'ಸಿದ್ದುಗೆ ಕೆಲಸವಿಲ್ಲ, ಹೀಗಾಗಿ ಎಲೆಕ್ಷನ್‌ ಬಗ್ಗೆ ಮಾತಾಡ್ತಾರೆ'

By Web DeskFirst Published Sep 4, 2019, 7:56 AM IST
Highlights

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಮಾಡಲು ಕೆಲಸ ಇಲ್ಲ. ಆದ್ದರಿಂದ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಾರೆ. ಅವರ ಬಯಕೆ ಎಂದಿಗೂ ಈಡೇರುವುದಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

ಬೆಂಗಳೂರು [ಸೆ.04]: ಅಧಿಕಾರ ಕಳೆದುಕೊಂಡ ನಂತರ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೆ ಕೆಲಸ ಇಲ್ಲ. ಹಾಗಾಗಿ ಅವರು ಮಧ್ಯಂತರ ಚುನಾವಣೆ ನಿರೀಕ್ಷೆಯಲ್ಲಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ವ್ಯಂಗ್ಯವಾಡಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾವಾಗ ಭವಿಷ್ಯಗಾರರಾದರೋ ಗೊತ್ತಿಲ್ಲ. ಸರ್ಕಾರ ಹೋದ ಮೇಲೆ ಸಿದ್ದರಾಮಯ್ಯ ಖಾಲಿ ಆಗಿದ್ದಾರೆ. 

ಅದಕ್ಕಾಗಿ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವುದಿಲ್ಲ, ಅವರ ಕನಸು ನನಸಾಗುವುದಿಲ್ಲ ಎಂದು ಲೇವಡಿ ಮಾಡಿದರು.

ಕೇಂದ್ರ ಸರ್ಕಾರ ರಾಜಕೀಯ ದ್ವೇಷದಿಂದ ತಮಗೆ ಕಿರುಕುಳ ನೀಡುತ್ತಿದೆ ಎಂಬ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್‌, ಅವರ ವಿರುದ್ಧ ತನಿಖೆ ನಡೆಯುತ್ತಿರುವುದರಿಂದ ಅಂತಹ ಭಾವನೆ ಬಂದಿರಬಹುದು. ಅದಕ್ಕೆ ನಾವೇನೂ ಮಾಡಲು ಆಗುವುದಿಲ್ಲ. 

ಇಡಿ, ಸಿಬಿಐ, ಐಟಿ ಇಲಾಖೆಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಂಡಿಲ್ಲ. ಶಿವಕುಮಾರ್‌ ವಿರುದ್ಧ ಬಹಳ ದಿನಗಳಿಂದ ಪ್ರಕರಣ ನಡೆಯುತ್ತಿದೆ. ಇದು ನಿನ್ನೆ ಮೊನ್ನೆಯದಲ್ಲ. ಹೀಗಿರುವಾಗ ಈ ಸಂಸ್ಥೆಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.

click me!