ಮಧ್ಯಾಹ್ನ 3.30ರವರೆಗೆ ಊಟ ಕೊಡಿ : ಆಟೋ ಚಾಲಕರ ಮನವಿ

By Suvarna Web DeskFirst Published Nov 20, 2017, 5:51 PM IST
Highlights

ಮಧ್ಯಾಹ್ನದ ವೇಳೆಯಲ್ಲಿ ನೀಡುವ ಊಟದ ಸಂಖ್ಯೆ ಮತ್ತು ಊಟ ಪೂರೈಸಲು ಪ್ರಸ್ತುತ ಇರುವ ಸಮಯವನ್ನು ವಿಸ್ತರಿಸುವಂತೆ ಕೆಲ ಆಟೋ ಚಾಲಕರು, ಕ್ಯಾಬ್ ಡ್ರೈವರ್‌'ಗಳು ಮನವಿ ಮಾಡಿದರು.

ಬೆಂಗಳೂರು(ನ.20) : ಇಂದಿರಾ ಕ್ಯಾಂಟೀನ್‌'ಗಳಲ್ಲಿ ಮಧ್ಯಾಹ್ನದ ವೇಳೆ ಪೂರೈಸುವ ಊಟದ ಸಂಖ್ಯೆ ಮತ್ತು ಪೂರೈಕೆ ಸಮಯವನ್ನು ಹೆಚ್ಚಿಸುವಂತೆ ಸಾರ್ವಜನಿಕರು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಮಾಡಿದ್ದಾರೆ. ಭಾನುವಾರ ಪಾಲಿಕೆಯ ರಾಧಾಕೃಷ್ಣ ದೇವಸ್ಥಾನ ವಾರ್ಡ್ ಇಂದಿರಾ ಕ್ಯಾಂಟೀನ್‌'ಗೆ ಭೇಟಿ ನೀಡಿದ ಆಯುಕ್ತರು ಆಹಾರದ ಗುಣಮಟ್ಟ, ಪ್ರಮಾಣ, ಸ್ವಚ್ಚತೆ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ತಾವು ಕೂಡ 10 ರು. ನೀಡಿ ಊಟ ಪಡೆದು ಕ್ಯಾಂಟೀನ್‌'ಗೆ ಬರುವ ಜನಸಾಮಾನ್ಯರೊಂದಿಗೆ ಸಂವಹನ ನಡೆಸುತ್ತಾ ಊಟ ಸವಿದರು.

ಈ ವೇಳೆ, ಮಧ್ಯಾಹ್ನದ ವೇಳೆಯಲ್ಲಿ ನೀಡುವ ಊಟದ ಸಂಖ್ಯೆ ಮತ್ತು ಊಟ ಪೂರೈಸಲು ಪ್ರಸ್ತುತ ಇರುವ ಸಮಯವನ್ನು ವಿಸ್ತರಿಸುವಂತೆ ಕೆಲ ಆಟೋ ಚಾಲಕರು, ಕ್ಯಾಬ್ ಡ್ರೈವರ್‌'ಗಳು ಮನವಿ ಮಾಡಿದರು.

ಮಧ್ಯಾಹ್ನದ ವೇಳೆಯಲ್ಲಿ ಸಾಮಾನ್ಯವಾಗಿ ಊಟಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ. ಇಂದಿರಾ ಕ್ಯಾಂಟೀನ್‌'ಗಳಲ್ಲಿ ಮಧ್ಯಾಹ್ನ 12ರಿಂದಲೇ ಊಟ ಪೂರೈಕೆ ಆರಂಭಿಸುವುದರಿಂದ ಕೇವಲ 1ರಿಂದ ಒಂದೂವರೆ ಗಂಟೆಯಲ್ಲೇ ಊಟ ಖಾಲಿಯಾಗುತ್ತದೆ. ಆ ನಂತರ ಬಂದವರಿಗೆ ಊಟ ಸಿಗುತ್ತಿಲ್ಲ. ನಿತ್ಯ ಸಾಕಷ್ಟು ಜನ ಬಂದು ವಾಪಸ್ ಹೋಗುತ್ತಾರೆ. ಹಾಗಾಗಿ ಪೂರೈಸುತ್ತಿರುವ ಊಟದ ಸಂಖ್ಯೆ ಹೆಚ್ಚಿಸಿ, ಸಮಯವನ್ನು 3.30ರವರೆಗೆ ವಿಸ್ತರಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಆಯುಕ್ತರು, ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.

ಇಂದಿರಾ ಕ್ಯಾಂಟೀನ್‌'ಗಳಲ್ಲಿ ನೀಡಲಾಗುವ ಊಟ, ಉಪಾಹಾರದ ತೂಕದ ಪ್ರಮಾಣ ನಿಗದಿಗಿಂತ ಕಡಿಮೆ ಇದೆ ಎನಿಸಿದರೆ ಫಲಾನುಭವಿಗಳು ಕ್ಯಾಂಟೀನ್‌'ನಲ್ಲೇ ಲಭ್ಯವಿರುವ ತೂಕದ ಯಂತ್ರದಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಇದೇ ವೇಳೆ ಆಯುಕ್ತರು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು. ಪ್ರತಿ ಇಂದಿರಾ ಕ್ಯಾಂಟೀನ್‌'ನಲ್ಲಿ ಸ್ಪಷ್ಟ ವಾಗಿ ಕಾಣುವಂತೆ ಪೂರೈಸುವ ಆಹಾರದ ಪಟ್ಟಿ ಮತ್ತು ಪ್ರಮಾಣವನ್ನು ಪ್ರಕಟಿಸಲಾಗಿರುತ್ತದೆ. ಊಟ, ಉಪಾಹಾರದ ಪ್ರಮಾಣ ಕಡಿಮೆ ಇರುವ ಅನುಮಾನ ಬಂದರೆ ಪ್ರತಿ ಕ್ಯಾಂಟೀನ್‌'ನಲ್ಲೂ ಇರುವ ಸಣ್ಣ ಎಲೆಕ್ಟ್ರಾನಿಕ್ ತೂಕದ ಯಂತ್ರದಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದರು.

click me!