಹಲವು ರಾಜಕೀಯ ಸಂಗತಿಗಳನ್ನು ಬರೆದಿದ್ದಾರೆ. ಮುಖ್ಯವಾಗಿ ತನಗೆ ನಾಲ್ಕು ಬಾರಿ ಒಲಿದು ಬಂದ ಮುಖ್ಯಮಂತ್ರಿ ಪದವಿಯನ್ನು ತಿರಸ್ಕರಿಸಿದ್ದು ಹಾಗೂ ಸಿಎಂ ಕುರ್ಚಿಗಾಗಿ ಆಗಿನ ನಾಯಕರು ನಡೆಸಿದ ಕುತಂತ್ರಗಳನ್ನೂ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರು(ಜ.05): ಹಿರಿಯ ಮುತ್ಸದ್ದಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರ ಬಹುನಿರೀಕ್ಷಿತ ಆತ್ಮಕತೆ ಬಿಡುಗಡೆಗೆ ಜ.26ರಂದು ಮುಹೂರ್ತ ನಿಗದಿಯಾಗಿದೆ. ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಉಳಿದಿರುವ ಈ ಹೊತ್ತಿನಲ್ಲಿ ಇದು ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಲಿದೆಯೇ ಎಂಬ ಕುತೂಹಲ ಹುಟ್ಟುಹಾಕಿದೆ. ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣ ನಾಥೇಶ್ವರ ದೇವಾಲಯದಲ್ಲಿ ಅಂದು ಆತ್ಮಕತೆ ಬಿಡುಗಡೆಯಾಗಲಿದ್ದು, ಈಗಾಗಲೇ ಪೂರ್ವ ಸಿದ್ಧತೆಗಳು ಆರಂಭವಾಗಿವೆ.

ಶಿಷ್ಯಂದಿರೇ ಗುರಿ?: ಸುದೀರ್ಘ ಆರೇಳು ವರ್ಷಗಳ ಕಾಲ ಅರ್ಥಖಾತೆ ಸಚಿವರಾಗಿದ್ದವರು ಪೂಜಾರಿ. ನಾಲ್ಕು ಬಾರಿ ಎಂಪಿ, ಎರಡು ಬಾರಿ ರಾಜ್ಯಸಭಾ ಸದಸ್ಯ, ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಎಲ್ಲಕ್ಕಿಂತ ಮುಖ್ಯವಾಗಿ, ಇಂದಿರಾ ಗಾಂಧಿ ಕಾಲದಿಂದ ನರಸಿಂಹ ರಾವ್ ಕಾಲದವರೆಗೆ ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದವರು. ಆ  ಸಂದರ್ಭದಲ್ಲಿ ಅನೇಕ ನಾಯಕರ ರಾಜಕೀಯ ಎಂಟ್ರಿಗೆ ಕಾರಣಕರ್ತರಾಗಿದ್ದವರು. ಇದೀಗ ಅವರ ಶಿಷ್ಯಂದಿರೇ ‘ಗುರುವಿಗೆ ತಿರುಮಂತ್ರ’ವಾಗಿದ್ದಾರೆ. ಈ ಎಲ್ಲ ವಿಚಾರಗಳು ಆತ್ಮಕತೆ ಯಲ್ಲಿರುವ ಸಾಧ್ಯತೆಗಳಿವೆ.

ಸೇಡಿನ ರಾಜಕಾರಣ ಅನಾವರಣ?: ‘ಕನ್ನಡಪ್ರಭ’ಕ್ಕೆ ದೊರೆತ ನಿಖರ ಮೂಲಗಳ ಪ್ರಕಾರ, ಪೂಜಾರಿ ಅವರು ತಮ್ಮಿಂದ ರಾಜಕೀಯವಾಗಿ ಎತ್ತರಕ್ಕೇರಿದವರೆಲ್ಲರ ಸಂಗತಿಗಳನ್ನು ಆತ್ಮಕತೆಯಲ್ಲಿ ಬರೆದಿದ್ದಾರೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಲೆಳೆಯುವ ರಾಜಕಾರಣ, ಸೇಡಿನ ರಾಜಕಾರಣ ಮಾಡಿದವರ ನಿಜರೂಪ ತೆರೆದಿಟ್ಟಿದ್ದಾರೆ. ಆದರೆ ರಾಜಕೀಯ ಮುತ್ಸದ್ದಿಯಾಗಿ ಸಣ್ಣ ಪುಟ್ಟ ವಿವಾದಗಳು, ಸಂಗತಿಗಳನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ.

