ಬಂದೂಕಿನ ನೆರಳಲ್ಲಿ ಅಯೋಧ್ಯೆ: ಪ್ರಭು ಶ್ರೀರಾಮನತ್ತ ಶಿವನ ಸೈನಿಕರು!

By Web DeskFirst Published Nov 23, 2018, 5:53 PM IST
Highlights

ಅಯೋಧ್ಯೆಯಲ್ಲಿ ಎಲ್ಲೆಂದರಲ್ಲಿ ಬಂದೂಕುಗಳ ಸಾಲು! ಬಂದೂಕಿನ ನೆರಳಲ್ಲಿ ಪ್ರಭು ಶ್ರೀರಾಮನ ಜನ್ಮಭೂಮಿ! ಅಯೋಧ್ಯೆಯಲ್ಲಿ ನ.25ರಂದು ಶಿವಸೇನೆ ವಿಹೆಚ್ ಪಿ ಮೆರವಣಿಗೆ! ಪಿಎಸಿ ಭದ್ರತಾ ತುಕಡಿಗಳ ಸಂಖ್ಯೆ 48ಕ್ಕೆ ಏರಿಕೆ! ನಗರದಾದ್ಯಂತ ಬೀಡು ಬಿಟ್ಟಿರುವ ಗುಪ್ತಚರ ಇಲಾಖೆಯ ಅಧಿಕಾರಿಗಳು! ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಶಿವಸೇನೆ ಪ್ರತಿಭಟನೆ

ಅಯೋಧ್ಯೆ(ನ.23): ಪ್ರಭು ಶ್ರೀರಾಮನ ಜನ್ಮಭೂಮಿ ಅಯೋಧ್ಯೆ ಇದೀಗ ಭದ್ರತಾ ಪಡೆಗಳ ಬಂದೂಕಿನ ನೆರಳಲ್ಲಿ ದಿನ ದೂಡುವಂತಾಗಿದೆ. ಕಾರಣ ಇದೇ ನ.25ರಂದು ವಿಶ್ವ ಹಿಂದೂ ಪರಿಷದ್ ಮತ್ತು ಶಿವಸೇನೆಯ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಈ ಹಿಂದೆ ಅಯೋಧ್ಯೆಯಲ್ಲಿ 20ಪಿಎಸಿ ತುಕಡಿಗಳು ಇದ್ದು, ಇದೀಗ ಈ ಸಂಖ್ಯೆಯನ್ನು 48ಕ್ಕೆ ಏರಿಸಲಾಗಿದೆ. ಸುರಕ್ಷತೆ ದೃಷ್ಠಿಯಿಂದ ಇಡೀ ನಗರವನ್ನು 16 ಸೆಕ್ಟರ್ ನಲ್ಲಿ ವಿಂಗಡಿಸಲಾಗಿದ್ದು, ಪ್ರತೀ ಸೆಕ್ಟರ್ ನಲ್ಲಿಯೂ ಪೊಲೀಸ್ ಮತ್ತು ಭದ್ರತಾ ಪಡೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಇಷ್ಟೇ ಅಲ್ಲದೇ ನಗರದಾದ್ಯಂತ ಗುಪ್ತಚರ ಇಲಾಖೆಯ ಅಧಿಕಾರಿಗಳು ಬೀಡು ಬಿಟ್ಟಿದ್ದು, ಪ್ರತಿಯೊಂದು ಆಗುಹೋಗುಗಳ ಕುರಿತು ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ. ನ. 25ರ ಶಿವಸೇನೆ ಮೆರವಣಿಗೆಗೆ ಸಂಪೂರ್ಣ ಭದ್ರತೆ ಒದಗಿಸಲಾಗುವುದು ಎಂದು ಈಗಾಗಲೇ ಉತ್ತರಪ್ರದೇಶ ಸರ್ಕಾರ ಘೋಷಿಸಿದೆ.

ಅದರಂತೆ ಶಿವಸೇನೆ ಪ್ರಭು ಶ್ರೀರಾಮನ ಜನ್ಮ ಸ್ಥಳಕ್ಕೆ ಲಗ್ಗೆ ಇಡಲಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಭದ್ರತೆ ಹೆಚ್ಚಿಸಲಾಗಿದ್ದು, ನಗರದಲ್ಲಿ ಎಲ್ಲಿ ನೋಡಿದರೂ ಸಮಸವಸ್ತ್ರ ತೊಟ್ಟ ಪೊಲೀಸರದ್ದೇ ದರ್ಬಾರು ಕಾಣಿಸುತ್ತಿದೆ.

click me!