ಜೈನ ಮುನಿಯೊಬ್ಬರ ಮೇಲೆ ಹಲ್ಲೆ?

By Suvarna Web DeskFirst Published Mar 22, 2018, 10:07 AM IST
Highlights

ಕರ್ನಾಟಕದಲ್ಲಿ ಜೈನಮುನಿಯೊಬ್ಬರ ಮೇಲೆ ಇಸ್ಲಾಂ ಮತಾವಲಂಬಿಗಳಿಂದ ದಾಳಿ ನಡೆದಿದೆ. ಸಿದ್ದರಾಮಯ್ಯ ಸರ್ಕಾರದ ಅಧೀನದಲ್ಲಿ ಕರ್ನಾಟಕದಲ್ಲಿ ಯಾರೂ ಸುರಕ್ಷಿತವಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶವೊಂದು ಇತ್ತೀಚೆಗೆ ಹರಿದಾಡುತ್ತ ವೈರಲ್‌ ಆಗಿತ್ತು.

ಬೆಂಗಳೂರು (ಮಾ.22): ಕರ್ನಾಟಕದಲ್ಲಿ ಜೈನಮುನಿಯೊಬ್ಬರ ಮೇಲೆ ಇಸ್ಲಾಂ ಮತಾವಲಂಬಿಗಳಿಂದ ದಾಳಿ ನಡೆದಿದೆ. ಸಿದ್ದರಾಮಯ್ಯ ಸರ್ಕಾರದ ಅಧೀನದಲ್ಲಿ ಕರ್ನಾಟಕದಲ್ಲಿ ಯಾರೂ ಸುರಕ್ಷಿತವಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶವೊಂದು ಇತ್ತೀಚೆಗೆ ಹರಿದಾಡುತ್ತ ವೈರಲ್‌ ಆಗಿತ್ತು.

ವೆಬ್‌ ಸುದ್ದಿಮಾಧ್ಯಮವೊಂದು ಈ ಕುರಿತಂತೆ ವರದಿ ಮಾಡಿತ್ತು. ಇದರಲ್ಲಿ ಜೈನ ಮುನಿಯ ಭುಜ ಹಾಗೂ ಮೈಗೆ ಗಾಯಗಳಾಗಿರುವ ಫೋಟೋವೊಂದನ್ನು ಲಗತ್ತಿಸಲಾಗಿತ್ತು. ಇದನ್ನು ಸಾವಿರಾರು ಮಂದಿ ಶೇರ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಸುದ್ದಿ ನಿಜವೇ ಅಥವಾ ಸುಳ್ಳೇ ಎಂಬುದನ್ನು ಪರಿಶೀಲಿಸಲು ‘ಆಲ್ಟ್‌ ನ್ಯೂಸ್‌’ ಎಂಬ ಸುದ್ದಿ ಮಾಧ್ಯಮ ಮುಂದಾಯಿತು. ನಿಜವಾಗಿಯೂ ಜೈನ ಮುನಿಯ ಮೇಲೆ ದಾಳಿ ನಡೆದಿದೆಯೇ? ದಾಳಿ ಮಾಡಿದವರು ಇಸ್ಲಾಂ ಮತಾವಲಂಬಿ ಯುವಕರೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ ಜನರಿಗೆ ಸತ್ಯಾಸತ್ಯತೆ ತಿಳಿಸಲು ನಿರ್ಧರಿಸಿತು.

ಈ ಸುದ್ದಿಯ ಜಾಡು ಹಿಡಿದು ಹೊರಟಾಗ ಮಯಾಂಕ್‌ ಸಾಗರ್‌ ಎಂಬ ಜೈನ ಮುನಿಯು ಲಘು ಅಪಘಾತಕ್ಕೆ ಗುರಿಯಾಗಿದ್ದು ಕಂಡುಬಂತು. ಈ ಅಪಘಾತದಲ್ಲಿ ಅವರ ಭುಜಕ್ಕೆ ನೋವಾಗಿತ್ತು. ರಸ್ತೆಯಲ್ಲಿ ಅವರು ಸಾಗುತ್ತಿರುವಾಗ ಬೈಕೊಂದು ಗುದ್ದಿ ಅವರು ಗಾಯಗೊಂಡಿದ್ದರು. ಎರಡು ವಾರಗಳ ಹಿಂದೆ ಬೆಂಗಳೂರು ಸಮೀಪದಲ್ಲಿರುವ ಕನಕಪುರದಲ್ಲಿ ಈ ಘಟನೆ ನಡೆದಿತ್ತು. ಈಗ ಈ ಅಪಘಾತದಿಂದ ಮಯಾಂಕ್‌ ಸಾಗರ್‌ ಮಹಾರಾಜರು ಚೇತರಿಸಿಕೊಳ್ಳುತ್ತಿದ್ದಾರೆ ಎಂದೂ ತಿಳಿದುಬಂತು.

ಹೀಗಾಗಿ ಜೈನ ಮುನಿಯ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮವೊಂದರ ಸುದ್ದಿ ಸುಳ್ಳು ಎಂದು ಸಾಬೀತಾಯಿತು ಎಂದು ವರದಿ ಮಾಡಿದೆ ‘ಆಲ್ಟ್‌ ನ್ಯೂಸ್‌’.

click me!