ಹಿಂದಿ, ಇಂಗ್ಲಿಷ್‌'ಗೂ ಭಾಷಾಂತರ; ಜನಾರ್ದನ ಪೂಜಾರಿ ಇದೀಗ ಕನ್ನಡದಲ್ಲೇ ಆತ್ಮಕತೆ ಬರೆದಿದ್ದಾರೆ. ಇದಕ್ಕೆ ಹಿರಿಯ ಲೇಖಕ ಲಕ್ಷ್ಮಣ ಕೊಡಸೆ ಸಹಕಾರ ನೀಡಿದ್ದಾರೆ. ಆತ್ಮಕತೆಯನ್ನು ಹಿಂದಿ ಮತ್ತು ಇಂಗ್ಲಿಷ್‌'ಗೂ ಭಾಷಾಂತರಿಸುವ ಕಾರ್ಯಕ್ಕೆ ಮುಂದಾಗಿದ್ದು, ನಿರೀಕ್ಷೆಯಂತೆ ನಡೆದರೆ ಜ.26ಕ್ಕೆ ಮೂರೂ ಭಾಷೆಗಳಲ್ಲಿ ಆತ್ಮಕತೆ ಹೊರಬರಲಿದೆ. ಇಲ್ಲದಿದ್ದರೆ ಕನ್ನಡ ಪುಸ್ತಕ ಬಿಡುಗಡೆ ಮಾಡಿ, ಕೆಲ ದಿನಗಳ ಬಳಿಕ ಉಳಿದೆರಡು ಭಾಷಾಂತರದ ಕೃತಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಜನಾರ್ದನ ಪೂಜಾರಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಬೆಲೆಯೂ ಕಡಿಮೆ?: ಸಾಧಾರಣವಾಗಿ ಆತ್ಮಕತೆಗಳು 500 ರು.ಗಿಂತ ಹೆಚ್ಚೇ ದರವನ್ನು ಹೊಂದಿರುತ್ತವೆ. ಪೂಜಾರಿ ಈ ವಿಚಾರದಲ್ಲೂ ಉದಾರತೆ ಮೆರೆದಿದ್ದಾರೆ. ಜನಸಾಮಾನ್ಯರಿಗೆ ಪುಸ್ತಕ ಕೊಳ್ಳಲು ಹೊರೆ ಯಾಗದಂತೆ ಬೆಲೆ ನಿಗದಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈಗಿನ ಆತ್ಮಕತೆ ಸುಮಾರು 200ಕ್ಕೂ ಪುಟಗಳನ್ನು ಹೊಂದಿದ್ದು, ಪ್ರಕಟಣೆಯ ಖರ್ಚೇ 260 ರು. ತಗುಲಲಿದೆ. ಅದರ ಆಸುಪಾಸಿನಲ್ಲೇ ಬೆಲೆ ನಿಗದಿ ಮಾಡುತ್ತಾರೆ ಎನ್ನಲಾಗಿದೆ. ಬಿಡುಗಡೆಯ ದಿನ ರಿಯಾಯ್ತಿ ದರವನ್ನೂ ಘೋಷಿಸುವ ನಿರೀಕ್ಷೆಯಿದೆ.

4 ಬಾರಿ ಸಿಎಂ ಪದವಿ ತಿರಸ್ಕರಿಸಿದ್ದ ಪೂಜಾರಿ:

ಜನಾರ್ದನ ಪೂಜಾರಿ ಈಗಲೂ ಜನವಲಯದಲ್ಲಿ ‘ಬಡವರ ಬಂಧು’ ಎಂದೇ ಜನಜನಿತರು. ರಾಷ್ಟ್ರಾದ್ಯಂತ ನಡೆದ ಅವರ ಕನಸಿನ ‘ಸಾಲ ಮೇಳ’ಗಳು, ಕಷ್ಟದ ಬಾಲ್ಯ, ವಕೀಲನಾಗಿ ಭೂಸುಧಾರಣೆ ಸಂದರ್ಭ ಬಡವರಿಗೆ ಸಹಾಯ ಮಾಡಿದ್ದು, ನೆಹರೂ ಕುಟುಂಬದೊಂದಿಗಿನ ಆತ್ಮೀಯ ಒಡನಾಟ, ರಾಜಕೀಯ ಏಳು-ಬೀಳು, ಇನ್ನೂ ನಿಗೂಢವಾಗಿದ್ದ ಹಲವು ರಾಜಕೀಯ ಸಂಗತಿಗಳನ್ನು ಬರೆದಿದ್ದಾರೆ. ಮುಖ್ಯವಾಗಿ ತನಗೆ ನಾಲ್ಕು ಬಾರಿ ಒಲಿದು ಬಂದ ಮುಖ್ಯಮಂತ್ರಿ ಪದವಿಯನ್ನು ತಿರಸ್ಕರಿಸಿದ್ದು ಹಾಗೂ ಸಿಎಂ ಕುರ್ಚಿಗಾಗಿ ಆಗಿನ ನಾಯಕರು ನಡೆಸಿದ ಕುತಂತ್ರಗಳನ್ನೂ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ವರದಿ: ಸಂದೀಪ್ ವಾಗ್ಲೆ, ಕನ್ನಡಪ್ರಭ

click me!